Mayuri Kyatari: ಮಾಟಗಾತಿ ಅವತಾರವೆತ್ತಿ ಮತ್ತೆ ಕಿರುತೆರೆಗೆ ಮರಳಿದ 'ಕೃಷ್ಣಲೀಲಾ' ನಟಿ ಮಯೂರಿ ಕ್ಯಾತರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಶ್ವಿನಿ ನಕ್ಷತ್ರ' ಕೂಡಾ ಒಂದು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಮುದ್ದು ಮುಖದ ಚೆಲುವೆಯ ಹೆಸರು ಮಯೂರಿ ಕ್ಯಾತರಿ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದ ಮಯೂರಿ ಕ್ಯಾತರಿ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಕಿರುತೆರೆಯಿಂದ ಬಹುದೊಡ್ಡ ಗ್ಯಾಪ್ ತೆಗೆದುಕೊಂಡಿರುವ ನಟಿ ಮಯೂರಿ ಕ್ಯಾತರಿ ಇದೀಗ ಮತ್ತೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ವಿಶೇಷ ಪಾತ್ರದಲ್ಲಿ ನಟಿ ಮಯೂರಿ ಕ್ಯಾತರಿ ಕಾಣಿಸಿಕೊಂಡಿದ್ದಾರೆ . ಲವ್ಲಿ ಗರ್ಲ್ ಆಗಿ ತೆರೆ ಮೇಲೆ ಮೋಡಿ ಮಾಡಿದ್ದ ಈ ಬೆಡಗಿ ಇದೀಗ ಮಾಟಗಾತಿಯಾಗಿ ಭಯ ಬೀಳಿಸಲು ಬರುತ್ತಿದ್ದಾರೆ.

3 ಗಂಟೆಯ ವಿಶೇಷ ಚಿತ್ರ
'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಸ್ಟಾರ್ ಸುವರ್ಣದ ನಂಬರ್ 1 ಸೀರಿಯಲ್. ಹೀಗಾಗಿ ಸ್ಟಾರ್ ಸುವರ್ಣ ವಿಶಿಷ್ಟ ಪ್ರಯೋಗಕ್ಕೆ ಕೈ ಹಾಕಿದೆ. ಮೂರು ಗಂಟೆಗಳ ವಿಶೇಷ ಚಿತ್ರವನ್ನು ಸಿದ್ಧಪಡಿಸಿದೆ. ಇದರಲ್ಲಿ ನಟಿ ಮಯೂರಿ ಮಾಟಗಾತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ 'ಮಾಟಗಾತಿಯ ಕಾಡಿನಲ್ಲಿ' ಅಂತ ಉಪಶೀರ್ಷಿಕೆ ಕೊಟ್ಟು ಆಗಸ್ಟ್ 6ರಂದು ಸಂಜೆ 6.30 ರಿಂದ 9.30ರವರೆಗೆ ಪ್ರಸಾರ ಮಾಡುತ್ತಿದೆ.
ಸಿಹಿ ಸುದ್ದಿ ನೀಡಿದ ಮಯೂರಿ
'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ಕರುನಾಡಿನ ಮನೆಮಗಳಾಗಿ ಗುರುತಿಸಿಕೊಂಡಿದ್ದ ಮಯೂರಿ ಕಿರುತೆರೆಯಿಂದ ದೂರವಿದ್ದರು. ಸಿನಿಮಾಗಳಲ್ಲಿ ನಟಿಸಿದ ಬಳಿಕ ಧಾರಾವಾಹಿಗಳಲ್ಲಿ ನಟಿಸಿರಲಿಲ್ಲ. ಹೀಗಾಗಿ ಕಿರುತೆರೆ ವೀಕ್ಷಕರಿಗೆ ಇದು ಬೇಸರ ನೀಡಿತ್ತು. ಸದ್ಯ ಒಂದಿಷ್ಟು ಗ್ಯಾಪ್ ಕೊಟ್ಟು ಮಯೂರಿ ಮತ್ತೆ ಮಾಟಗಾತಿಯಾತಿ ಅವತಾರವೆತ್ತಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಸೀರಿಯಲ್ ವೀಕ್ಷಕರಿಗೆ ಸಖತ್ ಖುಷಿ ನೀಡಿದೆ.
ಸಿನಿಮಾದಲ್ಲಿಯೂ ಬ್ಯುಸಿ
'ಕೃಷ್ಣ ಲೀಲಾ' ಸಿನಿಮಾದಲ್ಲಿ ನಾಯಕಿ ಲೀಲಾ ಆಗಿ ನಟಿಸುವ ಮೂಲಕ ಮಯೂರಿ ಹಿರಿತೆರೆಗೆ ಹಾರಿದ್ದರು. ಭರ್ಜರಿ ನೂರು ದಿನಗಳ ಪ್ರದರ್ಶನ ಕಂಡ ಈ ಸಿನಿಮಾ ಸಿನಿ ಪ್ರಿಯರನ್ನು ಕೂಡಾ ಸೆಳೆದಿತ್ತು. ನಂತರ 'ಇಷ್ಟಕಾಮ್ಯ', 'ನಟರಾಜ ಸರ್ವೀಸ್', 'ಕರಿಯಾ 2', 'ರ್ಯಾಂಬೋ 2', 'ಜಾನಿ ಜಾನಿ ಯಸ್ ಪಪ್ಪಾ', '8MM ಬುಲೆಟ್', 'ರುಸ್ತುಂ', 'ನನ್ನ ಪ್ರಕಾರ', 'ಆಟಕ್ಕುಂಟು ಲೆಕ್ಕಕ್ಕಿಲ್ಲ', 'ಮೌನಂ' ಹಾಗೂ 'ವೀಲ್ ಚೇರ್ ರೋಮಿಯೊ' ಸಿನಿಮಾಗಳಲ್ಲಿ ಮಯೂರಿ ಬಣ್ಣ ಹಚ್ಚಿದ್ದಾರೆ.

ಲಾಕ್‌ಡೌನ್‌ನಲ್ಲಿ ನೆರವೇರಿತ್ತು ಮಯೂರಿ ಮದುವೆ
2020ದಲ್ಲಿ ಲಾಕ್ ಡೌನ್ ಸಮಯದಲ್ಲಿ ಅರುಣ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು ಮಯೂರಿ. ಸುಮಾರು ಹತ್ತು ವರ್ಷಗಳ ಕಾಲ ಸ್ನೇಹಿತರಾಗಿ, ತದ ನಂತರ ಪ್ರೇಮಿಗಳಾಗಿ ಬದಲಾದ ಮಯೂರಿ ಮತ್ತು ಅರುಣ್ ಜೋಡಿ ಹಿರಿಯರನ್ನು ಒಪ್ಪಿಸಿ ವೈವಾಹಿಕ ಜೀವನ ಶುರು ಮಾಡಿದ್ದರು. ಮುಂದೆ ಗಂಡು ಮಗುವಿಗೆ ಜನ್ಮ ನೀಡಿದ ಮಯೂರಿ ಮಗ ಆರವ್ ಲಾಲನೆ ಪಾಲನೆಯಲ್ಲಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಈಗ ಆಕೆ ಕಿರುತೆರೆಗೆ ಮರಳಿದ್ದು ಇದು ಆಕೆಯ ವೃತ್ತಿ ಜೀವನದ ಸೆಕೆಂಡ್ ಇನ್ನಿಂಗ್ಸ್ ಎಂದರೆ ತಪ್ಪಾಗಲಾರದು.


Click it and Unblock the Notifications











