Breaking ; ಸರಿಗಮಪ ಖ್ಯಾತಿಯ ಗಾಯಕಿ ಮಂಜಮ್ಮ ನಿಧನ
ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಕಾರ್ಯಕ್ರಮ ಸರಿಗಮಪದಲ್ಲಿ ತನ್ನ ಮಧುರ ಕಂಠದ ಮೂಲಕ ವೀಕ್ಷಕರ ಮನ ಗೆದ್ದ ಮಂಜಮ್ಮ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.

ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗುವ ಮುನ್ನ ವಿಶೇಷ ಚೇತನ ಗಾಯಕಿಯರಾದ ಮಂಜಮ್ಮ ಮತ್ತು ರತ್ನಮ್ಮ ದೇವಸ್ಥಾನದ ಮುಂದೆ ಹಾಡುತ್ತಿದ್ದರು. ಮಂಜಮ್ಮ ಮತ್ತು ರತ್ನಮ್ಮ ಕಂಠಕ್ಕೆ ಮನಸೋತ ಜೀ ಕನ್ನಡ ತಮ್ಮ ಸರಿಗಮಪ ವೇದಿಕೆಗೆ ಇವರನ್ನು ಕರೆತಂದಿತ್ತು. ಇನ್ನು ಮಂಜಮ್ಮ ಮತ್ತು ರತ್ನಮ್ಮ ಇಬ್ಬರು ಅಕ್ಕ-ತಂಗಿ ಹುಟ್ಟಿನಿಂದ ಕಣ್ಣಿಲ್ಲ. ಸಂಗೀತದ ಅಭ್ಯಾಸವನ್ನು ಕೂಡ ಇಬ್ಬರು ಯಾರ ಬಳಿ ಮಾಡಿಲ್ಲ. ಆದರೂ ಕೂಡ ತಮ್ಮ ಚಿನ್ನದ ಕಂಠದಿಂದ ಇಬ್ಬರು ಮೋಡಿ ಮಾಡಿದ್ದರು. ಸರಿಗಮಪ ಕಾರ್ಯಕ್ರಮದ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದರು.
ಇನ್ನು ಸರಿಗಮಪ ಕಾರ್ಯಕ್ರಮಕ್ಕೆ ಬರುವ ಮುನ್ನ ಮಂಜಮ್ಮ ಮತ್ತು ರತ್ನಮ್ಮ ಅವರಿಗೆ ಇರಲು ಸರಿಯಾದ ಮನೆ ಇರಲಿಲ್ಲ. ಇದ್ದ ಮನೆ ಸಂಪೂರ್ಣ ಹಾಳಾಗಿತ್ತು. ಇವರ ಕಂಠಕ್ಕೆ ಮನ ಸೋತಿದ್ದ ಹಿರಿಯ ನಟ ಜಗ್ಗೇಶ್ ಇವರಿಗೆ ಹೊಸ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದರು. ಕೊಟ್ಟ ಮಾತಿನಂತೆ ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಮನೆಯನ್ನು ನಿರ್ಮಿಸಿದ್ದರು. ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಮಾರ್ಚ್ ಹನ್ನೆರಡರಂದು ಗೃಹ ಪ್ರವೇಶ ನಡೆದಿತ್ತು. ಜಗ್ಗೇಶ್ ಪರಿಮಳ ನಿಲಯ ಎಂದು ಹೆಸರಿರುವ ಮನೆಯ ಗೃಹ ಪ್ರವೇಶಕ್ಕೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರ ಜೊತೆ ಹೋಗಿದ್ದರು. ಜಗ್ಗೇಶ್ ಮಾತ್ರವಲ್ಲದೇ ಅರ್ಜುನ್ ಜನ್ಯ ಕೂಡ ನೆರವಿನ ಹಸ್ತವನ್ನು ಚಾಚಿದ್ದರು. ನನ್ನಲ್ಲಿ ಶಕ್ತಿ ಇರುವ ತನಕ ಈ ಸಹೋದರಿಯರ ಮನೆಯ ರೇಷನ್ ವ್ಯವಸ್ಥೆ ನನ್ನದು ಎಂದು ಹೇಳಿದ್ದರು. ತಂಗಿ ಮಂಜಮ್ಮ ನಿಧನದಿಂದ ಅಕ್ಕ ರತ್ನಮ್ಮ ಅವರ ಆಕ್ರಂದನ ಮುಗಿಲು ಮುಟ್ಟಿದೆ.


Click it and Unblock the Notifications











