ಕೃತಿ ಬೆಟ್ಟದ್ ನಟನಾ ಜರ್ನಿ ಶುರುವಾಗಿದ್ದು ಹೇಗೆ ಗೊತ್ತಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯೂ ಒಂದು. ವಿಭಿನ್ನ ರೀತಿಯ ಕಥಾಹಂದರದ ಜೊತೆಗೆ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಿಂಗಾರಿ ಎನ್ನುವ ಹೊಸ ಪಾತ್ರದ ಆಗಮನ ಈಗಾಗಲೇ ಆಗಿದ್ದು ಕಾವೇರಿ ಮಾಡುವ ಕುತಂತ್ರಿ ಕೆಲಸಗಳಿಗೆ ಸಪೋರ್ಟ್ ಮಾಡುವ ಪಾತ್ರವದು.
ನಾಯಕ ವೈಷ್ಣವ್ ತಾಯಿ ಕಾವೇರಿ ಮಾಡುವ ಎಲ್ಲಾ ಮನೆಹಾಳು ಕೆಲಸಕ್ಕೆ ಸಹಾಯ ಮಾಡುವ ಚಿಂಗಾರಿಯಾಗಿ ನಟಿಸುತ್ತಿರುವ ಈಕೆಯ ಹೆಸರು ಕೃತಿ ಬೆಟ್ಟದ್. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಬಳ್ಳಿಯಾಗಿ ಕಾಣಿಸಿಕೊಂಡಿದ್ದ ಕೃತಿ ಬೆಟ್ಟದ್ ಅಲ್ಲೂ ಮಾಡುತ್ತಿದ್ದ ಪಾತ್ರ ಇಂತಹುದೇ. ಅಂದರೆ ಖಳನಾಯಕಿ ಸೌಂದರ್ಯ ತಂಗಿ ಬೆಳ್ಳಿಯಾಗಿ ನಟಿಸಿದ ಈಕೆ, ಆಕೆಯ ಜೊತೆ ಮನೆ ಮುರಿಯುವ ಕೆಲಸಕ್ಕೆ ಕೈ ಜೋಡಿಸುವ ಪಾತ್ರಕ್ಕೆ ಈಕೆ ಜೀವ ತುಂಬಿದ್ದರು.

'ರಾಧಾ' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ಕೃತಿ ಡಾನ್ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದರು. ಮುಂದೆ ಎ.ಜಿ. ಶೇಷಾದ್ರಿ ನಿರ್ದೇಶನದ 'ಕಲ್ಯಾಣ ರೇಖೆ' ಧಾರಾವಾಹಿಯಲ್ಲಿ ಮೇನಕ ಪಾತ್ರದಲ್ಲಿ ಕಾಣಿಸಿಕೊಂಡ ಕೃತಿ ಬೆಟ್ಟದ್ ಅವರು ನಂತರ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರೂ, ಜನ ಅವರನ್ನು ಗುರುತಿಸಿದ್ದು, ಆಕೆಗೆ ಜನಪ್ರಿಯತೆ ನೀಡಿದ್ದು ಮಾತ್ರ "ಮಂಗಳಗೌರಿ ಮದುವೆ" ಧಾರಾವಾಹಿ. 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ತಂಗಿಯಾಗಿ ಅಭಿಯಿಸಿದ ಈಕೆ ಈಗಲೂ ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ.
ಎಳವೆಯಲ್ಲಿ ಛದ್ಮವೇಷದಲ್ಲಿ ಪ್ರಥಮ ಬಹುಮಾನ ಪಡೆದಿದ್ದ ಕೃತಿ ಬೆಟ್ಟದ್ ಅವರಿಗೆ ನಾಟಕದಲ್ಲಿ ವಿಶೇಷ ಅಸಕ್ತಿ. ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರಿಗೆ ನಟನೆ ಎಂಬುದು ರಕ್ತಗತವಾಗಿಯೂ ಬಂದುದು ಎಂದರೆ ತಪ್ಪಾಗಲಾರದು. ಕೃತಿ ಅವರ ಅಪ್ಪ ಅಮ್ಮ ಇಬ್ಬರಿಗೂ ನಾಟಕದಲ್ಲಿ ಬಹಳ ಆಸಕ್ತಿ. ಅಂದ ಹಾಗೇ ಮೂರನೇ ವಯಸ್ಸಿಗೆ ಒನಕೆ ಓಬಬ್ವ ನಾಟಕದ ಓಬವ್ವಾನಾಗಿ ತೆರೆಯ ಮೇಲೆ ಮೋಡಿ ಮಾಡಿದ್ದರು ಕೃತಿ. ಇನ್ನು ಮುಖ್ಯವಾದ ವಿಷಯ ಎಂದರೆ ಅದನ್ನು ಆಕೆಯ ಅಮ್ಮ ನಿರ್ದೇಶಿಸಿದ್ದರು.
ತದ ನಂತರ ಅಮ್ಮ ಅಪ್ಪನ ಎಲ್ಲಾ ನಾಟಕಗಳಲ್ಲೂ ನಟಿಸುತ್ತಿದ್ದ ಕೃತಿ ಬೆಟ್ಟದ್ ಕಾಲೇಜು ದಿನಗಳಲ್ಲಿ ಏಕಪಾತ್ರಾಭಿನಯಗಳಲ್ಲಿ ನಟಿಸುತ್ತಿದ್ದುದಲ್ಲದೇ, ಹಲವು ಬಹುಮಾನಗಳನ್ನು ಗೆದ್ದಿದ್ದಾರೆ.
ಬಿಬಿಎಂ ವಿದ್ಯಾರ್ಥಿನಿಯಾಗಿದ್ದಾಗ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಕೃತಿ ಪದವಿಯ ಬಳಿಕ ಬ್ಯಾಂಕ್‌ನಲ್ಲಿ ಕೆಲಸಕ್ಕೂ ಸೇರಿದರು. ಒಂದಷ್ಟು ದಿನ ಅಲ್ಲಿ ಕೆಲಸ ಮಾಡಿದ ಈಕೆಯನ್ನು ಬಣ್ಣದ ಲೋಕ ಕೈ ಬೀಸಿ ಕರೆಯುತ್ತಿತ್ತು. ನಟನೆಯನ್ನು ಬಿಡಲು ಮನಸ್ಸಾಗದ ಈಕೆ ಕೆಲಸಕ್ಕೆ ವಿದಾಯ ಹೇಳಿದರು. ಮುಂದೆ ಅಭಿನಯ ತರಂಗ ಸೇರಿದ ಈಕೆ ನಟನೆಯ ಕುರಿತು ಹಂತಹಂತವಾಗಿ ತಿಳಿದುಕೊಂಡರು. ಮಾತ್ರವಲ್ಲ ಅಭಿನಯ ತರಂಗ ಕೊಡುವ ಆ ವರ್ಷದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕೂಡಾ ಈಕೆ ಪಡೆದರು.
ಅಂದ ಹಾಗೇ ಕೃತಿ ಬೆಟ್ಟದ್ ಅವರು ಕಿರುತೆರೆ ಜೊತೆಗೆ ಸಿನಿಮಾದಲ್ಲಿಯೂ ಸಕ್ರಿಯವಾಗಿರುವ ಬೆಡಗಿ. 'ಮೈಲಾರಿ', 'ಡೆಡ್ಲಿ-2' ,'ಝೂಮ್' , 'ಕೂಲ್', 'ಡ್ರಾಮಾ', 'ವಿಕ್ಟರಿ -2', 'ಉತ್ಸಾಹಿ' ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. 'ಭಜೋ ಬಿ ಕರ್ ವಾಲೇ' ಎಂಬ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ನಲ್ಲಿ ಈಕೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











