Bigg Boss Kannada 13 ; ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರಾ ಮೇಘಾ ಶೆಟ್ಟಿ ? ಅಸಲಿ ಸತ್ಯ ಹೇಳಿದ ಅನು ಸಿರಿಮನೆ
ಪ್ರತಿ ವರ್ಷ ''ಬಿಗ್ ಬಾಸ್'' ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಕಾರ್ಯಕ್ರಮ ಶುರುವಾಗುವ ಒಂದೆರಡು ತಿಂಗಳ ಮುನ್ನವೇ ಸ್ಪರ್ಧಿಗಳ ಕುರಿತು ಚರ್ಚೆ ಶುರುವಾಗುತ್ತೆ. ಅಂತೆ-ಕಂತೆಯ ಸಂತೆಯಲ್ಲಿ ಹಲವಾರು ಜನರ ಹೆಸರು ಕೇಳಿ ಬರುತ್ತೆ.
ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈ ಕುರಿತು ಪ್ರತಿ ವರ್ಷ ಚರ್ಚೆ ನಡೆಯುತ್ತಲೇ ಇರುತ್ತೆ. ಆ ಪೈಕಿ ಕೆಲವರು ನೇರಾನೇರವಾಗಿಯೇ ತಮ್ಮ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ''ಬಿಗ್ ಬಾಸ್''ನಲ್ಲಿ ಭಾಗವಹಿಸುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಉದಾಹರಣೆಗೆ ಮೇಘಾ ಶೆಟ್ಟಿ.

ಹೌದು, ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದವರು ಮೇಘಾ ಶೆಟ್ಟಿ. ಕನ್ನಡ ಕಿರುತೆರೆಯ ಮೂಲಕ ಕನ್ನಡಿಗರ ಮನೆ ಮಗಳಾದ ಈ ಅನು ಸಿರಿಮನೆ ಆ ನಂತರ ಬೆಳ್ಳಿತೆರೆಗೆ ಬಂದರು. ''ತ್ರಿಬಲ್ ರೈಡಿಂಗ್''.. ''ದಿಲ್ ಪಸಂದ್''.. ''ಕೈವ'' ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.
ಸದ್ಯ ಮೇಘಾ ಅಭಿನಯದ ''ಗ್ರಾಮಾಯಣ'' ಬಿಡುಗಡೆಯಾಗಿದೆ. ಚಿತ್ರದ ಕುರಿತು ಒಳ್ಳೆಯ ಮಾತು ಕೂಡ ಕೇಳಿ ಬರುತ್ತಿದೆ. ಇದೇ ಸಮಯದಲ್ಲಿ ಮೇಘಾ ಶೆಟ್ಟಿ ಬಿಗ್ ಬಾಸ್ ಮನೆಗೆ ಹೋಗ್ತಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯ ಕೇಳಿ ಬರುತ್ತಿದೆ. ಈ ಸುದ್ದಿಗೆ ಮೇಘಾ ನೇರಾನೇರ ಉತ್ತರ ನೀಡಿದ್ದಾರೆ.

ಈ ಕುರಿತು ''ಬಾಸ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೇಘಾ ಶೆಟ್ಟಿ, ಈ ಬಾರಿಯ ''ಬಿಗ್ ಬಾಸ್'' ಸ್ಪರ್ಧಿಗಳ ಲಿಸ್ಟ್‌ನಲ್ಲಿ ನನ್ನ ಹೆಸರು ಇದೆಯಾ..? ಇಲ್ಲವಾ..? ನನಗೆ ಇನ್ನೂ ಗೊತ್ತಿಲ್ಲ, ನಾನು ಆ ವಿಚಾರ ಕುರಿತು ಹೆಚ್ಚೇನು ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಇದೇನು ಹೊಸದಲ್ಲ. ಪ್ರತಿ ವರ್ಷ ಕೂಡ ನನ್ನ ಹೆಸರು ''ಬಿಗ್ ಬಾಸ್'' ಸುತ್ತ ಮುತ್ತ ಕೇಳಿ ಬರುತ್ತಲೇ ಇರುತ್ತೆ ಎಂದು ಹೇಳಿರುವ ಮೇಘಾ ಶೆಟ್ಟಿ ಸದ್ಯ ನಾನು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ, ಹೀಗಾಗಿ ಇಲ್ಲಿಯವರೆಗೆ ಹೋಗಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಮುಂದೇನಾಗುತ್ತೆ ನೋಡೋಣ ಎಂದಿದ್ದಾರೆ. ಈ ಮೂಲಕ ಈ ವರ್ಷವಂತೂ ತಾವು ''ಬಿಗ್ ಬಾಸ್''ಗೆ ಹೋಗುತ್ತಿಲ್ಲ ಎನ್ನುವುದನ್ನು ಮೇಘಾ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.

ಅವಕಾಶ ಬಂದರೂ ಯಾಕೆ ಹೋಗಿಲ್ಲ..?
ಇದೇ ವೇಳೆ ಪ್ರತಿ ವರ್ಷ ''ಬಿಗ್ ಬಾಸ್'' ಕಡೆಯಿಂದ ತಮಗೆ ಆಫರ್ ಬಂದಿರುವುದನ್ನು ಕೂಡ ಪರೋಕ್ಷವಾಗಿ ಒಪ್ಪಿಕೊಂಡಿರುವ ಮೇಘಾ ಶೆಟ್ಟಿ, ''ಡೇಟ್ಸ್ ಸಮಸ್ಯೆ''ದಿಂದ ಇಲ್ಲಿಯವರೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಕಳೆದ ಬಾರಿ ನನಗೆ ''ಬಿಗ್ ಬಾಸ್'' ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ನನ್ನ ''ಕೈವ'' ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತು ಎಂದು ಹೇಳಿರುವ ಮೇಘಾ ಅದಕ್ಕೂ ಮುನ್ನ ಧಾರಾವಾಹಿಯಲ್ಲೂ ನಿರಂತರವಾಗಿ ಬ್ಯುಸಿಯಾಗಿದ್ದೆ. ಹೀಗಿರುವಾಗ ''ಬಿಗ್ ಬಾಸ್''ಗೆ ಸಮಯ ಕೊಡುವುದು ಕಷ್ಟವಾಯ್ತು ಎಂದಿದ್ದಾರೆ. ''ಬಿಗ್ ಬಾಸ್''ಗಾಗಿ ಸತತವಾಗಿ ಮೂರು ತಿಂಗಳು ಮುಡಿಪಾಗಿ ಇಡುವುದು ತುಂಬಾ ಕಷ್ಟವಾಗುತ್ತದೆ ಎಂದಿದ್ದಾರೆ.
ಇನ್ನುಳಿದಂತೆ ಸದ್ಯ ಮೇಘಾ ಶೆಟ್ಟಿ ಅಭಿನಯದ ''ಗ್ರಾಮಾಯಣ'' ಬಿಡುಗಡೆಯಾಗಿದೆ. ವಿನಯ್ ರಾಜ್ ಕುಮಾರ್ ಮತ್ತು ಮೇಘಾ ನಡುವಿನ ಕೆಮೆಸ್ಟ್ರೀಗೆ ಹಲವರು ಮನ ಸೋತಿದ್ದಾರೆ. ಚಿತ್ರದ ಮೊದಲಾರ್ಧ ಹಲವರ ಮನಸ್ಸು ಗೆದ್ದಿದ್ದು ದ್ವೀತಿಯಾರ್ಧ ಮತ್ತು ಕ್ಲೈಮ್ಯಾಕ್ಸ್‌ನತ್ತ ಚೂರು ಗಮನ ವಹಿಸಬೇಕಿತ್ತು ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications