ಪಾತ್ರ ಚಿಕ್ಕದಾದರೂ ಪಾತ್ರದ ಪ್ರಭಾವ ದೊಡ್ಡದಿರಬೇಕು ಎಂದ ಮಾನಸ ಮನೋಹರ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಲಕ್ಷ್ಮಿ ನಿವಾಸ" ಧಾರಾವಾಹಿ ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಧಾರಾವಾಹಿಗಳಲ್ಲೊಂದು. ಬಹುದೊಡ್ಡ ತಾರಾಗಣವನ್ನೇ ಹೊಂದಿರುವ ಈ ಧಾರಾವಾಹಿ ಈಗಂತೂ ಬಹಳಷ್ಟು ಟ್ವಿಸ್ಟ್ ಗಳಿಂದ ಮುಂದೆ ಸಾಗುತ್ತಿದೆ. ಈ ತಾರಾಗಣದಲ್ಲಿ ನಟಿ ಮಾನಸ ಮನೋಹರ್ ಕೂಡ ಒಬ್ಬರಾಗಿದ್ದು, ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದ ಹಾಗೇ ಸಿದ್ದೇಗೌಡರ ಅತ್ತಿಗೆ ಪಾತ್ರವನ್ನು ಮಾನಸಾ ಮಾಡುತ್ತಿದ್ದಾರೆ. ಭಾವನ ಹಾಗೂ ಸಿದ್ಧೇಗೌಡರ ಜೀವನದಲ್ಲಿ ಒಂದಷ್ಟು ಕೋಲಾಹಲ ತರಲು ಹಪಹಪಿಸುವ ಪಾತ್ರವಿದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಜನರ ಗಮನ ಸೆಳೆದಿರುವ ನಟಿ ಮಾನಸ ಮನೋಹರ ತಮ್ಮ ವೃತ್ತಿಜೀವನ ಹಾಗೂ ಇತರೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ಕಳೆದ ಹತ್ತು ಹನ್ನೆರಡು ವರ್ಷಗಳಿಂದಲೂ ಬಣ್ಣದ ಲೋಕದಲ್ಲಿದ್ದೇನೆ. ಮೊದಲಿಗೆ ರೇಡಿಯೋ ಜಾಕಿಯಾಗಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದೆ. ಎಂಬಿಎ ಮಾಡಿಕೊಂಡರೂ ನನಗೆ ವಿಜೆ ಹಾಗೂ ನಟನೆಯಲ್ಲಿಯೇ ಆಸಕ್ತಿ ಇತ್ತು. ನನ್ನ ವೃತ್ತಿ ಬದುಕಿನ ಆರಂಭದ ವರ್ಷದಲ್ಲಿ ಮಿಸ್ ಕರ್ನಾಟಕ ಪ್ರಶಸ್ತಿ ನನ್ನದಾಯ್ತು. ಒಂದು ವಾಹಿನಿಯಲ್ಲಿ ಇಂಟರ್ನಿ ಕೆಲಸ ಮಾಡುತ್ತಿರುವಾಗಲೇ ನಟನೆಗೆ ಆಡಿಶನ್ ಕೊಡಲು ಕೇಳಿದರು. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಇದ್ದರೂ ಸಹ ಪ್ರಯತ್ನ ಮಾಡಿರಲಿಲ್ಲ. ಹಾಗಾಗಿ ಆಡಿಷನ್ ಕೊಟ್ಟೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದರಿಂದ ನಟನೆ ಹಾಗೂ ವಾಹಿನಿಯ ಕೆಲಸವನ್ನು ಬ್ಯಾಲೆನ್ಸ್ ಮಾಡಲು ಆರಂಭಿಸಿದೆ ಎಂದರು.
ಟೆಕ್ನಿಕಲ್ ಟೀಮ್ ನಿಂದ ನಿಧಾನಕ್ಕೆ ನಟನೆಯತ್ತ ವಾಲಿದ ಸಂದರ್ಭವನ್ನು ನೆನಪಿಸಿಕೊಂಡ ನಟಿ ಮಾನಸ ಮನೋಹರ್ ನಮ್ಮ ಕಾರ್ಯಕ್ರಮವನ್ನು ಆರೂರು ಜಗದೀಶ್ ಅವರು ವೀಕ್ಷಿಸುತ್ತಿದ್ದರು. ಅವರು ನನಗೆ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರ ಮಾಡಲು ಕರೆದರು. ಆದರೆ ಆಗಲೇ ನನಗೆ ಕೈ ತುಂಬಾ ಒಂದಷ್ಟು ಜವಾಬ್ದಾರಿಗಳು ಇದ್ದದ್ದರಿಂದ ಒಪ್ಪಿಕೊಳ್ಳಲಿಲ್ಲ. ನಂತರ ಅದೇ ಪಾತ್ರವನ್ನು ರಿಪ್ಲೇಸ್ಮೆಂಟ್ ಆಗಿ ಕರೆದರು. ಆಗಲು ಸಾಧ್ಯವಾಗಲಿಲ್ಲ. ಅದೇ ಧಾರವಾಹಿಯಲ್ಲಿ ಪುಟ್ಟ ಪಾತ್ರ ಒಂದರಲ್ಲಿ ಕಾಣಿಸಿಕೊಂಡೆ ಎಂದು ಆಕೆ ಹೇಳಿಕೊಂಡಿದ್ದಾರೆ.
ನಂತರ ಗೌರೀಶ್ ಅಕ್ಕಿ ಅವರ ಸಿನಿಮಾ ಮೈ ಡಾರ್ಲಿಂಗ್ ಎಂಬ ಸಿನಿಮಾದಲ್ಲಿ ನಟಿಸಿದೆ. ಈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂತು. 2015 ಲವ್ ಸ್ಟೋರೀಸ್ ಎಂಬ ಮತ್ತೊಂದು ಸಿನಿಮಾದಲ್ಲಿಯೂ ನಟಿಸುವ ಅವಕಾಶ ಸಿಕ್ಕಿತು. ಇದೀಗ ನಟನೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ನಟಿ ಮಾನಸ ಮನೋಹರ್.
ಕಿರುತೆರೆ, ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿದ ನಟಿ ಮಾನಸ ಮನೋಹರ್ ರಿಯಾಲಿಟಿ ಶೋ ಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ಭಾಗವಹಿಸುತ್ತೇನೆ. ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕದಿಮಿತಾ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದೆ. ಧಾರಾವಾಹಿ, ಸಿನೆಮಾ, ಮಾಡಲಿಂಗ್, ಟೆಕ್ನಿಕಲ್ ಟೀಂ, ಆಡ್ ಶೂಟ್, ರಿಯಾಲಿಟಿ ಶೋ ಎಲ್ಲವೂ ಬೇರೆ ಬೇರೆ ಅನುಭವ ಇವುಗಳಲ್ಲಿ ಯಾವುದರಲ್ಲಿ ಅವಕಾಶ ಸಿಕ್ಕರೂ, ನಾನು ಹೋಗಲು ಸಿದ್ಧ ಎಂದಿದ್ದಾರೆ.
ನನಗೆ ಪಾತ್ರಗಳ ಬಗ್ಗೆ ಚೌಕಾಸಿ ಇಲ್ಲ. ಪಾತ್ರ ಚಿಕ್ಕದೇಯಾದರೂ ದೊಡ್ಡದೇಯಾದರೂ ಆ ಪಾತ್ರಕ್ಕೆ ಘನತೆ ಇರಬೇಕು. ಪಾತ್ರಕ್ಕೆ ಅದರದೇ ಆದ ಸ್ಕೋಪ್ ಇರಬೇಕು. ಆ ಪಾತ್ರದಿಂದ ಧಾರಾವಾಹಿ ಕಥೆಗೆ ಒಂದಷ್ಟು ಬೆಲೆ ಸಿಗಬೇಕು. ಅಂತಹ ಪಾತ್ರಗಳನ್ನು ನಾನು ಖುಷಿಯಿಂದ ಮಾಡುತ್ತೇನೆ. ನಟನೆ ಇರುವುದು ನನ್ನ ಪ್ಯಾಶನ್. ಪಾತ್ರ ಚಿಕ್ಕದಾದರೂ ಪಾತ್ರದ ಪ್ರಭಾವ ದೊಡ್ಡದಿರಬೇಕು. ಹಾಗಾಗಿ ನನಗೆ ಘನತೆ ಇರುವ ಪಾತ್ರಗಳೇ ಇಷ್ಟ ಎಂದಿದ್ದಾರೆ ನಟಿ ಮಾನಸ ಮನೋಹರ್.
ತಮ್ಮ ನೆಚ್ಚಿನ ಪಾತ್ರಗಳ ಬಗ್ಗೆ ಮಾತನಾಡಿದ ನಟಿ ಮಾನಸ ಮನೋಹರ್ ಶಾಂಭವಿ ಧಾರಾವಾಹಿಯಲ್ಲಿ ಶಾಂಭವಿ ಹಾಗೂ ಶಿವಗಾಮಿ ಎನ್ನುವ ದ್ವಿಪಾತ್ರ ಮಾಡುತ್ತಿದ್ದೇನೆ. ಈ ಎರಡು ಪಾತ್ರಗಳು ನನಗೆ ಅಚ್ಚುಮೆಚ್ಚು. ವಿಭಿನ್ನವಾದ ಕಥಾ ಅಂದರೆ ಹೊಂದಿರುವ ಈ ಧಾರಾವಾಹಿ ಹೆಣ್ಣು ಅಭಯ ಅಲ್ಲ ಸಬಲೆ ಎನ್ನುವುದನ್ನು ಡಿ ಗ್ಲಾಮರಸಾಗಿ ಬಹಳ ಚೆನ್ನಾಗಿ ತೋರಿಸುವ ಪ್ರಯತ್ನದಲ್ಲಿದ್ದಾರೆ. ನನಗೆ ಈ ಪಾತ್ರ ಬಹಳ ಚಾಲೆಂಜಿಂಗ್ ಆಗಿದ್ದು, ವೈಯಕ್ತಿಕ ಜೀವನಕ್ಕೂ ಹತ್ತಿರವಾದಂತ ಪಾತ್ರ ಎಂದು ಹೇಳಿದ್ದಾರೆ.
ನಾನು ನನ್ನ ಜೀವನದಲ್ಲೂ ಹಲವಾರು ರೀತಿಯ ಚಾಲೆಂಜ್ ಗಳನ್ನ ಎದುರಿಸಿದ್ದೇನೆ. ಹಂತ ಹಂತವಾಗಿ ಇವೆಲ್ಲವುದರಿಂದ ಪಾಠ ಕಲಿತು ಮುಂದೆ ಬಂದಿದ್ದೇನೆ. ಚಿಕ್ಕಂದಿನಿಂದಲೂ ನನ್ನ ತಂದೆ ತಾಯಿ ಇದನ್ನು ಹೇಳಿಕೊಟ್ಟಿದ್ದಾರೆ. ನಾನು ಒಬ್ಬ ಹೆಣ್ಣು ಆದರೆ ಅಬಲೆ ಅಲ್ಲ. ಅಂತೆಯೇ ಈ ಪಾತ್ರವೂ ಅಂತಹದ್ದೇ ಒಳ್ಳೆಯ ಮೆಸೇಜನ್ನು ಸಮಾಜಕ್ಕೆ ಕೊಡುವ ಪ್ರಯತ್ನದಲ್ಲಿದೆ. ಹಾಗಾಗಿ ನನಗೆ ಈ ಪಾತ್ರ ಬಹಳ ಹಿಡಿಸಿದೆ. ಈ ಮೊದಲು ಜೊತೆ ಜೊತೆಯಲಿ ಧಾರಾವಾಹಿಯ ಮೀರ ಹೆಗಡೆ ಪಾತ್ರವನ್ನು ನಿಭಾಯಿಸಿದ್ದೆ. ಅದು ಕೂಡ ತುಂಬಾ ಒಳ್ಳೆಯ ಪಾತ್ರ. ಹೆಣ್ಣೊಬ್ಬಳು ಏನನ್ನು ಬೇಕಾದರೂ ಮಾಡಬಲ್ಲಳು ಎನ್ನುವಂತಹ ಉತ್ತಮ ಪಾತ್ರ ಅದಾಗಿತ್ತು. ನನಗೆ ಅಂತಹ ಪಾತ್ರಗಳನ್ನು ಮಾಡಲು ಇಷ್ಟ. ಬದಲಿಗೆ ಅಳುಮುಂಜಿಯಾಗಿ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು, ಕೆಟ್ಟವರಿಗು ಒಳ್ಳೆಯತನವನ್ನೇ ತೋರಿಸುವ ಪಾತ್ರಗಳು ನನಗೂ ಅಷ್ಟು ಇಷ್ಟವಿಲ್ಲ. ವೈಯಕ್ತಿಕ ಜೀವನದಲ್ಲೂ ನಾನು ಆ ರೀತಿ ಇರಲು ಬಯಸುವುದಿಲ್ಲ. ಪ್ರಜೆ ಎಂದರೆ ವ್ಯಕ್ತಿ, ಅಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲ. ಸಮಾಜದಲ್ಲಿ ನಾವು ಒಳ್ಳೆಯ ವ್ಯಕ್ತಿಯಾಗಿ ಇರುವುದೊಂದೇ ಮುಖ್ಯ ಎಂದಿದ್ದಾರೆ ನಟಿ ಮಾನಸ ಮನೋಹರ್.


Click it and Unblock the Notifications











