14ವರ್ಷದ ದಾಂಪತ್ಯ ಅಂತ್ಯ ; ಎರಡು ದೇಹ,ಆತ್ಮ ಒಂದೇ- ಡಿವೋರ್ಸ್ ಆದ 7 ದಿನದಲ್ಲೇ ಸಲ್ಮಾನ್ ಖಾನ್ ಆಪ್ತನಿಗೆ ಮನಸೋತ ನಟಿ?
ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ. ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಅದರಲ್ಲಿಯೂ ರಂಗೀನ್ ಲೋಕದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ.
ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ. ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ಇನ್ನು ಮೊದಲೆಲ್ಲ ಪ್ರೀತಿಯಲ್ಲಿ ವಿರಹ ವೇದನೆ ಕಾಡಿದಾಗ ಆ ನೋವು ಅನೇಕರಿಗೆ ವರ್ಷಾನು ವರ್ಷ ಕಾಡುತ್ತಿತ್ತು. ಇನ್ನೂ ಕೆಲವರಿಗೆ ಮಾನಸಿಕ ಖಿನ್ನತೆಗೆ ಕೂಡ ಆ ನೋವು ದೂಡುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಯಾವ ಲವಲೇಶವೂ ಕೂಡ ಇವರ ಮುಖದಲ್ಲಿ ಕಾಣಿಸುವುದಿಲ್ಲ. ಈ ಸಾಲಿನಲ್ಲಿ ಮಹಿ ವಿಜ್ ಕೂಡ ಇದ್ದಾರಾ..? ಸದ್ಯ ಮಹಿ ವಿಜ್ ಪೋಸ್ಟ್ ಇಂತಹದ್ದೇ ಒಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮಹಿಯ ನಡೆಯಿಂದ ಅಭಿಮಾನಿಗಳಿಗೆ ಆಘಾತವೂ ಆಗಿದೆ.
ಹೌದು, ಮಹಿ ವಿಜ್ ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.
ಇಂಥಾ ಮಹಿ ವಿಜ್ ಮನಸಾರೆ ಮೆಚ್ಚಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ ಜೈ ಭಾನುಶಾಲಿ ಅವರನ್ನು ಮದುವೆಯಾಗಿದ್ದರು. 2010-11ರ ಆಸು ಪಾಸು ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಇಬ್ಬರು ಅನೋನ್ಯವಾಗಿಯೇ ಇದ್ದರು. ಇವರ ಇಬ್ಬರ ಅಭಿಮಾನಿಗಳು ಕೂಡ ಆದರ್ಶ ದಂಪತಿಗಳೆಂದೇ ಕರೆಯುತ್ತಿದ್ದರು.
ಆದರೆ, ಅದೇನಾಯ್ತೋ..? ಈ ವರ್ಷದ ಆರಂಭದಲ್ಲಿಯೇ ಇಬ್ಬರು ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಇನ್ಮುಂದೆ ನಾವು ಇಬ್ಬರು ದೂರ ಎಂಬ ಸಂದೇಶವನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮೂಲಕ ರವಾನೆ ಮಾಡಿದರು. ಈ ಸುದ್ದಿ ಕೇಳಿ ಅಭಿಮಾನಿಗಳು ಬೇಸರಗೊಂಡಿದ್ದರು. ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸಿ ಎಂಬ ಮನವಿಯನ್ನು ಮಾಡಿಕೊಳ್ಳುತ್ತಿದ್ದರು.

ಹೀಗಿರುವಾಗ ವಿಚ್ಛೇದನ ಘೋಷಿಸಿ ಒಂದು ವಾರದಲ್ಲಿ ಮಹಿ ವಿಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ನೇಹಿತ ನದೀಮ್ ಅವರಿಗೆ ಬರ್ತ್‌ಡೇ ಶುಭಾಶಯ ಹೇಳಿದ್ದಾರೆ. ಇಷ್ಟೇ ಆಗಿದ್ದರೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಭಿಮಾನಿಗಳು ನೊಂದುಕೊಳ್ಳುತ್ತಿರಲಿಲ್ಲ.
ಆದರೆ. ಮಹಿ ವಿಜ್ ತಮ್ಮ ಈ ಪೋಸ್ಟ್‌ನಲ್ಲಿ ಎರಡು ದೇಹ ಒಂದೇ ಆತ್ಮ ಎಂದು ಬರೆದಿದ್ದಾರೆ. ಎಂದೆಂದಿಗೂ ನನ್ನವನು ಎಂದಿದ್ದಾರೆ. ಇಷ್ಟೇ ಅಲ್ಲ ಐ ಲವ್ ಯೂ ನದೀಮ್ ಎಂದು ಕೂಡ ಬರೆದಿರುವ ಮಹಿ ವಿಜ್ ನೀವೇ ನನ್ನ ಆಧಾರ, ನೀವೇ ನನ್ನ ಶಕ್ತಿ, ನೀವೇ ನನ್ನ ಶಾಶ್ವತ ಸಂಗಾತಿ ಎಂದೆಲ್ಲ ತಮ್ಮ ಸುದೀರ್ಘವಾದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು 2019ರಲ್ಲಿ ಮಹಿ ವಿಜ್ ಮತ್ತು ಜೈ ಭಾನುಶಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗಳಿಗೆ ತಾರಾ ಎಂದು ನಾಮಕರಣವನ್ನು ಮಾಡಿದರು. ವಿಶೇಷ ಅಂದರೆ ಮಹಿ ಮಗಳು ತಾರಾ ಕೂಡ ನದೀಮ್ ಅವರನ್ನು ಹಚ್ಚಿಕೊಂಡಿದ್ದಾಳೆ. ನದೀಮ್ ಅವರನ್ನು ಅಬ್ಬಾ ಎಂದು ಕರೆಯುತ್ತಾಳೆ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಅಚ್ಚರಿ ಮೂಡಿಸಿದೆ. ಈ ಕುರಿತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಅಂದ್ಹಾಗೇ ಮಹಿ ವಿಜ್ ಅವರ ಬೆನ್ನೆಲುಬಾದ ನದೀಮ್ ಬೇರೆ ಯಾರು ಅಲ್ಲ ಬದಲಿಗೆ ಸಲ್ಮಾನ್ ಖಾನ್ ಅವರಬಾಲ್ಯದ ಸ್ನೇಹಿತ ಮತ್ತು ಅತ್ಯಂತ ನಂಬಿಕಸ್ತ. ಸಲ್ಮಾನ್ ಖಾನ್ ಒಡೆತನದ 'ಸಲ್ಮಾನ್ ಖಾನ್ ಟೆಲಿವಿಷನ್' (SKTV) ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟನರ್ ಕೂಡ ಹೌದು ನದೀಮ್. ಚಿತ್ರರಂಗದ ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ನದೀಮ್ ಸಕ್ರಿಯರಾಗಿದ್ದು, ಸಲ್ಮಾನ್ ಖಾನ್ ಅವರ ಪ್ರತಿಯೊಂದು ಮಹತ್ವದ ನಿರ್ಧಾರಗಳಲ್ಲೂ ಇವರ ಪಾತ್ರವಿರುತ್ತೆ.
ಒಟ್ನಲ್ಲಿ ಜೈ ಭಾನುಶಾಲಿ ಜೊತೆ 14 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಮಹಿ ವಿಜ್, ಈಗ ನದೀಮ್ ಅವರ ಕುರಿತು ವಿಶೇಷವಾದ ಬರಹವನ್ನು ಬರೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಹೊಸ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಇವರ ಈ ಸ್ನೇಹ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











