"ಸಯ್ಯದ್ ಬೇಡ ಸವದತ್ತಿ ಯಲ್ಲಮ್ಮ" ಅಂತ ಹೆಸರು ಬದಲಿಸಿಕೊಳ್ಳಿ ಎಂದವನಿಗೆ ಸುಹಾನಾ ತಿರುಗೇಟು
'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್ ಕಳೆದ ವರ್ಷ ಹಿಂದೂ ಯುವಕ ನಿತಿನ್ ಶಿವಾಂಶ್ ಜೊತೆ ಮದುವೆ ಆಗಿದ್ದರು. ರಂಗಭೂಮಿ ಕಲಾವಿದ ನಿತಿನ್ ಹಾಗೂ ಸುಹಾನಾ ಅವರದ್ದು 16 ವರ್ಷ ಸ್ನೇಹ, ಪ್ರೀತಿ. ಅಂತಿಮವಾಗಿ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಆಶಯದಂತೆ ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಅಭಿಮಾನಿಗಳ ಜೊತೆ ಚಿಟ್ ಚಾಟ್ ನಡೆಸುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. ಮತ್ತೊಮ್ಮೆ Ask me a Question ಸೆಷನ್ ನಡೆಸಿದ್ದಾರೆ. ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ವೀಡಿಯೋ ಮಾಡಿ ಉತ್ತರಿಸಿದ್ದಾರೆ. ಈ ವೇಳೆ ನಿಮ್ಮ ಹೆಸರು ಬದಲಿಸಿಕೊಳ್ಳಿ ಎಂದು ನೆಟ್ಟಿಗನೊಬ್ಬ ವ್ಯಂಗ್ಯವಾಗಿ ಪ್ರಶ್ನೆ ಕೇಳಿದ್ದು ಮುಲಾಜಿಲ್ಲದೇ ಉತ್ತರಿಸಿದ್ದಾರೆ. ಆತನ ಮೂದಲಿಕೆಗೆ ಆಕ್ರೋಶ ವ್ಯಕ್ತಪಡಿಸಿ ಖಡಕ್ ತಿರುಗೇಟು ಕೊಟ್ಟಿದ್ದಾರೆ.

"ಸೈಯದ್ ಹೆಸರು ತುಂಬಾ ಅಮೂಲ್ಯವಾದದ್ದು. ಆದ್ದರಿಂದ ನಿಮ್ಮ ಹೆಸರನ್ನು ಸೈಯದ್ ಬದಲು ಸವದತ್ತಿ ಯಲ್ಲಮ್ಮ ಎಂದು ಬದಲಿಸಿಕೊಳ್ಳಿ" ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಸುಹಾನಾ ಉತ್ತರಿಸದೇ ಇರಬಹುದಿತ್ತು. ಆದರೆ ಆಕೆ ಯಾವುದೇ ಹಿಂಜರಿಕೆ ಇಲ್ಲದೇ ಪ್ರತಿಕ್ರಿಯಿಸಿದ್ದಾರೆ. "ನನಗೆ ಈತರ ಪ್ರಶ್ನೆಗಳು, ಕಾಮೆಂಟ್‌ಗಳು ಆಗಾಗ್ಗೆ ಬರ್ತಿರ್ತಾವೆ. ನಾನು ತಲೆ ಕೆಡಿಸಿಕೊಳ್ಳಲ್ಲ. ಆದರೆ ಸಾಕಷ್ಟು ಜನ ಬಹಳ ಪ್ರೀತಿಯಿಂದ ಮೆಸೇಜ್ ಮಾಡ್ತಾರೆ. ಅಂಥದ್ದನ್ನು ಪರಿಗಣಿಸ್ತೀನಿ. ಆದರೆ ಈ ಮನುಷ್ಯನಿಗೆ ಪ್ರಪಂಚದಲ್ಲಿರುವ ಎಲ್ಲಾ ಸಮಸ್ಯೆಗಳಿಗಿಂತ ನನ್ನ ಹೆಸರಿನಲ್ಲಿ ಸಮಸ್ಯೆ ಇದೆ. ಅಂದ್ರೆ, ಅದು ನಮ್ಮಲ್ಲಿ, ಅಲ್ಲ, ಈ ವ್ಯಕ್ತಿಯಲ್ಲಿದೆ. ಅದನ್ನು ಆತ ಸರಿಪಡಿಸಿಕೊಳ್ಳಲು ಗಮನ ಹರಿಸಲಿ" ಎಂದು ಸುಹಾನಾ ಹೇಳಿದ್ದಾರೆ.
ನನ್ನ ಹೆಸರು ನನ್ನ ಐಡೆಂಟಿಟಿ. ನಾನು ಯಾವತ್ತೂ ಅದನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಟ್ಟಿಲ್ಲ ಎಂದು ಸುಹಾನಾ ತಿಳಿಸಿದ್ದಾರೆ. "ನೀವು ಹೀಗೆ ಮಾತನಾಡಿ ಒಂದು ಧರ್ಮಯನ್ನು ಗೌರವಿಸುತ್ತಿದ್ದೀನಿ ಅಂತ ಅಂದುಕೊಂಡಿದ್ದೀರಾ.. ಇಷ್ಟು ದ್ವೇಷ ಸರಿಯಲ್ಲ. ನಿಮ್ಮಂತೆ ಮಾನಸಿಕ ಸಮಸ್ಯೆಯಿಂದ ಬಳಲುವವರಿಂದ ಒಂದು ನಂಬಿಕೆ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ. ನಾನು ಕೂಡ ಅದೇರೀತಿ ಸಹಾನುಭೂತಿ, ಘನತೆ, ಬೇರೆಯವರ ಬಗ್ಗೆ ಸಹಾನುಭೂತಿ ಇರುವ ಧರ್ಮವನ್ನು ಗೌರವಿಸಿಕೊಂಡು ಬಂದಿದ್ದೀನಿ. ಅದಕ್ಕೆ ವಿದ್ಯಾಭ್ಯಾಸ ಬಹಳ ಮುಖ್ಯ ಅನ್ನೋದು. ಒಳ್ಳೆ ಶಾಲೆ ಸೇರಿ, ಒಳ್ಳೆ ಬುದ್ಧಿ ಕಲೀರಿ. ನಿಮ್ಮ ಧರ್ಮವನ್ನು ಗೌರವಿಸಿ, ಇನ್ನೊಬ್ಬರ ಧರ್ಮವನ್ನು ಅಗೌರವಿಸುವುದು ಸರಿಯಲ್ಲ" ಎಂದು ಸುಹಾನಾ ತಿವಿದಿದ್ದಾರೆ.

ಈ ರೀತಿ ಮಾತನಾಡಿ ನಮ್ಮ ಧರ್ಮವನ್ನು ಉಳಿಸುತ್ತಿದ್ದೀವಿ ಅಂದುಕೊಂಡಿದ್ದೀರಾ. ಒಂದು ಧರ್ಮ ಉಳಿಯಲು ಕಂಡಿತ ನಿಮ್ಮಂಥವರ ಅವಶ್ಯಕತೆ ಇಲ್ಲವೇ ಇಲ್ಲ. ಓಹ್.. ದೇವರೇ, ಎಲ್ಲಿಂದ ಬರ್ತೀರಾ ನೀವೆಲ್ಲಾ ಎಂದು ಸುಹಾನಾ ಸಯ್ಯದ್ ಬೇಸರ ವ್ಯಕ್ತಪಡಿಸಿದ್ದಾರೆ. ಸುಹಾನ ಜೀ ಕನ್ನಡ ಸರಿಗಮಪ ಸೀಸನ್ 13ರ ಸ್ಪರ್ಧಿ ಆಗಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ದೇವರ ಭಕ್ತಿ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದರು. ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆಲ್ಲಾ ಆಕೆ ತಲೆ ಕೆಡಿಸಿಕೊಂಡಿರಲಿಲ್ಲ. ಎಲ್ಲಾ ಧರ್ಮಗಳು ಒಂದೇ ಎನ್ನುವ ಸಂದೇಶ ಸಾರುವ ಪ್ರಯತ್ನ ಮಾಡಿದ್ದರು.
ಸುಹಾನಾ ಸಯ್ಯದ್ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತಾರೆ. ಮದುವೆಗೂ ಮುನ್ನ ನಿತಿನ್ ಶಿವಾಂಶ್ ಜೊತೆ ಮಂತ್ರಾಲಯ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಮದುವೆ ಬಳಿಕ ಕೂಡ ಪತಿ ಸಮೇತ ರಾಯರ ದರ್ಶನ ಮಾಡಿದ್ದರು. ಇಬ್ಬರ ಕುಟುಂಬದ ಒಪ್ಪಿಗೆಯೊಂದಿಗೆ ನಡೆದ ಮದುವೆಯನ್ನು ರಾಯರ ಪವಾಡ ಎಂದು ಕರೆದಿದ್ದರು. ವಾರದ ಹಿಂದೆ ಸಾಗರದ ಮಾರಿಕಾಂಬ ದೇವಸ್ಥಾನಕ್ಕೆ ಕೂಡ ಭೇಟಿ ನೀಡಿದ್ದರು. ಈ ಬಗ್ಗೆ ಫೋಟೊ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ರು ಸುಹಾನ ಸಯ್ಯದ್.


Click it and Unblock the Notifications











