ಮೈಕೋ ಮಂಜು ಹೊಸ ಧಾರಾವಾಹಿ 'ಮಾಮಗಾರು'
ಹಲವು ದಶಕಗಳಿಂದ ಕನ್ನಡ ಕಿರುತೆರೆಗಳಲ್ಲಿ ಸಾಕಷ್ಟು ನಟ-ನಟಿಯರು ಸಕ್ರಿಯರಾಗಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರೆಲ್ಲಾ ಪೋಷಕ ಪಾತ್ರಗಳಲ್ಲಿ ನಟಿಸಿರುವುದೇ ಹೆಚ್ಚು. ಕೆಲವರು ನಾಯಕ ಪಾತ್ರದಿಂದ ಅಜ್ಜನ ಪಾತ್ರವನ್ನು ನಿಭಾಯಿಸುವವರೆಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುತ್ತಾರೆ.
ರವಿ ಭಟ್, ವೆಂಕಟೇಶ್ ರಾವ್, ಸ್ವಪ್ನ, ಪದ್ಮಜಾ ರಾವ್ ಹೀಗೆ ಸಾಕಷ್ಟು ಮಂದಿ ಇದ್ದಾರೆ. ಹಳೆಯ ಕಿರುತೆರೆ ನಟರ ಸಾಲಿಗೆ ನಿಲ್ಲುವ ಮತ್ತೊಬ್ಬ ಪ್ರತಿಭಾನ್ವಿತ ನಟ ನಟ ಮೈಕೋ ಮಂಜು.

'ಮಾಯಾಮೃಗ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮೈಕೋ ಮಂಜು ನಟಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇರುವ ಇವರು ಈಗ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ.
25 ವರ್ಷಗಳಿಂದ ನಟನೆ
ಮೈಕೋ ಮಂಜು ಒಂದು ಕಾಲದ ಹ್ಯಾಂಡ್ಸಮ್ ಹೀರೋ ಆಗಿದ್ದರು. ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಲ್ಲಿ ನಾಯಕನ ಪಾತ್ರದಲ್ಲಿ ಮಿಂಚಿದ್ದರು. ಎರಡೂವರೆ ದಶಕಗಳ ಹಿಂದೆಯೇ 'ಮಾಯಾಮೃಗ' ಧಾರಾವಾಹಿಯಲ್ಲೂ ನಟಿಸಿದ್ದರು. 'ರಂಗೋಲಿ' ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸಿದ್ದು, ಇವರಿಗೆ ಒಳ್ಳೆಯ ಬ್ರೇಕ್ ಕೊಟ್ಟ ಧಾರಾವಾಹಿ ಇದು. ಇತ್ತೀಚೆಗೆ 'ಅಸಂಭವ', 'ಗೌರಿಪುರದ ಗಯ್ಯಾಳಿಗಳು', 'ನೇತ್ರಾವತಿ', 'ಸುಂದರಿ', 'ಕಾವ್ಯಾಂಜಲಿ', 'ನಯನತಾರ', 'ಸೇವಂತಿ', 'ಕಸ್ತೂರಿ ನಿವಾಸ', 'ಭೂಮಿ ತಾಯಾಣೆ', 'ಕಮಲಿ', 'ಕನ್ಯಾದಾನ'ದಂತ ಧಾರಾವಾಹಿಗಳಲ್ಲಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗ ಹೀರೋ ಆಗಿದ್ದವರು ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಂಗಭೂಮಿ ಕಲಾವಿದ
ಸುಮಾರು ಎರಡು ದಶಕಗಳಿಂದ ಕಿರುತೆರೆಯಲ್ಲಿರುವ ಮೈಕೋ ಮಂಜು ಅವರು ಉದಯ ಟಿವಿಯಲ್ಲಿ ಪ್ರಸಾರವಾಗುವ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ಹಲವಾರು ನಾಟಕಗಳಲ್ಲಿ ನಟಿಸಿ ಬಳಿಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಮೈಕೋ ಮಂಜು ಅವರು ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ಹೃದಯ ಹೃದಯ' ಸಿನಿಮಾ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮೈಕೋ ಮಂಜು ಸಿನಿಮಾಗಳು
'ಆಹಾ ನನ್ನ ತಂಗಿ ಮದುವೆ', 'ಚೌಡೇಶ್ವರಿ ಮಹಿಮೆ', 'ಕಿಚ್ಚ' ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಮೈಕೋ ಮಂಜು ಬಣ್ಣ ಹಚ್ಚಿದ್ದಾರೆ. ಸಿನಿಮಾಗಳಲ್ಲಿ ತಮ್ಮ, ಸ್ನೇಹಿತ ಹಾಗೂ ತಂದೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಮೈಕೋ ಮಂಜು ಅವರಿಗೆ ಮದುವೆಯಾಗಿದ್ದು, ಒಂದು ಮಗುವೂ ಇದೆ. ಇವರ ಪುಟ್ಟ ಕುಟುಂಬ ಬಹಳ ಸುಂದರವಾಗಿದೆ. ಇನ್ನು 'ಚೋಟಾ ಚಾಂಪಿಯನ್'ನಂತಹ ರಿಯಾಲಿಟಿ ಶೋನಲ್ಲೂ ಮೈಕೋ ಮಂಜು ಅವರು ತಮ್ಮ ಮಗುವಿನ ಜೊತೆಗೆ ಭಾಗವಹಿಸಿದ್ದರು.
ಪರಭಾಷೆಯಲ್ಲಿ ಮೈಕೋ ಮಂಜು
ಕನ್ನಡ ಕಿರುತೆರೆ ಮಾತ್ರವಲ್ಲದೇ ಪರಭಾಷೆಯಲ್ಲೂ ಮೈಕೋ ಮಂಜು ನಟಿಸಿದ್ದಾರೆ. ಇದೀಗ ತೆಲುಗಿನ ಧಾರಾವಾಹಿಯೊಂದರಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಮಾ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರವಾಗಲಿದೆ. ಅದರಲ್ಲಿ ಮೈಕೋ ಮಂಜು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಲವು ದಿನಗಳಿಂದ ಇದರ ಪ್ರೋಮೋ ಹರಿದಾಡುತ್ತಿದೆ. ಧಾರಾವಾಹಿಯೂ ಕೂಡು ಕುಟುಂಬದ ಕಥೆಯ ಎಳೆಯಾಗಿದೆ. ಇದರಲ್ಲಿ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ಸುಹಾಸಿನಿ, ದರ್ಶನ್ ಕೆ ರಾಜು, ಮೈಕೋ ಮಂಜು ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯ ಪ್ರೋಮೋ ಪ್ರಸಾರವಾಗಿದ್ದು, ಇದೇ ತಿಂಗಳು ಶುರುವಾಗುತ್ತದೆ ಎಂದು ಊಹಿಸಲಾಗಿದೆ. ಈ ಧಾರಾವಾಹಿಗೆ 'ಮಾಮಗಾರು' ಎಂದು ಹೆಸರಿಡಲಾಗಿದೆ. ಧಾರಾವಾಹಿಯನ್ನು ನೋಡಲು ಹಲವರು ಕಾತುರರಾಗಿದ್ದಾರೆ.


Click it and Unblock the Notifications











