Meghana Shankarappa ; 'ಸೀತಾರಾಮ'ದಲ್ಲಿ ಪ್ರಿಯಾ ಪಾತ್ರ ಮಾಡಲು ಒಪ್ಪಿಕೊಂಡಿದ್ದೇಕೆ ಮೇಘನಾ ಶಂಕರಪ್ಪ ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸೀತಾ ರಾಮ" ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಯ ಹೆಸರು ಮೇಘನಾ ಶಂಕರಪ್ಪ. ಸೀತಾಳ ಸ್ನೇಹಿತೆ ಪ್ರಿಯಾಳಾಗಿ ನಟಿಸುತ್ತಿರುವ ಮೇಘನಾ ಶಂಕರಪ್ಪ ಪಾತ್ರ ಇಡೀ ಸೀತಾರಾಮ ಧಾರಾವಾಹಿಯಲ್ಲಿ ಬಹು ಮುಖ್ಯವಾದ ಪಾತ್ರವಾಗಿದೆ. ಈ ಪಾತ್ರವನ್ನು ಬಹಳ ಅದ್ಭುತವಾಗಿ ನಟಿ ಮೇಘನಾ ಶಂಕರಪ್ಪ ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿರುವ ಮೇಘನಾ ಶಂಕರಪ್ಪ ಕೆಲವು ದಿನಗಳ ಕಾಲ ಧಾರಾವಾಹಿಯಿಂದ ಹೊರಗೆ ಇದ್ದರು. ಇದೀಗ ಮತ್ತೆ ಸೀತಾರಾಮ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಟಪಟ ಎಂದು ಮಾತನಾಡುತ್ತಾ ಮುದ್ದು ಸಿಹಿಯಿಂದ ಪ್ರಿ ಎಂದೆನಿಸಿಕೊಳ್ಳುವ, ಪ್ರಿಯ ಅಶೋಕನ ಪತ್ನಿ. ನಾಯಕ ನಟಿ ಅಲ್ಲದಿದ್ದರೂ ನಾಯಕ ನಟಿಯ ಸ್ನೇಹಿತೆಯ ಈ ಪಾತ್ರ ಇಡೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ತಮ್ಮ ಪಾತ್ರದ ಬಗ್ಗೆ, ಅಭಿನಯದ ಬಗ್ಗೆ ಮಾತನಾಡಿರುವ ನಟಿ ಮೇಘನಾ ಶಂಕರಪ್ಪ, ತಾವು ಹಲವು ವರ್ಷಗಳಿಂದಲೂ ನಟನೆಯಲ್ಲಿ ತೊಡಗಿರುವುದರ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿದ್ದೇನೆ. ಬಾಲ ನಟಿಯಾಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅದಾದ ಮೇಲೆ ಕಿನ್ನರಿ ಧಾರಾವಾಹಿಯಲ್ಲೂ ನಟಿಸಿದ್ದೆ. ಆದರೆ ಸೀತಾರಾಮ ಧಾರಾವಾಹಿದಿಂದಲೇ ನನಗೆ ನಟಿಯಾಗಿ ಹೆಚ್ಚಿನ ಐಡೆಂಟಿಟಿ ಸಿಕ್ಕಿದ್ದು. ಮೊದಲು ನನಗೆ ನಟನೆಯಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಮಾಡಲಿಂಗ್ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ಆಸೆ ಇತ್ತು. ಕಾಲೇಜ್ ಮುಗಿಸಿದ ನಂತರ ಕ್ರಮೇಣ ನಟನೆಯಲ್ಲಿಯೂ ಆಸಕ್ತಿ ಆರಂಭವಾಯಿತು ಎಂದಿದ್ದಾರೆ.
ನಾನು ಈ ಮೊದಲು ಹಲವು ಧಾರಾವಾಹಿಗಳಿಗೆ ಆಡಿಶನ್ ನೀಡಿದ್ದೇನೆ. ಆದರೆ ಒಂದಲ್ಲ ಒಂದು ಕಾರಣಕ್ಕೆ ಪಾತ್ರಗಳು ಸಿಗಲಿಲ್ಲ. ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯ ಮೂಲಕ ನನಗೆ ಸ್ವಪ್ನ ಕೃಷ್ಣ ಮೇಡಂ ಪರಿಚಯವಾಗಿದ್ದರು. ಮೊದಲು ಸೀತಾರಾಮ ಧಾರಾವಾಹಿಯ ಪ್ರೊಡ್ಯೂಸರ್ ಅವರೇ ಆಗಿದ್ದರಿಂದ ನನಗೆ ಈ ರೀತಿಯ ಪಾತ್ರವನ್ನು ನಿಭಾಯಿಸಲು ಕರೆದರು ಎಂದು ಎಂದಿದ್ದಾರೆ.
ಇದರ ಜೊತೆಗೆ ಪಾತ್ರ ನಾಯಕ ನಟಿಯ ಪಾತ್ರವಲ್ಲದಿದ್ದರೂ ಒಳ್ಳೆಯ ಸ್ಕೋಪ್ ಇದೆ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಸುಮಾರು ಒಂದೂವರೆ ವರ್ಷಗಳ ಕಾಲ ಈ ಧಾರವಾಹಿ ಆರಂಭವಾಗಲು ಕಾದಿದ್ದೇನೆ. ನನಗಂತೂ ಪ್ರಿಯಾ ಪಾತ್ರ ಬಹಳ ಹಿಡಿಸಿದೆ. ನನ್ನ ನಿಜ ಜೀವನಕ್ಕೂ ಪ್ರಿಯಾ ಪಾತ್ರಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ ಎಂದಿದ್ದಾರೆ.
ತಮ್ಮ ಮದುವೆಯ ಬಗ್ಗೆಯೂ ಮಾತನಾಡಿದ ನಟಿ ಮೇಘನಾ ಶಂಕರಪ್ಪ ಇಂದು ಅರೇಂಜ್ ಮ್ಯಾರೇಜ್ ಗಿಂತ ಲವ್ ಮ್ಯಾರೇಜ್ ಗೆ ಸರಿಯಾದ ಹುಡುಗ ಸಿಗುವುದೇ ಕಷ್ಟ. ನನಗೆ ಆ ರೀತಿಯ ಯಾವುದೇ ಎಲ್ಲ ರಿಲೇಶನ್ ಶಿಪ್ ಗಳು ಇರಲಿಲ್ಲ. ಅಭಿನಯದ ಕ್ಷೇತ್ರದಿಂದ ಯಾರನ್ನು ಮದುವೆಯಾಗುವ ಆಸಕ್ತಿಯು ಇರಲಿಲ್ಲ. ಹಾಗಾಗಿ ನನ್ನ ತಂದೆ ತಾಯಿ ಆಯ್ಕೆ ಮಾಡಿದ ಹುಡುಗ, ನನ್ನ ಕೆಲವು ಬೇಸಿಕ್ ಆಕಾಂಕ್ಷೆಗಳನ್ನು ಮುಟ್ಟಿದ್ದರಿಂದ ಅರೇಂಜ್ ಮ್ಯಾರೇಜ್ ಗೆ ಒಪ್ಪಿಕೊಂಡೆ. ಮದುವೆಯಾಗಿ ಸುಖವಾಗಿದ್ದೇನೆ. ಮದುವೆಯ ಗಡಿಬಿಡಿ ಇರುತ್ತದೆ ಎಂದೇ ನಾನು ಧಾರಾವಾಹಿಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದೆ. ನನ್ನ ಆಯ್ಕೆಗಳನ್ನು ಸಪೋರ್ಟ್ ಮಾಡುವ ಗಂಡ ಬೇಕು ಎಂಬ ಆಸೆ ಇತ್ತು. ಹಾಗೆಯೇ ಆಗಿದೆ ಎಂದಿದ್ದಾರೆ ಮೇಘನಾ ಶಂಕ್ರಪ್ಪ.
ಇಂದು ಸಾಮಾಜಿಕ ಜಾಲತಾಣದಲ್ಲಿ ಆಗುವ ಬಾಡಿ ಶೇಮಿಂಗ್ ಬಗ್ಗೆಯೂ ಮಾತನಾಡಿದ ನಟಿ ಮೇಘನಾ ಶಂಕರಪ್ಪ ಇಂದು ದೇಹದ ಬಗ್ಗೆ ಬಹಳ ತೀಕ್ಷ್ಣವಾಗಿ ಕಾಮೆಂಟಿಸುವ ಅಭ್ಯಾಸ ಹೆಚ್ಚಾಗುತ್ತಿದೆ. ಅದರಲ್ಲೂ ನಾವು ಟಿವಿಯಲ್ಲಿ ಕಾಣಿಸಿಕೊಳ್ಳುವುದರಿಂದ ನಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿರುವುದರಿಂದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆ್ಯಕ್ಟೀವ್ ಇರುವುದರಿಂದ ನಮ್ಮನ್ನು ಬೇಗ ಟಾರ್ಗೆಟ್ ಮಾಡಿ ಪ್ರೇಕ್ಷಕರು ಕೆಟ್ಟ ಕೆಟ್ಟದಾಗಿ ನಮ್ಮ ದೇಹದ ಬಗ್ಗೆ ಮಾತನಾಡುತ್ತಾರೆ. ತೆಳ್ಳಗಿದ್ದರೂ ತಪ್ಪು ದಪ್ಪಗಿದ್ದರೂ ತಪ್ಪು ಹೀಗೆ ನಮ್ಮ ದೇಹದ ಬಗ್ಗೆ ಬಹಳಷ್ಟು ಅನಾವಶ್ಯಕ ನೆಗೆಟಿವ್ ಕಾಮೆಂಟ್ಸ್ ಗಳನ್ನು ಕಳಿಸುತ್ತಾರೆ. ಕೆಲವೊಮ್ಮೆ ಇದು ಬಹಳ ಬೇಸರವಾಗುತ್ತದೆ ಎಂದಿದ್ದಾರೆ.
ದಪ್ಪ ಅಥವಾ ತೆಳ್ಳಗೆ ಇರುವುದನ್ನು ಮೀರಿ ನಾವು ಆರೋಗ್ಯವಂತರಾಗಿದ್ದರೆ ಸಾಕು. ಬೇರೆ ಅವರ ಮಾತಿಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಟ್ಟ ಕಮೆಂಟ್ಸ್ ಕಳಿಸಿದವರ ಅಕೌಂಟನ್ನೇ ಬ್ಲಾಕ್ ಮಾಡಿ ಬಿಡುತ್ತೇನೆ. ನಮ್ಮ ದೇಹವನ್ನು ಹೊರುವವರು ನಾವು, ನಮಗೆ ನಮ್ಮ ಮೇಲೆ ಪ್ರೀತಿ ಇದ್ದರೆ ಸಾಕು ಎಂದು ಬಾಡಿ ಪಾಸಿಟಿವಿಟಿ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ ನಟಿ ಮೇಘನಾ ಶಂಕರಪ್ಪ.


Click it and Unblock the Notifications











