ಪಾರು ಮತ್ತು ಮ್ಯಾಕ್ಸ್ ಖ್ಯಾತಿಯ ಶ್ರೀಧರ್‌ಗೆ ಏನಾಯ್ತು ? ಸಹಾಯಕ್ಕೆ ಅಂಗಲಾಚಿದ ನಟ..!
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದಿರುವ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಇಲ್ಲಿದ್ದಾರೆ. ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಆದರೆ, ಕೆಲ ಒಮ್ಮೆ ಎಲ್ಲವೂ ಕೂಡಿ ಬಂದಾಗ, ಬದುಕು ಒಂದು ಹಂತಕ್ಕೆ ರೂಪಗೊಳ್ಳುತ್ತಿರುವಾಗ. ವಿಧಿಯ ಆಟ ಬೇರೆಯದ್ದೇ ಆಗಿರುತ್ತೆ. ಇದಕ್ಕೆ ಶ್ರೀಧರ್ ಅವರ ಬದುಕು ಮತ್ತೊಂದು ಉದಾಹರಣೆ. ಹೌದು, ಶ್ರೀಧರ್.. ಕನ್ನಡ ಕಿರುತೆರೆಯ ಖ್ಯಾತ ಹೆಸರು. ವಧು ಮತ್ತು ಪಾರು ಧಾರಾವಾಹಿಯಲ್ಲಿ ನೀವು ಇವರನ್ನು ನೋಡಿರುತ್ತೀರಾ. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರದಲ್ಲಿ ಕೂಡ ಶ್ರೀಧರ್ ಕಾಣಿಸಿಕೊಂಡಿದ್ದರು.

ಇಂಥಾ ಶ್ರೀಧರ್ ಈಗ ಅನಾರೋಗ್ಯಕ್ಕೀಡಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಹಾಯಕ್ಕಾಗಿ ಮನವಿಯನ್ನು ಕೂಡ ಮಾಡಿದ್ದಾರೆ. ಶ್ರೀಧರ್ ಅವರ ಅನಾರೋಗ್ಯದ ಕುರಿತು ಕಮಲಿ ಖ್ಯಾತಿಯ ಅಂಕಿತಾ ಮಾಹಿತಿಯನ್ನು ಹಂಚಿಕೊಂಡಿದ್ದು ವಿಡಿಯೋ ಮೂಲಕ ಸಹಾಯ ಮಾಡುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅಂಕಿತಾ ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಅಂಕಿತಾ. ಈ ವಿಡಿಯೋ ಮಾಡುತ್ತಿರುವ ಉದ್ದೇಶ ನಮ್ಮ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟರಾದ ಶ್ರೀಧರ್ ಎನ್ ಅವರು, ಪಾರು ಧಾರಾವಾಹಿ ಹಾಗೂ ಮಾಕ್ಸ್ ಸಿನಿಮಾದಲ್ಲಿ ನೀವು ಅವರನ್ನು ನೋಡಿರುತ್ತೀರಿ. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆಸ್ಪತ್ರೆ ಚಿಕಿತ್ಸೆಗೆ ಬಹಳ ಖರ್ಚಾಗುತ್ತಿದೆ.
ಹೀಗಾಗಿ ನಿಮ್ಮೆಲ್ಲರ ಸಹಾಯ ಬೇಕು ಅಂತಾ ಅವರು ಕೇಳಿಕೊಳ್ಳುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಅವರ ತಾಯಿ ಬಿಟ್ಟು ಬೇರೆ ಕುಟುಂಬಸ್ಥರು ಯಾರೂ ಇಲ್ಲ. ಹೀಗಾಗಿ ನಾನು ಎಲ್ಲಾ ಕಲಾವಿದರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿಯನ್ನು ಮಾಡಿದ್ದಾರೆ. ಶ್ರೀಧರ್ ಅವರ ಪ್ರಸ್ತುತ ಪರಿಸ್ಥಿತಿಯ ಫೋಟೊ ಮತ್ತು ಬ್ಯಾಂಕ್ ವಿವರಗಳನ್ನು ಕೂಡ ಅಂಕಿತಾ ಹಂಚಿಕೊಂಡಿದ್ದಾರೆ.
ಇನ್ನು ಇದೇ ವಿಡಿಯೋದ ಕೊನೆಯಲ್ಲಿ ಶ್ರೀಧರ್ ಅವರ ಮನವಿಯನ್ನು ಕೂಡ ಅಂಕಿತಾ ಹಂಚಿಕೊಂಡಿದ್ದು, ಅದರಲ್ಲಿ ನಮಸ್ಕಾರ, ನಾನು ಶ್ರೀಧರ ಇದ್ದಕ್ಕಿದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು 10ರಿಂದ 15 ಸಾವಿರ ರೂ. ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ನನ್ನನ್ನು ಬದುಕಿಸಲು ಪ್ರಯತ್ನಿಸಿ, ಕೈಲಾದಷ್ಟು ಹಣದ ಸಹಾಯ ಮಾಡಿ ಎಂದು ಬರೆಯಲಾಗಿದೆ.
ಕಿರುತೆರೆ ನಟಿಯರಾದ ಸ್ವಪ್ನಾ ದೀಕ್ಷಿತ್, ವರ್ಷಿತಾ ಸೇನಿ ಕೂಡ ಅಂಕಿತಾ ಅವರ ಜೊತೆ ಕೈ ಜೋಡಿಸಿದ್ದು ಸಹಾಯಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ. ಶ್ರೀಧರ್ ವಧು ಧಾರಾವಾಹಿಯಲ್ಲಿ ಡಿವೋರ್ಸ್ ಲಾಯರ್ ವಧುವಿನ ಚಿಕ್ಕಪ್ಪನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದರೆ ಈಗ ದಿಢೀರ್ ಎಂದು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೊವನ್ನು ಕಂಡು ಅನೇಕರು ಮರುಗಿದ್ದಾರೆ. ತಮ್ಮ ನೋವನ್ನು ವ್ಯಕ್ತಪಡಿಸಿ ಬೇಗ ಗುಣಮುಖರಾಗುವಂತೆ ಪ್ರಾರ್ಥನೆ ಮಾಡಿದ್ದಾರೆ. ಅನೇಕರು ಸುದೀಪ್ ಅವರಲ್ಲಿ ಸಹಾಯದ ಹಸ್ತ ಚಾಚುವಂತೆ ಮನವಿಯನ್ನು ಕೂಡ ಮಾಡಿದ್ದಾರೆ.


Click it and Unblock the Notifications











