ವರ್ಷಗಳ ನಂತರ ಮತ್ತೆ ಕಿರುತೆರೆಗೆ ಮರಳಿದ 'ಮುದ್ದುಲಕ್ಷ್ಮಿ'; ನಟಿ ಅಶ್ವಿನಿಯ ಆ ಧಾರಾವಾಹಿ ಯಾವುದು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಮುದ್ದುಲಕ್ಷ್ಮಿ' ಕೂಡಾ ಒಂದು. 'ಮುದ್ದುಲಕ್ಷ್ಮಿ'ಯಲ್ಲಿ ನಾಯಕಿ ಲಕ್ಷ್ಮಿ ಆಲಿಯಾಸ್ ಮುದ್ದು ಆಗಿ ಅಭಿನಯಿಸಿದ ಅಶ್ವಿನಿ ತಮ್ಮ ನಟನೆಯ ಮೂಲಕವೇ ಗುರುತಿಸಿಕೊಂಡಿರುವ ಬೆಡಗಿ. 'ಮುದ್ದುಲಕ್ಷ್ಮಿ' ಧಾರಾವಾಹಿಯ ನಂತರ 'ಮುದ್ದುಮಣಿಗಳು' ಎನ್ನುವ ಹೊಸ ಅಧ್ಯಾಯವೊಂದು ಶುರುವಾಗಿದ್ದು, ಅದರಲ್ಲಿ ಜಾಹ್ನವಿಯಾಗಿ ಈಕೆ ಕಾಣಿಸಿಕೊಂಡಿದ್ದರು. 'ಮುದ್ದುಲಕ್ಷ್ಮಿ', 'ಮುದ್ದುಮಣಿಗಳು' ಧಾರಾವಾಹಿಯ ಬಳಿಕ ಕಿರುತೆರೆಯಿಂದ ದೂರವಿದ್ದ ಅಶ್ವಿನಿ ಇದೀಗ ಕಿರುತೆರೆಗೆ ಮರಳಿದ್ದಾರೆ.
ಉದಯ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಸೂರ್ಯವಂಶ'ದ ಪ್ರೋಮೋ ಇದೀಗ ರಿಲೀಸ್ ಆಗಿದೆ. ಅನಿರುದ್ಧ್ ಜತ್ಕರ್ ನಾಯಕರಾಗಿ ನಟಿಸಲಿರುವ ವಿಚಾರ ಪ್ರೋಮೋದಿಂದ ರಿವೀಲ್ ಆಗಿದೆ. ಇದರ ಜೊತೆಗೆ ಪ್ರೋಮೋದಲ್ಲಿ ಅಶ್ವಿನಿ ಕೂಡಾ ಕಾಣಿಸಿಕೊಂಡಿದ್ದು, ನಾಯಕಿಯಾಗಿ ನಟಿಸಲಿದ್ದಾರೆ. ಆ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ.

'ಅನುರಾಗ ಸಂಗಮ' ಧಾರಾವಾಹಿಯ ಛಾಯಾಳಾಗಿ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ನಟಿಸಿದ್ದು ಖಳನಾಯಕಿಯಾಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ ಶಶಿಕಲಾ ಎಂಬ ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿದ್ದರು ಅಶ್ವಿನಿ. ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ'ದಲ್ಲಿ ನಟಿಸಿದ ಈಕೆ ಮುಂದೆ ಬದಲಾದುದು ಮುದ್ದುಲಕ್ಷ್ಮಿಯಾಗಿ.
ನಾಲ್ಕು ವರ್ಷಗಳ ಕಾಲ 'ಮುದ್ದು'ಯಾಗಿ ಕಾಣಿಸಿಕೊಂಡ ಅಶ್ವಿನಿ ಕಿರುತೆರೆ ವೀಕ್ಷಕರ ಮನೆ ಮಾತ್ರವಲ್ಲ ಅವರ ಮನವನ್ನು ಸೆಳೆದುಬಿಟ್ಟರು. ಮನೆಮಗಳಾಗಿ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿದ ಈಕೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ. ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಮಟ್ಟಿಗಾಜಲು'ವಿನಲ್ಲಿ ಚಿಟ್ಟಿಯಾಗಿ ಅಶ್ವಿನಿ ನಟಿಸಿದ್ದರು. ಏಕಕಾಲಕ್ಕೆ ಕನ್ನಡ ಮತ್ತು ತೆಲುಗು ಧಾರಾವಾಹಿ ಇವೆರಡರಲ್ಲಿ ನಟಿಸಿದ್ದ ಅಶ್ವಿನಿ ಕಿರುಪರದೆಗೆ ಕಾಲಿಟ್ಟಿದ್ದು ನಿರೂಪಕಿಯಾಗಿ ಎಂಬ ವಿಷಯ ಹಲವರಿಗೆ ತಿಳಿದಿರಲಿಕ್ಕಿಲ್ಲ.

ಮ್ಯೂಸಿಕ್ ಚಾನೆಲ್‌ವೊಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ಕಿರುಪರದೆಗೆ ಅಶ್ವಿನಿ ಕಾಲಿಟ್ಟಿದ್ದರು. ಮುಂದೆ ನಟನೆಯತ್ತ ಮುಖ ಮಾಡಿದ ಈಕೆ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟಿಸಿ ಅಶ್ವಿನಿ ಸೈ ಎನಿಸಿಕೊಂಡಿದ್ದರು . 'ಮುದ್ದುಲಕ್ಷ್ಮಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಈಕೆ ಈಗ 'ಸೂರ್ಯವಂಶ' ಮೂಲಕ ಮರಳಿರುವುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ.


Click it and Unblock the Notifications











