Rajani: ಸಕಲಾ ಕಲಾ ವಲ್ಲಭೆ ಕಿರುತೆರೆಯ ಈ ಸೂಪರ್ ಕ್ವೀನ್
ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ಲಾಕ್ ಬಾಸ್ಟರ್ ಧಾರವಾಹಿ 'ಅಮೃತವರ್ಷಿಣಿ' ಯಾರಿಗೆ ಗೊತ್ತಿಲ್ಲ ಹೇಳಿ?! ಅಮೃತ ಹಾಗೂ ವರ್ಷ ಎಂಬ ಅಕ್ಕತಂಗಿಯರ ಕಥೆಯಾದ ಇದರಲ್ಲಿ ಅಮೃತ ಪಾತ್ರ ಮಾಡಿದ್ದ ರಜನಿ ತಮ್ಮ ಮುದ್ದುಮುಖ ಹಾಗೂ ಮುಗ್ಧತೆಯ ಅಭಿನಯಕ್ಕೆ ಹೆಸರುವಾಸಿಯಾಗಿದ್ದರು.
ವರ್ಷಗಳ ಕಾಲ ಪ್ರಸಾರವಾದ ಈ ಧಾರವಾಹಿಯಲ್ಲಿ ಅಮೃತಳ ಸ್ವಭಾವವನ್ನು ಮೆಚ್ಚಿ ಅದೆಷ್ಟೋ ಜನರು ರಜನಿ ಅವರ ಅಭಿನಯಕ್ಕೆ ಫಿದಾ ಆಗಿದ್ದರು. 'ಅಮೃತ ವರ್ಷಿಣಿ' ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ 'ಆತ್ಮಬಂಧನ'ದಲ್ಲಿ ನಾಯಕಿಯಾಗಿ ನಟಿಸಿದ್ದ ರಜನಿ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕ ಎಜೆ ಆಲಿಯಾಸ್ ಅಭಿರಾಮ್ ಜಯಶಂಕರ್ ಮೊದಲನೇ ಹೆಂಡತಿ ಅಂತರ ಆಗಿ ಅಭಿನಯಿಸುತ್ತಿದ್ದಾರೆ.
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಕ್ವೀನ್' ನಲ್ಲಿಯೂ ರಜನಿ ಸ್ಪರ್ಧಿಯಾಗಿ ಮೋಡಿ ಮಾಡುತ್ತಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಗಮನ ಸೆಳೆದಿದ್ದಾರೆ.

ರಜನಿ ನೃತ್ಯಗಾರ್ತಿಯೂ ಹೌದು
ಬಾಲ್ಯದಿಂದಲೂ ನೃತ್ಯದಲ್ಲಿ ಬಹಳ ಆಸಕ್ತಿ ಇದ್ದ ರಜನಿ ಅವರ ಆಸೆ ಕಂಡು ಅವರ ತಂದೆ ತಾಯಿ ಆಕೆಯನ್ನು ಡಾನ್ಸ್ ಕ್ಲಾಸ್‌ಗಳಿಗೆ ಸೇರಿಸಿದರು. ತದನಂತರ ಅವಕಾಶ ಸಿಕ್ಕಿದಾಗಲೆಲ್ಲಾ ಅದ್ಭುತವಾಗಿ ನೃತ್ಯ ಮಾಡುತ್ತಿದ್ದ ಈಕೆಗೆ ಹಲವಾರು ರಿಯಾಲಿಟಿ ಶೋಗಳ ಆಫರ್ ಕೂಡ ಬಂದವು. ಜೊತೆಗೆ ಒಂದಷ್ಟು ಡ್ಯಾನ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ರಜನಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಚೆಲುವೆ.

ಸಂಗೀತಕ್ಕೂ ಸೈ ರಜನಿ!
ಅಷ್ಟೇ ಅಲ್ಲದೆ ಸಂಗೀತದಲ್ಲೂ ಮುಂದಿದ್ದ ಇವರು ಹತ್ತಾರು ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುವ ಅವಕಾಶವನ್ನು ಗಿಟ್ಟಿಸಿಕೊಂಡರು. ರಾಜೇಶ್ ಕೃಷ್ಣನ್ ಸೇರಿದಂತೆ ಜನಪ್ರಿಯ ಗಾಯಕರೊಂದಿಗೆ ವೇದಿಕೆ ಹಂಚಿಕೊಂಡಿರುವ ಸಂತೃಪ್ತಿ ಇವರಿಗಿದೆ. ಆರ್ಕೆಸ್ಟ್ರಾಗಳು ಹಾಗೂ ಇತರೆ ಸಂಗೀತ ಕಾರ್ಯಕ್ರಮಗಳಲ್ಲಿ ತಮ್ಮ ಗಾಯನದ ಮೂಲಕ ಜನರನ್ನು ಮೋಡಿ ಮಾಡಿದ್ದಾರೆ ರಜನಿ.

ರಜನಿ ನಿರೂಪಕಿಯೂ ಹೌದು
'ಸಿರಿಗನ್ನಡ' ಎಂಬ ಕನ್ನಡ ವಾಹಿನಿಯಲ್ಲಿ 'ನಾರಿಗೊಂದು ಸೀರೆ' ಎಂಬ ರಿಯಾಲಿಟಿ ಶೋ ನಿರೂಪಕಿಯಾಗಿ ಮೋಡಿ ಮಾಡಿದ ರಜನಿಗೆ ನಿರೂಪಣೆ ಹೊಸದೇನಲ್ಲ. ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ' ಎಂಬ ಕಾರ್ಯಕ್ರಮದಲ್ಲೂ ನಿರೂಪಕಿಯಾಗಿ ಗಮನ ಸೆಳೆದ ಬೆಡಗಿ ರಜನಿ.
ಮಾತ್ರವಲ್ಲದೇ 'ಪಾಕಶಾಲೆ' ಎಂಬ ಅಡುಗೆ ಕಾರ್ಯಕ್ರಮದಲ್ಲಿಯೂ ನಿರೂಪಕಿಯಾಗಿ ತಮ್ಮ ನಿರೂಪಣಾ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು.

ಮಜಾ ಟಾಕೀಸ್‌ನಲ್ಲಿ ರಜನಿ ಹಂಗಾಮ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್- 2' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿ ಮುಂದೆ ಸೃಜನ್ ಲೋಕೇಶ್ ಅವರು ನಡೆಸಿಕೊಡುತ್ತಿದ್ದ 'ಮಜಾ ಟಾಕೀಸ್' ಕಾಮಿಡಿ ರಿಯಾಲಿಟಿ ಶೋನಲ್ಲಿ ಕೂಡ ಮಿಂಚಿದರು. 15-20 ಎಪಿಸೋಡ್‌ಗಳಲ್ಲಿ ನಟಿಸಿದ ಹೆಗ್ಗಳಿಕೆ ಈಕೆಯದು. 'ಅಂಬುಜಾ' ಸಿನಿಮಾದಲ್ಲಿ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿರುವ ರಜನಿ ಇದೀಗ 'ಸೂಪರ್ ಕ್ವೀನ್' ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











