ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಕನ್ನಡ ಕಿರುತೆರೆ ನಟಿ
ತಾಯ್ತನ ಎನ್ನುವುದು ಪ್ರತಿಯೊಬ್ಬ ಮಹಿಳೆಯ ಜೀವನದ ಮುಖ್ಯವಾದ ಘಟ್ಟ. ಹೆಣ್ಣಿಗೆಮಾತ್ರ ದೇವರು ಕೊಟ್ಟ ವರ. ದಂಪತಿಗಳ ಕನಸು ನನಸಾಗುವ ಸಮಯ ಅದು. ಇನ್ನು ಎರಡನೇ ಮಗು ಎನ್ನುವುದು ಇಡೀ ಕುಟುಂಬದ ಚಿತ್ರಣವನ್ನೇ ಬದಲಿಸುತ್ತದೆ.
ಇತ್ತೀಚೆಗೆ ನಟಿಯರಾದ ಪ್ರಣೀತಾ, ಇಲಿಯಾನಾ ಡಿಕ್ರೂಸ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಂಗಳೂರು ಮೂಲದ ಕಿರುತೆರೆ ನಟಿ ಚೈತ್ರಾ ರೈ ತಮ್ಮ ಪತಿಯ ಜೊತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗಳು ಹಾಗೂ ಪತಿ ಜೊತೆ ಸೇರಿ ಬೊಂಬಾಟ್ ಆಗಿ ಮೆಟರ್ನಿಟಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಇಂಜಿನಿಯರ್ ಪ್ರಸನ್ನ ಶೆಟ್ಟಿ ಎಂಬುವರ ಕೈ ಹಿಡಿದಿದ್ದ ಚೈತ್ರಾ ನಾಲ್ಕು ವರ್ಷದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ನಿಷ್ಕಾ ಶೆಟ್ಟಿ ಎಂದು ನಾಮಕರಣ ಮಾಡಿದ್ದರು. ಇದೀಗ ಮತ್ತೆ ಗರ್ಭಿಣಿಯಾಗಿದ್ದಾರೆ. "ಈ ಸಣ್ಣ ರಹಸ್ಯವನ್ನು ನಾವು ನಮ್ಮ ಹೃದಯದಲ್ಲಿಟ್ಟುಕೊಂಡಿದ್ದೆವು. ಇಂದು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕು ಎನಿಸಿತು. ಎರಡನೇ ಮಗು ಬರ್ತಿದೆ. ನಿಷ್ಕಾ ಶೆಟ್ಟಿ ಅಕ್ಕ ಆಗುತ್ತಿದ್ದಾಳೆ. ನಮ್ಮ ಮನಸ್ಸು ತುಂಬಿದೆ. ನಿಮ್ಮ ಪ್ರಾರ್ಥನೆ, ಪ್ರೀತಿ ಇರಲಿ" ಎಂದು ಚೈತ್ರಾ ರೈ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಬಹಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳ ಅಕ್ಕ ವಿಶಾಖಾ ಪಾತ್ರದಲ್ಲಿ ಚೈತ್ರಾ ರೈ ನಟಿಸಿದ್ದರು. ಬಳಿಕ ಕನ್ನಡಕ್ಕಿಂತ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಜ್ಯೂ. ಎನ್‌ಟಿಆರ್ ನಟನೆಯ 'ದೇವರ' ಚಿತ್ರದಲ್ಲಿ ಕೂಡ ಆಕೆ ನಟಿಸಿದ್ದರು.
ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಕಲಿಯುತ್ತಿದ್ದ ಚೈತ್ರಾ ಬಳಿಕ ದಿಢೀರನೆ ಬಣ್ಣದ ಲೋಕಕ್ಕೆ ಬಂದಿದ್ದರು. 'ಬೊಂಬೆಯಾಟವಯ್ಯಾ', 'ಬಣ್ಣದ ಬುಗುರಿ', 'ಕುಸುಮಾಂಜಲಿ', 'ಗೆಜ್ಜೆಪೂಜೆ', 'ನಾಗಮಣಿ', 'ಪೌರ್ಣಮಿ','ಯುಗಾದಿ' ಹೀಗೆ ಕೆಲ ಧಾರಾವಾಹಿಗಳಲ್ಲಿ ಆಕೆ ಮಿಂಚಿದ್ದಾರೆ. ಆದರೆ 'ರಾಧಾ ಕಲ್ಯಾಣ' ಧಾರಾವಾಹಿ ಒಳ್ಳೆ ಹೆಸರು ತಂದುಕೊಟ್ಟಿತ್ತು. 2013ರಲ್ಲಿ ಶುರುವಾದ ತೆಲುಗಿನ 'ಅಷ್ಟಾ ಚಮ್ಮಾ' ಧಾರಾವಾಹಿಯಲ್ಲಿ ಸ್ವಪ್ನ ಆಗಿ ಚೈತ್ರಾ ನಟಿಸಿದ್ದರು. ಬಳಿಕ ಅಲ್ಲೇ ಬ್ಯುಸಿಯಾದರು.
ಉದಯ ಟಿವಿಯಲ್ಲಿ ಬರುತ್ತಿದ್ದ 'ಯುಗಾದಿ' ಕನ್ನಡದಲ್ಲಿ ಚೈತ್ರಾ ನಟಿಸಿದ ಕೊನೆಯ ಧಾರಾವಾಹಿ. ಇನ್ನು ತೆಲುಗಿನಲ್ಲಿ 'ಅಲಾ ಮೊದಲೈಂದಿ', 'ಒಕರಿಕಿ ಒಕರು' ಸೇರಿ ಒಂದಷ್ಟು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. 'ಅತ್ತಾರಿಂಟ್ಲೊ ಅಕ್ಕ ಚೆಲ್ಲಲು' ಎಂಬ ಧಾರಾವಾಹಿಯಲ್ಲಿ ಈಗ ನಟಿಸುತ್ತಿದ್ದಾರೆ. 5 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟಿ ದಂಪತಿ ಗೃಹ ಪ್ರವೇಶ ಮಾಡಿದ್ದರು.
ಒಂದೆರಡು ಸಿನಿಮಾಗಳಲ್ಲಿ ಕೂಡ ಚೈತ್ರಾ ರೈ ನಟಿಸಿದ್ದಾರೆ. 'ದೇವರ' ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಪತ್ನಿಯ ಪಾತ್ರದಲ್ಲಿ ಮಿಂಚಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ತಮ್ಮ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ವೀಡಿಯೋ ಮಾಡಿ ಹಂಚಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಮಗಳ ಜೊತೆ ಸೇರಿ ರೀಲ್ಸ್ ಮಾಡುತ್ತಿರುತ್ತಾರೆ.
ಅದ್ಯಾಕೋ ಚೈತ್ರಾ ಕನ್ನಡ ಕಿರುತೆರೆ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. ನಟಿಸುವುದಕ್ಕಾಗಿ ಹೈದರಾಬಾದ್‌ಗೆ ಆಗಾಗ್ಗೆ ಹೋಗಿ ಬರುತ್ತಾರೆ. ಕನ್ನಡ ವೀಕ್ಷಕರು ಕೂಡ ಆಕೆಯನ್ನು ಮತ್ತೆ ಕನ್ನಡ ಧಾರಾವಾಹಿಯಲ್ಲಿ ನೋಡಲು ಬಯಸುತ್ತಿದ್ದಾರೆ.


Click it and Unblock the Notifications











