ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕಿರುತೆರೆ ನಟ ಮುಕೇಶ್ ಗೌಡ; ಈ ನಟ ಹಿನ್ನೆಲೆಯೇನು ಗೊತ್ತೇ?
ತೆಲುಗಿನ ಸ್ಟಾರ್ ಮಾ ಚಾನಲ್‌ನಲ್ಲಿ ಪ್ರಸಾರವಾಗುತ್ತಿರುವ 'ಗುಪ್ಪೆದಂತ ಮನಸ್ಸು' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಮುಕೇಶ್ ಗೌಡ ಇದೀಗ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.
ಹೌದು, ಮುಖೇಶ್ ಗೌಡ ಅವರ 'ಗುಪ್ಪೆದಂತ ಮನಸ್ಸು'ಎಂಬ ಧಾರಾವಾಹಿಯೂ ಕನ್ನಡ ಕಿರುತೆರೆಯಲ್ಲೂ ಡಬ್ ಆಗಿ ಪ್ರಸಾರವಾಗುತ್ತಿದೆ. ಇದು ತೆಲುಗು ಮೂಲತಃ ಸೀರಿಯಲ್ ಆಗಿದ್ದರೂ ಕೂಡ ಕನ್ನಡಿಗರು ಮೆಚ್ಚಿ ನೋಡುವಂತಹ ಧಾರಾವಾಹಿಯಲ್ಲೊಂದು.

ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಹೊಂಗನಸು ' ಎಂಬ ಹೆಸರಿನಲ್ಲಿ ಇದು ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಮುಕೇಶ್ ಗೌಡರವರು ರಿಷಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮುಖೇಶ್ ಗೌಡರವರಿಗೆ ಸಾಕಷ್ಟು ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಈತನ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ಳಲು ಹಲವಾರು ಹುಡುಗಿಯರು ತುದಿಗಾಳಿನಲ್ಲಿ ನಿಂತು ಕಾಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ಗಳಲ್ಲಿ ಇವರು ತುಂಬಾ ಆ್ಯಕ್ಟಿವ್. ಇವರಿಗೆ ಇನ್ಸ್ಟಾಗ್ರಾಂನಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದು, ಇವರ ಪೋಸ್ಟ್‌ಗಳಿಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಹಲವಾರು ಹುಡುಗಿಯರು ಲೈನ್‌ನಲ್ಲಿ ನಿಂತು ಪ್ರಪೋಸಲ್ಸ್ ಕೇಳಿರುವುದು ಇದೆ.
ಇದೇ ಚಾಕಲೇಟ್ ಬಾಯ್ ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರ 'ತೀರ್ಥರೂಪ ತಂದೆಯವರಿಗೆ ' ಚಿತ್ರವು ಮುಂದಿನ ವರ್ಷ ಎಂದರೆ 2025 ರಲ್ಲಿ ಬಿಡುಗಡೆಯಗಲಿದ್ದು, ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮತ್ತು ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ ಹೌಸ್‌ನಿಂದ ನಿರ್ಮಾಣಗೊಂಡಿದೆ. ಜಗನ್ನಾಥ್ ಅವರ 'ಹೊಂದಿಸಿ ಬರೆಯಿರಿ' ಸಿನಿಮಾ ಕಂಟೆಂಟ್ ದೃಷ್ಟಿಯಿಂದ ಸಾಕಷ್ಟು ಹೆಸರು ಮಾಡಿತ್ತು. ಈ ಸಿನೆಮಾದ ಸ್ಟೋರಿ ಲೈನ್‌ಗೆ ಬಹಳಷ್ಟು ಮಂದಿ ಮೆಚ್ಚುಗೆಯನ್ನು ಸೂಚಿಸಿದ್ದರು.

ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಇಷ್ಟಲ್ಲದೆ ಮುಕೇಶ್ ಗೌಡ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಹೌದು, ಚಿತ್ರ ರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಿಸಿಕೊಳ್ಳುವುದು ಸರ್ವೇಸಾಮಾನ್ಯ. ಯಶ್, ರಿಷಬ್ , ಇವರೆಲ್ಲದೆ ಹಲವಾರು ಕಲಾವಿದರು ತಮ್ಮ ಹೆಸರುಗಳನ್ನು ಬದಲಿಸಿಕೊಂಡಿರುವುದು ನಮಗೆಲ್ಲರಿಗೂ ಗೊತ್ತು. ಹಾಗೆಯೇ ಮುಕೇಶ್ ಗೌಡ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಂತೆ ಈ ನಟ ತಮ್ಮ ಹೆಸರನ್ನು ನಿಹಾರ್ ಮುಕೇಶ್ ಎಂದು ಬದಲಿಸಿದ್ದಾರೆ.
'ಹೊಂಗನಸು' ಧಾರಾವಾಹಿಯ ಶೂಟಿಂಗ್ ಕೆಲಸಗಳೆಲ್ಲ ಮುಗಿದಿದ್ದು, ಇವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಬರುತ್ತಾರೇನೋ ಎಂಬ ಸಂಶಯ ಎಲ್ಲರಲ್ಲಿ ಕಾದು ಕುಳಿತಿತ್ತು. ಇವರಿಗಿರೋ ಫ್ಯಾನ್ ಫಾಲೋಯಿಂಗ್ ನೋಡಿ ವೀಕ್ಷಕರಂತೂ ಫಿಕ್ಸ್ ಆಗಿದ್ದರೇನೋ. ಆದರೆ, ಇದೇ ವರಮಹಾಲಕ್ಷ್ಮಿ ಹಬ್ಬದಂದು ಈ ಚಾಕಲೇಟ್ ಬಾಯ್ ಪ್ರೇಕ್ಷಕರಲ್ಲಿ ಒಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ. 'ತೀರ್ಥರೂಪ ತಂದೆಯವರಿಗೆ' ಚಿತ್ರ ಟೈಟಲ್ ಅನ್ನು ಮೊನ್ನೆಯಷ್ಟೇ ಡಾಲಿ ಧನಂಜಯ್ ಬಿಡುಗಡೆ ಗೊಳಿಸಿದ್ದಾರೆ. ಅನೇಕ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಈ ಸಿನಿಮಾಕ್ಕೆ ಶುಭ ಕೋರಿದ್ದಾರೆ. 'ತೀರ್ಥರೂಪ ತಂದೆಯವರಿಗೆ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











