ಇಂಚರಾ ಜೋಶಿ ಪಾಲಿಗೆ ಕಮರಿದ 'ಆಸೆ' ; ಇನ್ಮುಂದೆ ಶ್ರುತಿ ಪಾತ್ರದಲ್ಲಿ ಮಿಂಚಲಿದ್ದಾರೆ 'ಬ್ರಹ್ಮಗಂಟು' ಕಾವ್ಯ ರಮೇಶ್
ಕಿರುತೆರೆಯಲ್ಲಿ ಒಮ್ಮೊಮ್ಮೆ ಪ್ರೇಕ್ಷಕರ ಹೃದಯ ಗೆದ್ದ ಪಾತ್ರಗಳು ಏಕಾಏಕಿ ಕಣ್ಮರೆಯಾಗುತ್ತಾವೆ. ಇನ್ನೂ ಕೆಲ ಒಮ್ಮೆ ಆ ಪಾತ್ರಧಾರಿಗಳೇ ಬದಲಾಗುತ್ತಾರೆ. ಆ ಜಾಗಕ್ಕೆ ಬೇರೊಬ್ಬರು ಬರುತ್ತಾರೆ. ಕೆಲವರು ಸಂಭಾವನೆ ವಿಚಾರದಿಂದ ಧಾರಾವಾಹಿಯಿಂದ ಹೊರ ಬಂದರೆ, ಇನ್ನೂ ಕೆಲವರು ಧಾರಾವಾಹಿಯ ವಾತಾವರಣ ಇಷ್ಟವಾಗದೇ ಹೊರ ಬರುತ್ತಾರೆ.
ಕೆಲವರು ಕಿರಿಕ್ ಮಾಡಿಕೊಂಡು ತಮಗೆ ಹೆಸರು ನೀಡಿದ ಧಾರಾವಾಹಿಗೆ ಗುಡ್ ಬೈ ಹೇಳಿದರೆ, ಮತ್ತೂ ಕೆಲವರು ಸದ್ಯ ನಿರ್ವಹಿಸುತ್ತಿರುವ ಪಾತ್ರಕ್ಕಿಂತ ಉತ್ತಮವಾದ ಪಾತ್ರ ಸಿಕ್ಕಿದೆ ಎಂದು ಹೊರ ಬರುತ್ತಾರೆ. ಅಲ್ಲಿದ್ದವರು ಇಲ್ಲಿ, ಇಲ್ಲಿದ್ದವರು ಅಲ್ಲಿ.. ಒಟ್ನಲ್ಲಿ ಕಿರುತೆರೆಯಲ್ಲಿ ಈ ಮ್ಯೂಸಿಕಲ್ ಚೇರ್ ನಡೆಯುತ್ತಲೇ ಇರುತ್ತೆ. ಬದಲಾವಣೆ ಜಗದ ನಿಯಮ. ಉದಾಹರಣೆಗೆ ''ಆಸೆ'' ಧಾರಾವಾಹಿ ಸುತ್ತ ಮುತ್ತ ನಡೆದ ಬೆಳವಣಿಗೆಯನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಆಸೆ'' ಧಾರಾವಾಹಿಯಲ್ಲಿ ರೋಹಿಣಿ ಎಂಬ ಪವರ್ ಫುಲ್ ಪಾತ್ರವನ್ನು ಈ ವರ್ಷದ ಆರಂಭದವರೆಗೆ ''ಕುಲವಧು'' .. ''ಕಸ್ತೂರಿ ನಿವಾಸ'' .. ಧಾರಾವಾಹಿಗಳ ಮೂಲಕ ಮನೆ ಮಾತಾದ, ''ಮಿಸ್ಟರ್ & ಮಿಸೆಸ್ ರಂಗೇಗೌಡ'' .. ''ಮೇಘ ಮಯೂರಿ''.. ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡು ಗಮನ ಸೆಳೆದ ಅಮೃತಾ ರಾಮಮೂರ್ತಿ ಮಾಡುತ್ತಿದ್ದರು.
ಆದರೆ.. ಅದೇನಾಯ್ತು ಗೊತ್ತಿಲ್ಲ. ಕಳೆದ ವರ್ಷಾಂತ್ಯದಲ್ಲಿ ಅಮೃತಾ ಏಕಾಏಕಿ ''ಆಸೆ'' ಜೊತೆಗಿನ ತಮ್ಮ ಸಂಬಂಧ ಕಡಿದುಕೊಂಡರು. ಧಾರಾವಾಹಿಯಿಂದ ಹೊರ ಬಂದರು. ಇವರ ಜಾಗಕ್ಕೆ ಸದ್ಯ ಅಭಿಜ್ಞಾ ಭಟ್ ಬಂದಿದ್ದಾರೆ. ರೋಹಿಣಿ ಪಾತ್ರಕ್ಕೆ ಜೀವ ತುಂಬುತ್ತಿದ್ಧಾರೆ. ಈಗ ಇಂಚರಾ ಜೋಶಿ ಹೊರ ಹೋಗುವ ಸಮಯ.
ಹೌದು, ಇಂಚರಾ ಜೋಶಿ.. "ಮರಳಿ ಬಂದಳು ಸೀತೆ'' ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದ ಬೆಂಗಳೂರಿನ ಬೆಡಗಿ. ''ರಂಗನಾಯಕಿ''.. ''ಭೂಮಿ ತಾಯಾಣೆ''.. ''ಕಥೆಯೊಂದು ಶುರುವಾಗಿದೆ'' ಧಾರಾವಾಹಿಗಳಲ್ಲಿ ಈಗಾಗಲೇ ಮಿಂಚಿರುವ ಇಂಚರಾ ತೆಲುಗಿನಲ್ಲಿಯೂ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ಧಾರೆ.
ಇಂಥಾ ಇಂಚರಾ ಜೋಶಿ ''ಸ್ಟಾರ್ ಸುವರ್ಣ'' ದಲ್ಲಿ ಪ್ರಸಾರವಾಗುತ್ತಿರುವ ''ಆಸೆ'' ಧಾರಾವಾಹಿಯಲ್ಲಿ ಕಿರಿ ಸೊಸೆ ಪಾತ್ರ ನಿರ್ವಹಿಸುತ್ತಿದ್ದರು. ಆದರೆ.. ಅದೇನಾಯ್ತೋ ಕೆಲ ದಿನಗಳ ಹಿಂದೆಯಷ್ಟೇ ಇಂಚರಾ ಜೋಶಿ, ತಮಗೆ ಇನ್ನು ''ಆಸೆ'' ಧಾರಾವಾಹಿಯಲ್ಲಿ ಮುಂದುವರೆಯುವ ಆಸೆ ಇಲ್ಲ ಎಂದು ಹೇಳಿದ್ದರು. ಧಾರಾವಾಹಿಯಿಂದ ಹೊರ ಬರುತ್ತಿರುವ ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.
ಇಂಚರಾ ಅವರ ಈ ನಿರ್ಧಾರದಿಂದ ಹಲವರು ಬೇಸರಗೊಂಡಿದ್ದರು. ನಿಮ್ಮನ್ನ ಬಿಟ್ರೆ ಬೇರೆ ಯಾರು ಕೂಡ ಶ್ರುತಿ ಅನ್ನುವ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಿಲ್ಲ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು. ನೀವು ಬಿಡುತ್ತಿರುವುದರಿಂದ ನಮಗೆ ನೋವಾಗಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು.
ಆದರೆ ಶೋ ಮಸ್ಟ್ ಗೋ ಆನ್. ಸದ್ಯ ಇಂಚರಾ ಅವರ ಜಾಗಕ್ಕೆ ಕಾವ್ಯಾ ರಮೇಶ್ ಬಂದಿದ್ದಾರೆ. ಶ್ರುತಿ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಭರವಸೆಯೊಂದಿಗೆ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.

ಈಗಾಗಲೇ, ಕಾವ್ಯ ರಮೇಶ್ ಅವರನ್ನೊಳಗೊಂಡಿರುವ''ಆಸೆ'' ಧಾರಾವಾಹಿಯ ಸಂಚಿಕೆ ಪ್ರಸಾರವಾಗುತ್ತಿದೆ. ಶ್ರುತಿ ಪಾತ್ರಕ್ಕೆ ಕಾವ್ಯಾ ಎಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸುತ್ತಾರೆ..? ಇಂಚರಾ ಅವರ ಮೇಲೆ ಪ್ರೀತಿಯ ಸುರಿಮಳೆಗೈದ ಪ್ರೇಕ್ಷಕರು ಶ್ರುತಿ ಪಾತ್ರದಲ್ಲಿ ಕಾವ್ಯಾ ರಮೇಶ್ ಅವರನ್ನು ಕೂಡ ಒಪ್ಪಿ ಅಪ್ಪುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನುಳಿದಂತೆ ಕಾವ್ಯ ರಮೇಶ್ ಹರಪ್ಪನಹಳ್ಳಿಯ ಚೆಲುವೆ. ತೀರಾ ಆಕ್ಮಸಿಕವಾಗಿ ಬಣ್ಣದ ಪ್ರಪಂಚಕ್ಕೆ ಬಂದ ಕಾವ್ಯ ''ಮಾಂಗಲ್ಯಂ ತಂತುನಾನೇನ''.. ''ಗೌರಿಶಂಕರ''.. ''ಸೀತಾ ವಲ್ಲಭ''..ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ''ಬ್ರಹ್ಮಗಂಟು'' ಧಾರಾವಾಹಿಯಲ್ಲಿ ರೂಪಾ ಎಂಬ ಪಾತ್ರವನ್ನು ಕಾವ್ಯ ಮಾಡುತ್ತಿದ್ದು, ಈ ಪಾತ್ರದಲ್ಲಿ ಕಾವ್ಯ ಮುಂಬರುವ ದಿನಗಳಲ್ಲಿ ಮುಂದುವರೆಯುತ್ತಾರಾ..? ಎನ್ನುವುದನ್ನು ನೋಡಬೇಕಿದೆ.


Click it and Unblock the Notifications