Kavya Shree Photoshoot : ಬಿಗ್ ಬಾಸ್ ಕಾವ್ರಶ್ರೀ ಹೊಸ ಫೋಟೊಶೂಟ್ ಗುಟ್ಟೇನು? ಸಿನಿಮಾ ಎಂಟ್ರಿ ಕೊಡ್ತಾರಾ?
ಮಂಗಳಗೌರಿಯಾಗಿ ಕಿರುತೆರೆ ಅಂಗಳದಲ್ಲಿ ಮೋಡಿ ಮಾಡಿರುವ ಕಾವ್ಯಶ್ರೀ ಗೌಡ ಇದೀಗ ಹೊಸ ಅವತಾರದ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು. "ಮಂಗಳ ಗೌರಿ ಮದುವೆ" ಧಾರಾವಾಹಿಯಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳಾಗಿ ಅಭಿನಯಿಸಿದ ಕಾವ್ಯಶ್ರೀ ಗೌಡ ಇದೀಗ ಮಾಡರ್ನ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿ ಮಾಡುತ್ತಿದ್ದಾರೆ.
ಹಾಟ್ ಅವತಾರದ ಮೂಲಕ ಪಡ್ಡೆಹೈಕ್ಕಳ ದಿಲ್ ಕದ್ದಿರುವ ಕಾವ್ಯಶ್ರೀ ಅವರ ಹೊಸ ಅವತಾರವನ್ನು ಕಂಡರೆ ಇವರೇನಾ 'ಮಂಗಳಗೌರಿ'ಯಾಗಿ ನಟಿಸುತ್ತಿದ್ದವರು ಎಂದು ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ.
ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾವ್ಯಶ್ರೀ ನಾಯಕಿಯಾಗಿ ಬಡ್ತಿ ಪಡೆದಿದ್ದು 'ಮಂಗಳ ಗೌರಿ ಮದುವೆ' ಧಾರಾವಾಹಿಯ ಮೂಲಕ! ಎರಡನೇ ನಾಯಕಿಯಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬುವ ಅವಕಾಶ ಪಡೆದುಕೊಂಡ ಕಾವ್ಯಶ್ರೀ ಮುಂದೆ ಕರುನಾಡಿನ ಮನೆಮಗಳಾಗಿ ಗುರುತಿಸಿಕೊಂಡ ಬೆಡಗಿ.

ಪತ್ರಕರ್ತೆಯಾಗಬೇಕಿದ್ದವರು ಕಿರುತೆರೆಗೆ ಬಂದಿದ್ದೇಗೆ?
ಸಣ್ಣ ವಯಸ್ಸಿನಿಂದಲೂ ಬಣ್ಣದ ಜಗತ್ತಿನತ್ತ ವಿಶೇಷ ಒಲವು ಹೊಂದಿದ್ದ ಕಾವ್ಯಶ್ರೀ ಕಿರುತೆರೆ ಅಥವಾ ಹಿರಿತೆರೆಯಲ್ಲಿ ಅಭಿನಯಿಸಬೇಕು ಎಂದು ಬಯಸಿದ್ದರು. ಮನೆಯಲ್ಲಿ ಸಾಂಪ್ರದಾಯಿಕ ವಾತಾವರಣ ಇದ್ದ ಕಾರಣ ನಟನೆ ಎಂದಾವ ಮನೆಯವರು ಖಡಾಖಂಡಿತವಾಗಿ ಬೇಡ ಎಂದೇ ಹೇಳಿದ್ದರು. ಪತ್ರಿಕೋದ್ಯಮ ಪದವೀಧರೆಯಾಗಿರುವ ಕಾವ್ಯಶ್ರೀಗೆ ನಟನೆಯ ನಂಟು ಬಿಡಲು ಸಾಧ್ಯವಾಗದ ಕಾರಣ ನಟಿಯಾಗದಿದ್ದರೂ ಪರವಾಗಿಲ್ಲ, ನಿರೂಪಕಿಯಾದರೂ ಕಾಣಿಸಬೇಕು ಎಂಬ ಸಂಕಲ್ಪ ಮಾಡಿದರು. ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಕಾವ್ಯಶ್ರೀ ಬಿಡುವಿನ ಸಮಯದಲ್ಲಿ ಆಡಿಶನ್‌ಗೆ ಹೋಗುವುದನ್ನು ತಪ್ಪಿಸಲಿಲ್ಲ.

ನಟಿಯಾಗಿ ಬಡ್ತಿ ಪಡೆದಿದ್ಯಾವಾಗ?
ಕಲರ್ಸ್ ಸೂಪರ್‌ನಲ್ಲಿ ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾವ್ಯಶ್ರೀ ಕಾಲಿಟ್ಟಿದ್ದರು. ಬಳಿಕ ರಾಮ್ ಜೀ ನಿರ್ದೇಶನದ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕಿ ಮಂಗಳಗೌರಿಯಾಗಿ ನಟಿಸಿದ್ದಲ್ಲದೇ ಕರ್ನಾಟಕದಾದ್ಯಂತ ಫೇಮಸ್ಸು ಆಗಿ ಬಿಟ್ಟರು. ಮಂಗಳ ಗೌರಿ ಧಾರಾವಾಹಿ ಮುಗಿದ ನಂತರ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಾವ್ಯಶ್ರೀ, ದೊಡ್ಮನೆಯಲ್ಲಿ ಇದ್ದಷ್ಟು ದಿನ ತನ್ನ ಮಾತು, ನಡವಳಿಕೆ ಹಾಗೂ ಆಟದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಅದೃಷ್ಟ ಬದಲಿಸಿದ್ದು 'ಮಂಗಳಗೌರಿ'
"ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿ ನನ್ನ ಫೇವರಿಟ್. ಒಂದು ದಿನವೂ ತಪ್ಪದೇ ನೋಡುತ್ತಿದ್ದೆ. ನಂತರ ಅದೇ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟವೇ ಸರಿ. ಯಾಕೆಂದರೆ ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅನುಬಂಧ ಅವಾರ್ಡ್ಸ್‌ನಲ್ಲಿ ನಾನು ಪಡೆದ ಮನೆ ಮೆಚ್ಚಿದ ಮಗಳು ಪ್ರಶಸ್ತಿಯನ್ನು ಕೂಡಾ ನಾನು ಪಡೆದಿದ್ದು ಕಿರುತೆರೆ ವೀಕ್ಷಕರು ನನ್ನನ್ನು ಸ್ವೀಕರಿಸಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಹೇಳುತ್ತಾರೆ ಕಾವ್ಯಶ್ರೀ.

ಹಿರಿತೆರೆಗೆ ಹಾರಲು ರೆಡಿ
"ಆರಂಭದ ದಿನಗಳಲ್ಲಿ ನಿಜವಾಗಿಯೂ ನಟಿಸುವುದು ಕಷ್ಟವಾಯಿತು" ಎಂದು ಹೇಳುವ ಕಾವ್ಯಶ್ರೀ ಗೌಡ " ನಾನು ಇಂದು ಪರಿಪೂರ್ಣ ನಟಿಯಾಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕ ಕೆ.ಎಸ್. ರಾಮ್ ಜೀ ಹಾಗೂ ಹಿರಿಯ ಕಲಾವಿದರುಗಳ ಪ್ರೋತ್ಸಾಹವೇ ಕಾರಣ. ಅವರು ನನ್ನನ್ನು ತಿದ್ದಿದ ಕಾರಣ ನಾನಿಂದು ಮಂಗಳ ಗೌರಿಯಾಗಿ ಗುರುತಿಸಲು ಕಾರಣವಾಯಿತು" ಎನ್ನುತ್ತಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುವ ಕಾವ್ಯಶ್ರೀ ಅವಕಾಶ ದೊರೆತರೆ ಹಿರಿತೆರೆಗೆ ಹಾರಲು ಕೂಡಾ ತಯಾರಿದ್ದಾರೆ.


Click it and Unblock the Notifications











