ಭೋಜಪುರಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಈ ನಟಿ ಕನ್ನಡಕ್ಕೆ ಕಮ್ ಬ್ಯಾಕ್; ಯಾರೀ ನಟಿ?
ನಟಿ ಮೇಘಶ್ರೀ ಅವರು ಸ್ಯಾಂಡಲ್‌ವುಡ್‌ಗೆ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೌದು, ಭೋಜಪುರಿ ಭಾಷೆಯಲ್ಲಿ 10ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ನಟಿ ಮೇಘಶ್ರೀ ಅವರು ಇದೀಗ ಚಂದನವನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದೇಗೌಡ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕುಂಟೆಬಿಲ್ಲೆ' ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಮೇಘಶ್ರೀ ಬದಲಾಗುತ್ತಿರುವ ಸಿನಿಮಾ ಟ್ರೆಂಡ್‌ಗಳ ಬಗ್ಗೆ ಮಾತನಾಡಿದ್ದಾರೆ.
"ಇಂದು ಜನ ಬದಲಾವಣೆಯನ್ನು ಕೇಳುತ್ತಿದ್ದಾರೆ. ನಾಯಕ ಪ್ರಧಾನ ಸಿನಿಮಾಗಳಿಗೆ ಹೆಚ್ಚಿನ ಭವಿಷ್ಯವಿಲ್ಲ. ಜನರು ಇದೀಗ ಸಿನಿಮಾ ವಿಚಾರದಲ್ಲಿ ಬಹಳ ಮುಂದುವರಿದಿದ್ದಾರೆ. ಪ್ರೇಕ್ಷಕರಿಗೆ ಸಿನಿಮಾ ಕಂಟೆಂಟ್ ಚೆನ್ನಾಗಿರಬೇಕು. ನಾಯಕನ ಓಲೈಸುವಿಕೆ ಅಂತಹ ಕಥೆಗಳು ಇದೀಗ ನಡೆಯುವುದಿಲ್ಲ. ಏನಿದ್ದರೂ ಕಥೆಯ ಸುತ್ತ ಪಾತ್ರಗಳು ಅಚ್ಚುಕಟ್ಟಾಗಿ ಸುತ್ತಬೇಕು. ಶುರುವಿನಿಂದ ಕೊನೆಯವರೆಗೂ ಪ್ರೇಕ್ಷಕರಿಗೆ ಮನರಂಜನೆ ಸಿಗಬೇಕು. ಹಾಗಾಗಿ ಇಂದು ಕಥೆಯೇ ಮುಖ್ಯ. ಈ ರೀತಿ ಟ್ರೆಂಡ್ ಬದಲಾಗುತ್ತಿರುವುದು ತುಂಬಾ ಒಳ್ಳೆಯದು. ಇದರಿಂದ ಮಹಿಳಾ ನಟರಿಗೂ ಹೆಚ್ಚಿನ ಪ್ರಾಧಾನ್ಯತೆ ಸಿಗಲಿದೆ"ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮೇಘಶ್ರೀ.

"ಬದಲಾಗುತ್ತಿರುವ ಈ ಟ್ರೆಂಡಿಗೆ ಹೊಂದುವ ಘಳಿಗೆ ಇದಾಗಿದ್ದು, ನಾವು ತಡ ಮಾಡಬಾರದು. ನಾನು ಕನ್ನಡದ 'ಕುಂಟೆಬಿಲ್ಲೆ' ಚಿತ್ರದ ಮೂಲಕ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಸಿನಿಮಾದಲ್ಲೂ ಚಿತ್ರ ಕಥೆಯೇ ನಿಜವಾದ ಹೀರೋ. ಹಾಗಾಗಿ ಇಂತಹ ಚಿತ್ರಕಥೆಗಳಲ್ಲಿ ಎಲ್ಲಾ ಪಾತ್ರಗಳಿಗೂ ಹಾಗೂ ಅಭಿನಯಕ್ಕೂ ಹೆಚ್ಚಿನ ಮಹತ್ವವಿರುತ್ತದೆ" ಎಂದಿದ್ದಾರೆ ನಟಿ ಮೇಘಶ್ರೀ.
"ನಮ್ಮ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಲಿದ್ದು ಇದೀಗ ಥಿಯೇಟರ್‌ನಿಂದ ಸೀದಾ ಮನೆಯ ಸ್ಕ್ರೀನ್ ಮೇಲೆ ಸಿನಿಮಾಗಳನ್ನು ನೋಡಲು ಜನ ಆರಂಭ ಮಾಡಿದ್ದಾರೆ. ಅದಕ್ಕೆ ತಕ್ಕುದಾದ ಎಲ್ಲಾ ರೀತಿಯ ತಯಾರಿಗಳನ್ನು ಚಿತ್ರತಂಡ ಮಾಡಿದೆ. ಒಂದು ವಿಭಿನ್ನ ಕಥೆಯನ್ನು ಇಟ್ಟುಕೊಂಡು ನಾವು ಪ್ರೇಕ್ಷಕರ ಮುಂದೆ ಬರಲಿದ್ದೇವೆ. ನಮ್ಮ ಚಿತ್ರಕಥೆ ಬಹಳ ಸ್ಪೆಷಲ್ ಆಗಿದ್ದು ಪ್ರೇಕ್ಷಕರು ಇದನ್ನು ಖುಷಿಯಿಂದ ಒಪ್ಪಿಕೊಳ್ಳುತ್ತಾರೆ ಎಂಬ ಆಕಾಂಕ್ಷೆಯಲ್ಲಿದ್ದೇವೆ" ಎಂದು ತಮ್ಮ ಸಿನಿಮಾ ಹಾಗೂ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೊರ ಹಾಕಿದ್ದಾರೆ ನಟಿ ಮೇಘಶ್ರೀ.
ಅಂದ ಹಾಗೆ ನಟಿ ಮೇಘಶ್ರೀ ಅವರು ತೆಲುಗು ಹಾಗೂ ಭೋಜಪುರಿ ಸಿನಿಮಾಗಳಲ್ಲಿ ಬಹಳಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2015 ರಿಂದ ಸಿನಿಮಾಗಳಲ್ಲಿ ಆ್ಯಕ್ಟೀವ್ ಇರುವ ನಟಿ ಮೇಘಶ್ರೀ 'ಆಕ್ಸಿಜನ್' ಚಿತ್ರದ ಮೂಲಕ ಕನ್ನಡ ಸಿನಿ ಕ್ಷೇತ್ರಕ್ಕೆ ಕಾಲಿಟ್ಟರು. 'ಡಾರ್ಲಿಂಗ್ ಒಸಿನ ಡಾರ್ಲಿಂಗ್', 'ಅನಗನಗ ಓಕ ಚಿತ್ರಂ', ಮುಂತಾದ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ ನಂತರ ಕನ್ನಡದಲ್ಲಿ 'ಕದ್ದುಮುಚ್ಚಿ', 'ಕೃಷ್ಣ ತುಳಸಿ', 'ದಶರಥ' ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ಜೂನಿಯರ್ ಎನ್‌ಟಿಆರ್ ಅವರ 'ಅರವಿಂದ ಸಮೇತ ವೀರ ರಾಘವ' ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಬಹಳಷ್ಟು ಪಾಪ್ಯುಲಾರಿಟಿ ಪಡೆದರು. 'ನಂದಿನಿ' ಎಂಬ ಮೆಗಾ ಸೀರಿಯಲ್‌ನ ಭಾಗವಾದ ಈಕೆ ಮುಂದೆ 'ಜ್ಯೋತಿ'ಯೆಂಬ ಧಾರಾವಾಹಿ ಪ್ರಮುಖ ಪಾತ್ರದಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಂದ ತಮ್ಮ ನಟನೆಗೆ ಬಹಳಷ್ಟು ಮೆಚ್ಚುಗೆಯನ್ನು ಪಡೆದರು.
ಕನ್ನಡದ ಪಾಪ್ಯುಲರ್ ಧಾರಾವಾಹಿಗಳಾದ 'ನಾಗಕನ್ನಿಕೆ', 'ಇವಳು ಸುಜಾತ' ಮುಂತಾವುದರಲ್ಲಿ ಕಾಣಿಸಿಕೊಂಡ ನಟಿ ಮೇಘಶ್ರೀ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯನ್ನು ಪಡೆದಿದ್ದರು. 'ಫರಿಷ್ಟ' ಸಿನಿಮಾ ಮೂಲಕ ಭೋಜಪುರಿ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಹತ್ತಕ್ಕೂ ಹೆಚ್ಚು ಭೋಜಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವುದಕ್ಕೆ ಆಗಾಗ ತಮ್ಮ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಮೂಲತಃ ಬೆಂಗಳೂರಿನವರೇ ಆದ ಮೇಘಶ್ರೀ ಕನ್ನಡದ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಖುಷಿ ತಂದಿದೆ.


Click it and Unblock the Notifications











