Saregamapa: ಸಾನ್ವಿ ಶಾಲೆಯಲ್ಲಿ ರನ್ನಿಂಗ್ ರೇಸ್‌ನಲ್ಲಿ ಸ್ಪರ್ಧಿಸಿ 2ನೇ ಬಹುಮಾನ ಪಡೆದಿದ್ದ ಕಿಚ್ಚ!
ಕಿಚ್ಚ ಸುದೀಪ್ ಕನ್ನಡ ಇಂಡಸ್ಟ್ರಿಯ ಬಿಗ್ ಸ್ಟಾರ್. ಅವರನ್ನ ನೋಡುವುದಕ್ಕೆ ಅಭಿಮಾನಿಗಳು ಕ್ಯೂ ನಿಲ್ಲುತ್ತಾರೆ. ಅವರಿಗಾಗಿ ಕಾಯುತ್ತಾರೆ. ಅವರ ಸಿನಿಮಾಗಳನ್ನ ಸೆಲೆಬ್ರೇಟ್ ಮಾಡುತ್ತಾರೆ. ಹೊರಗಡೆ ಯಾವುದಾದರೊಂದು ವಿಚಾರ ಮಾತನಾಡುವಾಗ ಬಹಳ ಪ್ರಬುದ್ಧವಾಗಿ, ತಪ್ಪು ಮಾಡಿದವರಿಗೆ ಬುದ್ದಿ ಕಲಿಸುವಂತೆ ಮಾತನಾಡುತ್ತಾರೆ.
ಇಷ್ಟು ದೊಡ್ಡ ನಟ ಕಿಚ್ಚನ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲವಿರುತ್ತದೆ. ಯಾಕಂದ್ರೆ ಸುದೀಪ್ ಅವರನ್ನ ನಾವೂ ನೋಡುವುದು ಸಿನಿಮಾದಲ್ಲಿ ತೆರೆಯ ಮೇಲೆ ಮಾತ್ರ. ಹೀಗಾಗಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲವಂತು ಇದೆ.

ಸುದೀಪ್ ಸಿನಿಮಾ, ರಿಯಾಲಿಟಿ ಶೋ, ಕ್ರಿಕೆಟ್ ಅಂತ ಇಂಡಸ್ಟ್ರಿಯಲ್ಲಿಯೇ ಸಮಯ ಕಳೆಯುವವರು ಕುಟುಂಬಕ್ಕೆ ಸಮಯ ಹೇಗೆ ಕೊಡ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಇದ್ದೆ ಇರುತ್ತದೆ. ಹಾಗೇ ಮಗಳ ಜೊತೆ ಬಾಂಡಿಂಗ್ ಹೇಗೆ..? ಸಾನ್ವಿ, ಸುದೀಪ್ ಅವರನ್ನ ಏನೆಂದು ಕರೆಯುತ್ತಾರೆ. ಹೀಗೆ ಹಲವು ಪ್ರಶ್ನೆಗಳಿಗೆ ಆಂಕರ್ ಅನುಶ್ರೀ ಉತ್ತರ ಹುಡುಕಿದ್ದಾರೆ.
ಜೀ ವೇದಿಕೆಗೆ ಕಿಚ್ಚ ಸುದೀಪ್
ಕಳೆದ ವರ್ಷ ಅಂದ್ರೆ ಡಿಸೆಂಬರ್ 25 ರಂದು ರಿಲೀಸ್ ಆದ 'ಮ್ಯಾಕ್ಸ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯನ್ನ ಜೀ ಕನ್ನಡ ವಾಹಿನಿ ಸಂಭ್ರಮಿಸಿದೆ. ಹೀಗಾಗಿ ಸುದೀಪ್ ಅವರನ್ನು ಸರಿಗಮಪ ವೇದಿಕೆಗೆ ಆಹ್ವಾನಿಸಿ, ಮಗಳು ಹಾಗೂ ಪತ್ನಿ ಪ್ರಿಯಾ ಅವರನ್ನು ಕರೆಸಿ ಸರ್ಪೈಸ್ ನೀಡಿದೆ.
ಮಗಳಿಗಾಗಿ ಹಾಡಿದ ಕಿಚ್ಚ
ಸಾನ್ವಿ ಸ್ಟೇಜ್‌ಗೆ ಬರುವುದಕ್ಕೂ ಮುನ್ನವೇ ಹಾಡು ಹಾಡುತ್ತಾ ಬಂದಿದ್ದಾರೆ. 'ಜಸ್ಟ್ ಮಾತ್ ಮಾತಲ್ಲಿ' ಹೇಳುತ್ತಾ, ಕಿಚ್ಚನ ಕಣ್ಣಲ್ಲಿ ನೀರು ತರಿಸಿದ್ದಾರೆ. ಮಗಳನ್ನು ಕಂಡು ಕಿಚ್ಚನಿಗೆ ಖುಷಿಯಾಗಿದೆ. ಸರ್ಪೈಸ್ ಎಂದ ಮಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಆ ಭಾವನಾತ್ಮಕ ಕ್ಷಣ ಅಭಿಮಾನಿಗಳಿಗಂತು ಫುಲ್ ಥ್ರಿಲ್ಲಿಂಗ್ ಫೀಲ್ ಕೊಟ್ಟಿದೆ. ನಾನು ಅವಳಿಗೆ ಅಪ್ಪ ಅನ್ನೋದೆ ಹೆಮ್ಮೆ ಎಂದು ಕಿಚ್ಚ ಹೊಗಳಿದ್ದಾರೆ.
ಮಗಳ ಶಾಲಾ-ಕಾಲೇಜು ದಿನಗಳು
ಇದೇ ವೇದಿಕೆಯಲ್ಲಿ ಪ್ರಿಯಾ, ಸುದೀಪ್ ಅವರನ್ನು ಕರೆಸಿದ ಅನುಶ್ರೀ ಅಪ್ಪ - ಮಗಳಿಗೆ ಕುತೂಹಲಕಾರಿ ಪ್ರಶ್ನೆಗಳನ್ನ ಕೇಳಿದ್ದಾರೆ. ನೀವೂ ಅಪ್ಪ ಅಂತೀರಾ ಡ್ಯಾಡಿ ಅಂತೀರಾ ಯಾವ ಥರ ಕರೀತೀರಾ ಸುದೀಪ್ ಸರ್ ನಾ..? ಶಾಲೆಗೆಲ್ಲಾ ಬಿಟ್ಟು ಬರ್ತಿದ್ರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾನ್ವಿ, 'ಅಪ್ಪಾ ಅಂತ ಕರೀತಿನಿ. ನನ್ನ ಶಾಲೆಗೆ ಅವರೇ ಕರೆದುಕೊಂಡು ಹೋಗಿ, ಕರೆದುಕೊಂಡು ಬರ್ತಾ ಇದ್ರು ಎಂದಿದ್ದಾರೆ.
ಮರೆಯಲಾಗದ ದಿನ ನೆನೆದ ಕಿಚ್ಚ
ಸಾನ್ವಿ ಈ ಮಾತು ಹೇಳ್ತಾ ಇದ್ದಂತೆ ಹಳೆಯ ದಿನಗಳನ್ನು ಮೆಲುಕು ಹಾಕಿದ ಸುದೀಪ್, 'ಅವರ ಸ್ಕೂಲಲ್ಲಿ ರನ್ನಿಂಗ್ ರೇಸ್ ಎಲ್ಲಾ ಓಡಿದ್ದೀನಿ. ಸೆಕೆಂಡ್ ಬಂದಿದ್ದೀನಿ. ನಾಲ್ಕು ಸಲ ಓಡಿದ್ದೀನಿ. ಈ ಥರ ಓಡಬೇಕು ಅಂತ ಬಂದಾಗ ನಾನು ಆಕ್ಚುಲಿ ಖುರ್ಚಿಯಿಂದ ಸ್ವಲ್ಪ ಕೆಳಗೆ ಹೋದೆ. ಹುಡುಕ್ತಾ ಇದ್ರು ಎಲ್ಲೋದ್ರು ಅಂತ. ಕಿಚ್ಚ ಸುದೀಪ್ ಸ್ಟೈಲ್‌ನಲ್ಲಿ ಹೋಗಿರ್ತೀವಿ. ಸಡನ್ ಆಗಿ ಓಡಿ ಅಂತಿದ್ದಾರೆ. ಓಡೋದಕ್ಕೆ ರೇಸಲ್ಲಿ ಇಳಿದಿದ್ದೀನಿ. ಬಟ್ ಅಕ್ಕ ಪಕ್ಕ ಇರೋದು ಸಿಂಹನ, ಹುಲಿನ, ಚಿರತೆನಾ ಗೊತ್ತಿಲ್ಲ. ಮರ್ಯಾದೆಯಿಂದ ಮೆತ್ತಗೆ ಓಡ್ರೋ ಅಂತ ಹೇಳುವಂಗು ಇಲ್ಲ. ನಾನು ಓಡಿದೆ. ಆದ್ರೆ ಯಾರೋ ಅಪ್ಪ, ಚಪ್ಪಲಿ ಗಿಪ್ಪಲಿ ಬಿಚ್ಚಿ ಓಡ್ತಾ ಇದ್ದರು. ಅವ್ರೆನು ಗೆಲ್ಲೋದಕ್ಕೆ ಓಡ್ತಾ ಇದಾರೋ ಅಥವಾ ಹೆಂಡತಿ ಹಿಂದೆ ಓಡ್ತಾ ಇದಾರೋ ಗೊತ್ತಾಗ್ಲಿಲ್ಲ' ಎಂದು ಹೇಳಿ ಎಲ್ಲರನ್ನು ನಕ್ಕು ನಲಿಸಿದ್ದಾರೆ.


Click it and Unblock the Notifications











