Matte Mayamruga: ದಾಸರ ಪದಗಳಿಗೆ ದನಿಯಾಗಿದ್ದ ಬೆಡಗಿ ನಟನೆಯಲ್ಲೂ ಗೆದ್ದಿದ್ದೇಗೆ?
ಸಿರಿಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್. ಸೀತಾರಾಮ್ ಅವರ ನಿರ್ದೇಶನದ 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಪೂರ್ವಿ ಪಾತ್ರದಲ್ಲಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಮೇಧಾ ವಿದ್ಯಾಭೂಷಣ. ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಮೇಧಾ ವಿದ್ಯಾಭೂಷಣ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಬೆಡಗಿ.
ಸಂಗೀತ ಕ್ಷೇತ್ರದಲ್ಲಿ ವಿದ್ವತ್ ಪದವಿಯನ್ನು ಪಡೆದಿರುವ ಮೇಧಾ ವಿದ್ಯಾಭೂಷಣಗೆ ಕಲೆ ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು. ಹೌದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೀಠಾಧಿಪತಿಗಳಾಗಿದ್ದ ವಿದ್ಯಾಭೂಷಣ ಮತ್ತು ರಮಾ ಅವರ ದಂಪತಿಗಳ ಮಗಳಾಗಿರುವ ಮೇಧಾ ಸಂಗೀತಗಾರ್ತಿಯಾಗಿ ಗುರುತಿಸಿಕೊಂಡಿರುವ ಬೆಡಗಿ.

ನಟನೆ ಜೊತೆ ಗಾಯನದಲ್ಲೂ ಮೇಲು
ತಂದೆ ಅತ್ಯದ್ಭುತ ಗಾಯಕರಾಗಿದ್ದ ಕಾರಣ ಮನೆಯಲ್ಲಿ ಸದಾ ಕಾಲ ಸಂಗೀತಮಯ ವಾತಾವರಣ. ತಂದೆಯ ಗಾಯನ ಕೇಳಿಕೊಂಡೇ ಬೆಳೆದ ಮೇಧಾ ಇಂದು ಒರ್ವ ಅದ್ಭುತ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ಈಕೆ ಈಗಾಗಲೇ ಒಂದಷ್ಟು ವೇದಿಕೆಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ್ದಾರೆ.

ನಟನೆಯಲ್ಲೂ ಸೈ
ಸುಮಧುರ ಕಂಠದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿ ಸೈ ಎನಿಸಿಕೊಂಡಿರುವ ಮೇಧಾ ದಾಸರ ಪದಗಳಿಗೆ ದನಿಯಾಗಿದ್ದಾರೆ. ವಿಶೇಷವೆಂದರೆ, ಅದು ಸಿಡಿ ರೂಪದಲ್ಲಿ ಹೊರಬಂದಿದೆ. ಸಂಗೀತದ ಹೊರತಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿರುವ ಮೇಧಾ ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ಬೆಡಗಿ.

'ಮಾಯಾಮೃಗ'ದಲ್ಲಿ ನಟನೆ
ಮತ್ತೆ 'ಮಾಯಾಮೃಗ'ದಲ್ಲಿ ಪೂರ್ವಿ ಆಗಿ ನಟಿಸುತ್ತಿರುವ ಮೇಧಾ ಅವರು ತಮ್ಮ ಬಣ್ಣದ ಪಯಣದ ಕುರಿತು ಸಂತಸದಿಂದ ಇದ್ದಾರೆ. "ಟಿ.ಎನ್.ಸೀತಾರಾಮ್ ಅವರ ನಿರ್ದೇಶನದ ಧಾರಾವಾಹಿಗಳನ್ನು ನೋಡುತ್ತಾ ಬೆಳೆದವಳು ನಾನು. ಇದೀಗ ಅವರದೇ ನಿರ್ದೇಶನದ ಧಾರಾವಾಹಿಯಲ್ಲಿ ನಟಿಸುತ್ತಿರುವ ಭಾಗ್ಯ ನನಗೆ ದೊರಕಿದೆ. ಮೊದಲ ಬಾರಿಗೆ ನಟಿಸುವ ಅವಕಾಶ ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು. ಜೊತೆಗೆ ನಟನಾ ಕ್ಷೇತ್ರ ಹೊಸತಾಗಿರುವ ಕಾರಣ ನನ್ನಿಂದ ನಟಿಸಲು ಸಾಧ್ಯವೇ ಎಂಬ ಅನುಮಾನ ಸಹಜವಾಗಿ ಕಾಡಿತ್ತು. ಆದರೂ ಬೇಡ ಎನ್ನಲಾಗದೇ ಅಸ್ತು ಎಂದೆ. ಜೊತೆಗೆ ಮನೆಯವರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹದಿಂದ ನಾನಿಂದು ಪೂರ್ವಿ ಆಗಿ ಬದಲಾಗಲು ಸಾಧ್ಯವಾಯಿತು" ಎಂದು ಹೇಳುತ್ತಾರೆ ಮೇಧಾ ವಿದ್ಯಾಭೂಷಣ.


Click it and Unblock the Notifications