Exclusive: 'ಜೊತೆ ಜೊತೆಯಲಿ' ಕಥೆ ಮುಗೀತು: ಕೊನೆ ಎಪಿಸೋಡ್ ಬಗ್ಗೆ ಮೇಘಾ ಶೆಟ್ಟಿ ಮಾಹಿತಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಮುಕ್ತಾಯದ ಹಂತ ತಲುಪಿದೆ. ಇತ್ತೀಚೆಗೆ ಈ ಧಾರಾವಾಹಿ ಮುಗಿಯುತ್ತೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ಸ್ವತಃ ಧಾರಾವಾಹಿಯ ಪಾತ್ರಧಾರಿ ಮೇಘಾ ಶೆಟ್ಟಿ ಫಿಲ್ಮಿಬೀಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾನುವಾರವೇ ಕೊನೆ ಎಪಿಸೋಡ್ ಚಿತ್ರೀಕರಣ ಮುಕ್ತಾಯವಾಗಿದೆ. ಚಾನಲ್ ಕೂಡ ಕತೆಯನ್ನು ಮುಗಿಸಲು ತೀರ್ಮಾಣ ಕೈಗೊಂಡಿದೆ.
ಈ ಶುಕ್ರವಾರ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಜೋಡಿಯ ಪ್ರೀತಿ, ಮದುವೆ ಕಥೆಗೆ ಕೊನೆಯಾಗಲಿದೆ. 4 ವರ್ಷಗಳ ಹಿಂದೆ ಶುರುವಾಗಿದ್ದ ಧಾರಾವಾಹಿ ಕೆಲವೇ ದಿನಗಳಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿತ್ತು. ಟಿಆರ್‌ಪಿಯಲ್ಲಿ ಅಗ್ರಸ್ಥಾನ ಗಳಿಸಿ ಮೆರೆದಿತ್ತು. ಹಲವು ವಾರಗಳ ಕಾಲ 'ಜೊತೆ ಜೊತೆಯಲಿ' ಕನ್ನಡ ಕಿರುತೆರೆಯ ನಂಬರ್ ವನ್ ಧಾರಾವಾಹಿ ಎನ್ನಿಸಿಕೊಂಡಿದ್ದು ಗೊತ್ತೇಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟಿಆರ್‌ಪಿ ಗಣನೀಯವಾಗಿ ಕುಸಿದಿತ್ತು. ಕೆಲವರು ಧಾರಾವಾಹಿ ಮುಗಿಸಿ ಎಂದು ಸಲಹೆ ನೀಡುತ್ತಿದ್ದರು.

"ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಎಲ್ಲ ಎಲ್ಲೆ ಮೀರಿದಾಗಲೂ ಪಯಣ ನಿಲ್ಲದು".. ಎನ್ನುವ ಟೈಟಲ್ ಸಾಂಗ್‌ನಿಂದಲೇ ಧಾರಾವಾಹಿ ಗಮನ ಸೆಳೆದಿತ್ತು. 40 ವರ್ಷದ ಶ್ರೀಮಂತರ ಮನೆಯ ವ್ಯಕ್ತಿ ಆರ್ಯವರ್ಧನ್ ಹಾಗೂ ಮಧ್ಯಮ ವರ್ಗದ ಕುಟುಂಬದ 20 ಯುವತಿ ಅನು ಸಿರಿಮನೆ ನಡುವಿನ ಪ್ರೀತಿ, ಮದುವೆ ಕಥೆ ಮೋಡಿ ಮಾಡಿತ್ತು. ಆರೂರು ಜಗದೀಶ್ ಮತ್ತವರ ತಂಡ ಈ ಮೆಗಾ ಧಾರಾವಾಹಿಯನ್ನು ಮೊದಲ ದಿನದಿಂದಲೂ ಬಹಳ ಸೊಗಸಾಗಿ ಕಟ್ಟಿಕೊಡುತ್ತಾ ಬಂದಿತ್ತು.
1000 ಎಪಿಸೋಡ್ ಟಾರ್ಗೆಟ್
ಆರಂಭದಲ್ಲಿ ಧಾರಾವಾಹಿ ಶುರು ಮಾಡಿದಾಗಲೇ 1000 ಎಪಿಸೋಡ್‌ಗಳನ್ನು ಪೂರೈಸಬೇಕು ಎಂದು ಟಾರ್ಗೆಟ್ ಇಟ್ಟುಕೊಳ್ಳಲಾಗಿತ್ತಂತೆ. ಸದ್ಯ 949 ಎಪಿಸೋಡ್‌ಗಳು ಮುಕ್ತಾಯವಾಗಿದೆ. ಮರಾಠಿಯ 'ತುಲಾ ಪಹತೇ ರೆ' ಅಧಿಕೃತ ರೀಮೆಕ್ ಇದು. ರಾಜನಂದಿನಿ ವಿಲಾಸದ ಆರ್ಯವರ್ಧನ್ ಹಾಗೂ ವಠಾರದ ಸುಬ್ಬು- ಪುಷ್ಪ ದಂಪತಿ ಮುದ್ದಿನ ಮಗಳು ಅನು ಸಿರಿಮನೆ ಪ್ರೇಮ್ ಕಹಾನಿ ಬಹಳ ಸೊಗಸಾಗಿ ಮೂಡಿ ಬರ್ತಿದೆ. ಮರಾಠಿ ಧಾರಾವಾಹಿಯಿಂದ ಮೂಲ ಕಥೆಯನ್ನು ತೆಗೆದುಕೊಂಡು ಸಾಕಷ್ಟು ಬದಲಾವಣೆಗಳೊಂದಿಗೆ ಪ್ರತಿ ಸಂಚಿಕೆಯನ್ನು ಕಟ್ಟಿಕೊಡಲಾಗಿತ್ತು.

ಹೊರ ನಡೆದಿದ್ದ ಅನಿರುದ್ಧ್
ಚಿತ್ರರಂಗದಲ್ಲಿ ಅಷ್ಟಾಗಿ ಸಕ್ಸಸ್ ಸಿಗದ ನಟ ಅನಿರುದ್ಧ್‌ಗೆ 'ಜೊತೆ ಜೊತೆಯಲಿ' ಒಳ್ಳೆ ಬ್ರೇಕ್ ಕೊಟ್ಟಿತ್ತು. ಆರ್ಯವರ್ಧನ್ ಪಾತ್ರದಲ್ಲಿ ಅವರ ನಟನೆ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇನ್ನು ಅನು ಸಿರಿಮನೆ ಆಗಿ ಹೊಸ ಪ್ರತಿಭೆ ಮೇಘಾ ಶೆಟ್ಟಿ ಕೂಡ ಗಮನ ಸೆಳೆದರು. ಇಬ್ಬರನ್ನು ವೀಕ್ಷಕರು ಅವರ ಪಾತ್ರಗಳ ಹೆಸರಿನಿಂದಲೇ ಗುರ್ತಿಸುವಂತಾಯಿತು. ಆದರೆ ಕಳೆದ ವರ್ಷ ಚಿತ್ರತಂಡದ ಜೊತೆ ಕಿರಿಕ್ ಮಾಡಿಕೊಂಡು ನಟ ಅನಿರುದ್ಧ್ ಧಾರಾವಾಹಿಯಿಂದ ಹೊರ ನಡೆದಿದ್ದರು.
ಅನಿರುದ್ಧ್ ಜಾಗಕ್ಕೆ ಹರೀಶ್ ರಾಜ್
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಹೊರ ಬಂದ ಮೇಲೆ ನಟ ಹರೀಶ್ ರಾಜ್ ಆ ಪಾತ್ರಕ್ಕೆ ಆಯ್ಕೆ ಆಗಿದ್ದರು. ನೇರವಾಗಿ ಬದಲಾವಣೆ ಮಾಡದೇ ಕಥೆಯಲ್ಲಿ ಟ್ವಿಸ್ಟ್ ಕೊಟ್ಟು ಹರೀಶ್ ರಾಜ್ ಎಂಟ್ರಿ ಕೊಡಿಸಿದ್ದರು. ಕಳೆದ ಆರೇಳು ತಿಂಗಳಿನಿಂದ ಹರೀಶ್ ರಾಜ್ ಆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಶೂಟಿಂಗ್ ಮುಗಿಸಿದ್ದು ಒಂದೊಳ್ಳ ಧಾರವಾಹಿ ಕೊಟ್ಟ ಖುಷಿಯಲ್ಲಿ ತಂಡ ಇದೆ.

ಕೊನೆ ದಿನ ತಂಡ ಭಾವುಕ
4 ವರ್ಷಗಳಿಂದ ಇಡೀ ತಂಡ ಒಂದು ಕುಟುಂಬದಂತೆ ಇತ್ತು. ಕೊನೆಗೂ ಧಾರಾವಾಹಿ ಮುಗಿಸುವ ಸಮಯಯ ಬಂದಿದೆ. ಕೊನೆಯ ದಿನ ಶೂಟಿಂಗ್ ವೇಳೆ ಎಲ್ಲರೂ ಭಾವುಕರಾದರು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. 2 ಸಿನಿಮಾಗಳು ಕೈಯಲ್ಲಿವೆ. ಮತ್ತೊಂದಷ್ಟು ಸಿನಿಮಾ ಕಥೆಗಳನ್ನು ಕೇಳುತ್ತಿದ್ದೇನೆ. ಧಾರಾವಾಹಿಯಲ್ಲಿ ಮತ್ತೆ ನಟಿಸುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎಂದಿದ್ದಾರೆ.


Click it and Unblock the Notifications











