ಎಂದೂ ಮರೆಯದ ಧಾರಾವಾಹಿ ಟೈಟಲ್ ಸಾಂಗ್‌ಗಳು; ಇವುಗಳಲ್ಲಿ ನಿಮಗ್ಯಾವುದು ಇಷ್ಟ?
ಕನ್ನಡ ಕಿರುತೆರೆ ಇಂದು ನೂರಾರು ಧಾರವಾಹಿಗಳನ್ನು ಪ್ರೇಕ್ಷಕರಿಗೆ ನೀಡಿದೆ. ಅದರಲ್ಲಿ ಎಷ್ಟೋ ಧಾರಾವಾಹಿಗಳು ಅದರ ಕಥೆ ಹಾಗೂ ಅಭಿನಯ, ನಟ ನಟಿಯರ ಮೂಲಕ ಜನಮನ ಗೆದ್ದರೆ ಇನ್ನಷ್ಟು ಧಾರಾವಾಹಿಗಳು ಟೈಟಲ್ ಸಾಂಗ್ ಮೂಲಕವೇ ಇಂದಿಗೂ ಜನರ ಮನಸ್ಸಿನಲ್ಲಿ ಮರೆಯಲಾಗದ ಸ್ಥಾನ ಪಡೆದಿದೆ.
ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂಡಲ ಮನೆ' ಧಾರಾವಾಹಿಯು ತನ್ನ ಟೈಟಲ್ ಸಾಂಗ್ ನಿಂದಲೇ ಸಕತ್ ಸದ್ದು ಮಾಡಿತ್ತು. "ರೆಂಬೆ ಕೊಂಬೆಯ ಮ್ಯಾಲ ಗೂಡು ಕಟ್ಟಿದ್ದಾವ ರೆಕ್ಕಿ ಬಲಿತ ಹಕ್ಕಿ..." ಎನ್ನುತ ಆರಂಭವಾಗುವ ಧಾರಾವಾಹಿಯ ಈ ಟೈಟಲ್ ಸಾಂಗ್, ಇಂದಿಗೂ ಕೂಡ ಅಷ್ಟೇ ಪ್ರಖ್ಯಾತಿಯನ್ನು ಹೊಂದಿದೆ.

ಇನ್ನು 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯ ಟೈಟಲ್ ಸಾಂಗ್ ಕೂಡಾ ಅಷ್ಟೇ! ಹಿರಿಯ ಕಲಾವಿದ ಅನಂತನಾಗ್ ಅವರ ಅಭಿನಯದಲ್ಲಿ ಮೂಡಿ ಬರುತ್ತಿದ್ದ ಪ್ರೀತಿ ಇಲ್ಲದ ಮೇಲೆ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರೆಟ್ ಧಾರಾವಾಹಿಗಳಲ್ಲೊಂದಾಗಿತ್ತು. ಜಿಎಸ್ ಶಿವರುದ್ರಪ್ಪ ಅವರು ಬರೆದ ಭಾವಗೀತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಮೋಡ ಕಟ್ಟಿತು ಹೇಗೆ" ಎಂಬ ಹಾಡನ್ನೇ ಈ ಧಾರಾವಾಹಿ ಟೈಟಲ್ ಸಾಂಗ್ ಮಾಡಿದ್ದರಿಂದ ಇದು ಇಂದಿಗೂ ಕಿರುತರೆ ಪ್ರೇಕ್ಷಕರ ನೆಚ್ಚಿನ ಹಾಡುಗಳೊಂದಾಗಿ ಉಳಿದಿದೆ.
'ಮುಕ್ತ' ಧಾರಾವಾಹಿಯ ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಹಾಡು ಇಂದಿಗೂ ಕೇಳುಗರ ನೆಚ್ಚಿನ ಹಾಡುವುದರಲ್ಲಿ ಸಂದೇಹವಿಲ್ಲ. ಬಹಳ ಅರ್ಥಗರ್ಭಿತವಾದ ಈ ಹಾಡನ್ನು ಗಾಯಕ ಸಿ ಅಶ್ವತ್ ಅವರು ಹಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಈ ಧಾರಾವಾಹಿ ಟೈಟಲ್ ಹಾಡು ಎಲ್ಲರ ಮನ ಗೆದ್ದಿದೆ.

'ಮುಕ್ತ ಮುಕ್ತ' ಧಾರಾವಾಹಿಯ ಹಾಡು, "ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ.. " ಎಂದು ಆರಂಭವಾಗುವ ಈ ಹಾಡು ಇಂದಿಗೂ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿ ಉಳಿದಿದೆ. ಗಾಯಕ ವಿಜಯ ಪ್ರಕಾಶ್ ಅವರು ಇಂದಿಗೂ ತಾವು ನೀಡುವ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಹಾಡುವ ಪ್ರತೀತಿಯನ್ನು ಮುಂದುವರೆಸಿದ್ದಾರೆ.
'ಪುಟ್ಟಗೌರಿ ಮದುವೆ' ಧಾರಾವಾಹಿಯ ಟೈಟಲ್ ಸಾಂಗ್ ಕೂಡಾ ವೀಕ್ಷಕರ ಮಬ ಸೆಳೆದಿತ್ತು. ದಶಕದ ಹಿಂದೆ ಪ್ರಸಾರವಾಗುತ್ತಿದ್ದ 'ಪುಟ್ಟಗೌರಿ ಮದುವೆ' ಬಹಳ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿತ್ತು. ಈ ಧಾರಾವಾಹಿಯ ವಿಭಿನ್ನ ಕಥೆಯಂತೆ ಅದರ ಟೈಟಲ್ ಸಾಂಗ್ ಕೂಡ ಬಹಳ ವಿಭಿನ್ನವಾಗಿ ಮೂಡಿ ಬಂದಿತ್ತು. ಬಹಳಷ್ಟು ಪ್ರೇಕ್ಷಕರಿಗೆ ಈ ಧಾರಾವಾಹಿ ಟೈಟಲ್ ಸಾಂಗ್ ಇಂದಿಗೂ ನೆನಪಿನಲ್ಲಿರುವುದು ಅದರ ವೈಶಿಷ್ಟ್ಯತೆಯನ್ನು ಹೇಳುತ್ತದೆ.
'ಚಿಟ್ಟೆ ಹೆಜ್ಜೆ' ಟೈಟಲ್ ಸಾಂಗ್, ನೀಲಿ ಬಾನು ಖಾಲಿ ಹೃದಯ ಕಾಡು ಹುಡುಗಿ ಮೋಡ ಗೆಳೆಯ ಎನ್ನುತ್ತಾ ಬಹಳ ವಿಭಿನ್ನವಾಗಿದ್ದ ಈ ಟೈಟಲ್ ಸಾಂಗ್ ಬಹಳಷ್ಟು ಜನರ ನೆಚ್ಚಿನ ಹಾಡುಗಳಲ್ಲೊಂದು. ಚಿಟ್ಟೆ ಹೆಜ್ಜೆ ಧಾರಾವಾಹಿ ಬಹಳಷ್ಟು ಸಂಚಿಕೆಗಳವರೆಗೆ ಓಡದಿದ್ದರೂ ಆ ಟೈಟಲ್ ಸಾಂಗ್ ಮಾತ್ರ ಇಂದಿಗೂ ಜನರ ಮನದಲ್ಲಿ ಅಚ್ಚಾಗಿ ಉಳಿದಿದೆ.
'ಸೀತಾ ರಾಮ' ಧಾರಾವಾಹಿ ಟೈಟಲ್ ಸಾಂಗ್, ತೆಲುಗಿನ ಸೀತಾ ರಾಮ ಎಂಬ ಖ್ಯಾತ ಸಿನಿಮಾದ ಬ್ಯಾಗ್ರೌಂಡ್ ಮ್ಯೂಸಿಕ್ ಆಧರಿಸಿ ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ ಟೈಟಲ್ ಸಾಂಗ್ ಬಹಳ ವಿಭಿನ್ನವಾಗಿ ಮೂಡಿಬಂದಿದೆ. ಬಹಳಷ್ಟು ಕಿರುತೆರೆ ಪ್ರೇಕ್ಷಕರ ಫೇವರೆಟ್ ಸಾಂಗ್ ಇದಾಗಿದ್ದು ಹಲವಾರು ಅಭಿಮಾನಿಗಳು ರೀಲ್ಸ್‌ನಲ್ಲಿ ಈ ಹಾಡನ್ನು ಹಾಡಿ ಟ್ರೆಂಡ್ ಸೃಷ್ಟಿಸಿದ್ದರು.


Click it and Unblock the Notifications











