ಬಾಲ್ಯದ ಕನಸು ನನಸು ಮಾಡಿಕೊಂಡ ಅನುಷಾ ರೋಡಿಗ್ರಸ್: ಆ ಕನಸು ಏನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಮೈನಾ' ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರ ವರ್ಗದ ಮೂಲಕವೂ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದೆ 'ಮೈನಾ' ಧಾರಾವಾಹಿ. 'ಮೈನಾ' ಧಾರಾವಾಹಿಯಲ್ಲಿ ನಾಯಕಿ ಮೈನಾಳ ಗೆಳತಿ ಖುಷಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಅನುಷಾ ರೋಡಿಗ್ರಸ್.
ಅಂದ ಹಾಗೇ ನಟಿ ಅನುಷಾಗೆ ಕಿರುತೆರೆ ಹೊಸದೇನಲ್ಲ. ಅಸಲಿಗೆ ಅವರ ನಟನಾ ಪಯಣ ಕಿರುತೆರೆಯಿಂದ ಶುರುವಾಗಿತ್ತು. ಮೊದಲ ಧಾರಾವಾಹಿಯಲ್ಲಿಯೇ ಹಾಸ್ಯ ಪ್ರಧಾನವಾದ ಧಾರಾವಾಹಿಯಲ್ಲಿ ಅಭಿನಯಿಸಿದ ಈಕೆ ಶ್ರೀಮತಿ ಪಾತ್ರದ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿದ್ದರು.

ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಅನುಷಾ ಕಿರುತೆರೆ ಜೊತೆಗೆ ಸಿನಿಮಾದಲ್ಲಿಯೂ ಸಕ್ರಿಯರಾಗಿರುವ ಬೆಡಗಿ. ಕರಾವಳಿ ಮೂಲದ ಅನುಷಾ ಎಂಬಿಎ ಪದವೀಧರೆ ಕೂಡ ಹೌದು. ಮಾಡೆಲಿಂಗ್ ಮೂಲಕ ನಟನೆಯ ನಂಟು ಬೆಳೆಸಿಕೊಂಡಿರುವ ಈಕೆ 2014ರಲ್ಲಿ ನಡೆದ 'ಮಿಸ್ ಸೌತ್ ಇಂಡಿಯಾ' ಸ್ಪರ್ಧೆಯ ವಿನ್ನರ್ ಆಗಿ ಹೊರಹೊಮ್ಮಿದ್ದರು.
ಮಾಡೆಲಿಂಗ್‌ನ ಹೊರತಾಗಿ ಈಕೆ ನೃತ್ಯ ಕಲಾವಿದೆ ಹೌದು. ನೃತ್ಯವನ್ನು ಇಷ್ಟಪಟ್ಟಿರುವ ಈಕೆ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲಿತರು. ಹೌದು, ನಾದಬ್ರಹ್ಮ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ನೃತ್ಯವನ್ನು ಅನುಷಾ ಕಲಿತಿದ್ದಾರೆ. ಇದರ ಹೊರತಾಗಿ ಡ್ಯಾನ್ಸ್ ಮಾಸ್ಟರ್ ಮಾಲೂರು ಶ್ರೀನಿವಾಸ್ ಅವರ ಬಳಿಯಿಂದಲೂ ಈಕೆ ನೃತ್ಯವನ್ನು ಕರಗತ ಮಾಡಿಕೊಂಡರು.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀಮಾನ್ ಶ್ರೀಮತಿ' ಎನ್ನುವ ಹಾಸ್ಯ ಧಾರಾವಾಹಿಯಲ್ಲಿ ನಾಯಕಿ ಮಧುರ ಆಗಿ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದರು. ನವಿರಾದ ಹಾಸ್ಯದ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿರುವ ಈಕೆ ಪತಿಯ ಪ್ರೀತಿಗೆ ಹಾತೊರೆಯುವ ಪತ್ನಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು.
ಮುಂದೆ 'ಇವಳು ಸುಜಾತಾ' ಧಾರಾವಾಹಿಯಲ್ಲಿ ಸಾನ್ವಿಯಾಗಿ ನಟಿಸಿದ್ದ ಅನುಷಾ ರೋಡಿಗ್ರಸ್ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟಿಸಿದ್ದು ಕೆಲವೊಂದು ಸಂಚಿಕೆಗಳಾದರೂ ಮೊದಲ ಬಾರಿಗೆ ನೆಗೆಟಿವ್ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು.
ಶಶಾಂಕ್ ನಿರ್ದೇಶನದ 'ಕೃಷ್ಣಲೀಲಾ' ಸಿನಿಮಾದಲ್ಲಿ ನಾಯಕ ಅಜಯ್ ರಾವ್ ತಂಗಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು ಅನುಷಾ. ತದ ನಂತರ 'ಜಲ್ಸಾ', 'ಲೌಡ್ ಸ್ಪೀಕರ್', 'ಡಿಂಗ', 'ದಾರಿ ಯಾವುದಯ್ಯಾ ವೈಕುಂಠಕೆ' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
ಇದರ ಜೊತೆಗೆ 'ಬ್ಲೇಡ್ ಬಂಟಿ' ಸಿನಿಮಾದಲ್ಲಿ ಪಾತ್ರೆ ತೊಳೆಯುವ ಕೆಲಸದಾಕೆಯಾಗಿ ಕಾಣಿಸಿಕೊಂಡಿರುವ ಅನುಷಾ "ನನಗೆ ಅಭಿನಯಿಸಲು ಒಂದೇ ರೀತಿಯ ಪಾತ್ರದಲ್ಲಿ ಅಭಿನಯಿಸಲು ಇಷ್ಟವಿಲ್ಲ. ಹಾಗಾಗಿ ಬ್ಲೇಡ್ ಬಂಟಿ ಸಿನಿಮಾದಲ್ಲಿ ಪಾತ್ರೆ ತೊಳೆಯುವ ಕೆಲಸದಾಕೆಯ ಪಾತ್ರವನ್ನು ಒಪ್ಪಿಕೊಂಡೆ" ಎಂದು ಈ ಹಿಂದೆ ಅನುಷಾ ರೋಡಿಗ್ರಸ್ ಹೇಳಿಕೊಂಡಿದ್ದರು.
'ನೂರ್', 'ಕ್ಯಾಶ್ ಆನ್ ಡೆಲಿವರಿ', 'ಕತ್ತಲಿನ ತ್ರಿಶೂಲ' ಸಿನಿಮಾಗಳಲ್ಲಿ ನಟಿಸುತ್ತಿರುವ ಅನುಷಾ ರೋಡಿಗ್ರಸ್ ಶರಣ್ ಅಭಿನಯದ 'ಛೂ ಮಂತರ್'ನಲ್ಲಿ ಅತಿಥಿಯಾಗಿ ಮಿಂಚಿದ್ದಾರೆ. 'ಇವಳು ಸುಜಾತಾ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಅನುಷಾ ಇದೀಗ 'ಮೈನಾ' ಧಾರಾವಾಹಿಯ ಖುಷಿಯಾಗಿ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ.
ಅಭಿನಯಿಸುವುದಕ್ಕೆ ಕಿರುತೆರೆ ಆಗಬೇಕು, ಹಿರಿತೆರೆ ಆಗಬೇಕು ಎಂದೇನಿಲ್ಲ. ಕಿರುತೆರೆಯಾಗಲೀ, ಹಿರಿತೆರೆಯಾಗಲೀ, ನಟಿಸುವುದಕ್ಕೆ ಒಳ್ಳೆಯ ಪಾತ್ರ ಸಿಗಬೇಕು ಎಂಬುದು ಅನುಷಾ ರೋಡಿಗ್ರಸ್ ಅವರ ಅಭಿಪ್ರಾಯ.


Click it and Unblock the Notifications











