'ಗಟ್ಟಿಮೇಳ'ದ ಮಹತಿ ವೈಷ್ಣವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋ ಧಾರಾವಾಹಿ ಬಗ್ಗೆ ನಿಮಗೆ ಗೊತ್ತೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ರೇಣು ಮಹಾರಾಜನ ಮಗಳು ರೇಣುಕೆ ಬೆಳೆದು ದೊಡ್ಡವಳಾಗಿದ್ದಾಳೆ. ಯುವರಾಣಿ ರೇಣುಕೆಯ ಪಾತ್ರದಲ್ಲಿ ಮಹತಿ ವೈಷ್ಣವಿ ಅಭಿನಯಿಸುತ್ತಿದ್ದಾರೆ. ಅದ್ಭುತವಾಗಿ ನಟಿಸಿ ರೇಣುಕೆಯ ಪಾತ್ರಕ್ಕೆ ಜೀವ ತುಂಬುತ್ತಿರುವ ಮಹತಿ ವೈಷ್ಣವಿ ಕಿರುತೆರೆಗೆ ಕಾಲಿಟ್ಟಿದ್ದು ರಿಯಾಲಿಟಿ ಶೋ ಮೂಲಕ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ರಾಮಾ ಜ್ಯೂನಿಯರ್ಸ್'ನ ಸೀಸನ್ 1 ಸ್ಪರ್ಧಿಯಾಗಿ ಮಹತಿ ಕಿರುತೆರೆಗೆ ಕಾಲಿಟ್ಟಾಗ ಐದನೇ ತರಗತಿಯ ವಿದ್ಯಾರ್ಥಿನಿ. ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಫೈನಲ್‌ನ ತನಕ ಬಂದಿದ್ದ ಈಕೆ ಮುಂದೆ ಸಿನಿಮಾದಲ್ಲಿ ನಟಿಸಿದ್ದರು. 'ನಾವು ಎಳೆಯರು ನಾವು ಗೆಳೆಯರು' ಸಿನಿಮಾದಲ್ಲಿ ಮಹತಿ ವೈಷ್ಣವಿ ಬಣ್ಣ ಹಚ್ಚಿದ್ದು ಆ ಸಿನಿಮಾಕ್ಕೆ 'ಉತ್ತಮ ಮಕ್ಕಳ ಚಿತ್ರ' ಪ್ರಶಸ್ತಿ ಕೂಡಾ ಲಭಿಸಿತ್ತು.

'ಗಟ್ಟಿಮೇಳ' ಧಾರಾವಾಹಿಯ ಅಂಜಲಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮಹತಿ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಉತ್ತಮ ಸಹೋದರಿ ಪ್ರಶಸ್ತಿ ಪಡೆದಿರುವ ಮಹತಿ ಸ್ಯಾಂಡಲ್‌ವುಡ್‌ನಲ್ಲೂ ಮೋಡಿ ಮಾಡಿದ ಪೋರಿ.
ಕಳೆದ ವರ್ಷ ತೆರೆಕಂಡ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಸರ್ಜಾ ನಟನೆಯ 'ತತ್ಸಮ ತದ್ಭವ' ಸಿನಿಮಾದಲ್ಲಿ ಮಹತಿ ಅಭಿನಯಿಸಿದ್ದು ಮೇಘನಾ ರಾಜ್ ಸರ್ಜಾ ಮಗಳಾಗಿ ಕಾಣಿಸಿಕೊಂಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಆಕೆ ಸಣ್ಣ ಗ್ಯಾಪ್‌ನ ನಂತರ ಮರಳಿ ಬಂದಿದ್ದಾರೆ. ಮಾತ್ರವಲ್ಲ ಇದೀಗ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತಾನಾಡಿರುವ ಮಹತಿ "ನಾನು ಇದೇ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ. ಇದಕ್ಕಿಂತ ಮೊದಲು ಗಟ್ಟಿಮೇಳ ಧಾರಾವಾಹಿಯ ಅಂಜಲಿಯಾಗಿ ನಾನು ನಟಿಸಿದ್ದು ಆ ಪಾತ್ರ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಮುಂದಿನ ದಿನಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ನನಗಿತ್ತು. ರೇಣುಕೆ ಪಾತ್ರದಿಂದ ಆ ಹಂಬಲ ಈಡೇರಿದೆ" ಎಂದು ಮಹತಿ ವೈಷ್ಣವಿ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ "ಇದೇ ಮೊದಲ ಬಾರಿಗೆ ನಾನು ಕಿರುತೆರೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅದು ದೇವಿಯಾಗಿ. ಖುಷಿಯಾಗುತ್ತಿದೆ. ಪೌರಾಣಿಕ ಪಾತ್ರದಲ್ಲಿ ಅಭಿನಯಿಸುವುದು ಸುಲಭದ ಮಾತಲ್ಲ. ಪ್ರತಿದಿನವೂ ಕಲಿಯುವುದಕ್ಕೆ ಅವಕಾಶ ಇರುತ್ತದೆ. ರೇಣುಕೆಯ ಪಾತ್ರಕ್ಕಾಗಿ ನಾನು ಹಲವು ವಿಷಯಗಳನ್ನು ಕಲಿತಿದ್ದೇನೆ. ಕತ್ತಿವರಸೆ, ಬಿಲ್ವಿದ್ಯೆ, ಕುದುರೆಸವಾರಿಗಳನ್ನು ಕಲಿತುಕೊಂಡಿದ್ದೇನೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಹತಿ ವೈಷ್ಣವಿ ಹಂಚಿಕೊಂಡಿದ್ದಾರೆ.
"ವಿದ್ಯಾವಂತೆಯಾಗಿರುವ ರೇಣುಕೆ ಮುಗ್ಧೆಯೂ ಹೌದು. ಧೈರ್ಯವಂತೆಯಾಗಿರುವ ಆಕೆ ಯಾವುದೇ ಕಷ್ಟಗಳು ಎದುರಾದರೂ ಅದನ್ನು ನಿಭಾಯಿಸುವ ಗಟ್ಟಿಗಿತ್ತಿ. ಎಲ್ಲಾ ರಸಗಳು ಒಂದೇ ಪಾತ್ರದಲ್ಲಿ ಅಡಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದರ ಜೊತೆಗೆ ರೇಣುಕೆ ಪಾತ್ರದಲ್ಲಿ ಹಳೆಗನ್ನಡವನ್ನು ಮಾತನಾಡಲು ಇರುವ ಕಾರಣ ಅದನ್ನು ಕೂಡಾ ಕಲಿತಿರುವೆ" ಎಂದು ಹೇಳಿಕೊಂಡಿದ್ದಾರೆ ಮಹತಿ.
ಇತ್ತೀಚೆಗಷ್ಟೇ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿರುವ ಮಹತಿ ವೈಷ್ಣವಿಗೆ ನಟನೆಯೇ ವೃತ್ತಿ ಎಂದರೆ ತಪ್ಪಾಗಲಾರದು. ಆದರೆ ಶಿಕ್ಷಣಕ್ಕೂ ಪ್ರಾಶಸ್ತ್ಯ ನೀಡಬೇಕು ಎಂಬುದು ಆಕೆಯ ಮಾತು. ಹಾಗಾಗಿ ನಟನೆ ಮತ್ತು ಓದನ್ನು ಸರಿದೂಗಿಸಿಕೊಂಡು ಸಾಗುತ್ತಿರುವ ಮಹತಿಗೆ ತೆರೆಯ ಹಿಂದಿನ ಕೆಲಸದ ಬಗ್ಗೆ ಆಸಕ್ತಿ ಇದೆ. ನಿರ್ಮಾಣವನ್ನು ಕಲಿಯಲು ಆಸಕ್ತಿಯನ್ನು ಹೊಂದಿರುವ ಆಕೆ ಮುಂದೊಂದು ದಿನ ಆ ಕ್ಷೇತ್ರದಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











