ಪ್ರೇಮಪಾಶದಲ್ಲಿ ಸಿಲುಕಿದ ಬಿಗ್ ಬಾಸ್ ಸ್ಫರ್ಧಿ, ಮಂಡಿಯೂರಿ ಅರಮನೆಯಲ್ಲಿ ಲವ್ ಪ್ರಪೋಸ್ -ಯಾರು ಈ ಮಿಸ್ಟರಿ ಮ್ಯಾನ್?
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂತಹ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ...
ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಈ ಸಾಲಿಗೆ ಈಗ ನಿತಿಭಾ ಕೌಲ್ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಹೌದು, ನಿತಿಭಾ ಕೌಲ್ .. ದೆಹಲಿಯ ಚೆಲುವೆ. ಗೂಗಲ್ ಇಂಡಿಯಾದಲ್ಲಿ ಸುಮಾರು 2.5 ವರ್ಷಗಳ ಕಾಲ ಕೆಲಸ ಮಾಡಿದ್ದ ನಿತಿಭಾ ಹಿಂದಿಯ ''ಬಿಗ್ ಬಾಸ್'' ಹತ್ತನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. 91 ದಿನ ಮನೆಯಲ್ಲಿದ್ದರು. ಈ ಕಾರ್ಯಕ್ರಮದ ಮೂಲಕ ಹಲವರ ಹೃದಯವನ್ನು ಗೆದ್ದು ಮನೆ ಮಾತಾದರು. ಇನ್ನು ಇದೇ ವೇಳೆ ಈ ಸೀಸನ್ ಗೆದ್ದ ಮನ್ವೀರ್ ಗುರ್ಜರ್ ಅವರ ಜೊತೆ ಇವರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.
ಇಂಥಾ ನಿತಿಭಾ ಕೌಲ್ ಸದ್ಯ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿತಿಭಾ ಅವರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರಾರು ಹೂವುಗಳಿಂದ ಅಲಂಕೃತವಾದ ಅರಮನೆಯಂತಹ ಸ್ಥಳಕ್ಕೆ ಸಹಾಯಕಿ ಕರೆತಂದಾಗ, ನಿತಿಭಾ ಅವರ ಕೈ ಹಿಡಿಯಲಿರುವ ಹುಡುಗ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ. ಆ ನಂತರ ಲಿಪ್ ಲಾಕ್ ಕೂಡ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ನಿತಿಭಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಲವ್ ಪ್ರಪೋಸ್‌ನ ಫೋಟೊ ಮತ್ತು ವಿಡಿಯೋ ವೈರಲ್ ಆಗಿವೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಿತಿಭಾ ನನ್ನ ಬದುಕಿನ ಪ್ರಮುಖ ಮತ್ತು ಶಾಶ್ವತವಾದ ಭಾಗವಾಗುವಂತೆ ಅವರು ಪ್ರೀತಿಯಿಂದ ಕೇಳಿದರು. ನಾನು ಕೂಡಲೇ ಹೌದು ಎಂದು ಹೇಳಿದೆ ಎಂದಿದ್ದಾರೆ. ವರ್ಷಗಳ ಕಾಲ ತಡರಾತ್ರಿಯ ಕರೆಗಳು, ವಿಮಾನ ನಿಲ್ದಾಣದ ವಿದಾಯಗಳು, ಆ ಕಣ್ಣೀರಧಾರೆ ಕೊನೆಗೂ ಸಾರ್ಥಕವಾಯ್ತು ಎಂದು ಹೇಳಿರುವ ನಿತಿಭಾ ತಮ್ಮ ಪ್ರಿಯಕರ ತಮಗೆ ಪ್ರಪೋಸ್ ಮಾಡಿದ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ಆ ಅಚ್ಚರಿ.. ಆ ಉಂಗುರ.. ಆ ಕೋಟೆ.. ನಾನು ಈ ಜಗದ ಅದೃಷ್ಟಶಾರಿ ಹುಡುಗಿ, ನನ್ನ ಕನಸಿನಂತೆ ನಿಶ್ಚಿತಾರ್ಥ ನಡೆದಿದೆ ಎಂದಿದ್ದಾರೆ. ನನ್ನ ಮುಂದಿನ ಅಧ್ಯಾಯಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ನಿತಿಭಾ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಗೌಹರ್ ಖಾನ್ ಸೇರಿ ಬೆಳ್ಳಿತೆರೆ ಮತ್ತು ಕಿರುತೆರೆಯ ಹಲವರು ನಿತಿಭಾ ಅವರಿಗೆ ಶುಭಾಶಯ ಹೇಳುತ್ತಿದ್ಧಾರೆ. ಬರೋಬ್ಬರಿ ಹತ್ತು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಿತಿಭಾ ಹೊಂದಿದ್ದು ಕೇವಲ 17 ಗಂಟೆಯಲ್ಲಿ ನಿತಿಭಾ ಅವರ ನಿಶ್ಚಿತಾರ್ಥದ ಫೋಟೊಗಳನ್ನು 45,683ಕ್ಕೂ ಅಧಿಕ ಜನ ಮೆಚ್ಚಿಕೊಂಡಿದ್ದಾರೆ. ಇನ್ನು 24 ಗಂಟೆಗಳಲ್ಲಿ ವಿಡಿಯೋ ಮೆಚ್ಚಿಕೊಂಡವರ ಸಂಖ್ಯೆ 108,900ಕ್ಕೂ ಅಧಿಕ ಇದೆ.

ಅಂದ್ಹಾಗೇ ಕಳೆದೊಂದು ವರ್ಷದಿಂದ ತಾವು ಕೈ ಹಿಡಿಯುತ್ತಿರುವ ಈ ಹುಡುಗನ ಜೊತೆ ಕಾಣಿಸಿಕೊಳ್ಳುತ್ತಿದ್ದರು. ರೀಲ್ಸ್ ಮತ್ತು ಫೋಟೊಗಳನ್ನು ಹಂಚಿಕೊಂಡರು ಕೂಡ ತುಂಬಾನೇ ತಲೆ ಉಪಯೋಗಿಸಿ ಹುಡುಗನ ಮುಖ ಕಾಣದಂತೆ ನೋಡಿಕೊಂಡಿದ್ದರು. ಹೀಗಾಗಿ ಹಲವರಲ್ಲಿ ಯಾರು ಈ ಮಿಸ್ಟರಿ ಮ್ಯಾನ್ ಎನ್ನುವ ಪ್ರಶ್ನೆ ಇತ್ತು. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇದೇ ಮೊದಲ ಬಾರಿ ನಿತಿಭಾ ಅವರ ಹಿಂಬಾಲಕರಿಗೆ ನಿತಿಭಾ ಮದುವೆಯಾಗುತ್ತಿರುವ ಹುಡುಗನ ಮುಖ ದರ್ಶನವಾಗಿದೆ. ಇನ್ನು ಮುಖ ತೋರಿಸಿರುವ ನಿತಿಭಾ ತಮ್ಮ ಈ ಹುಡುಗನ ಹೆಸರನ್ನು ಹೇಳಿಲ್ಲ. ಹೆಚ್ಚಿನ ಮಾಹಿತಿಯನ್ನು ಕೂಡ ಹಂಚಿಕೊಂಡಿಲ್ಲ. ಹೀಗಾಗಿ ಈ ಹಲವರು ನಿತಿಭಾ ಮದುವೆಯಾಗುತ್ತಿರುವ ಹುಡುಗನ ಜಾತಕವನ್ನು ಹುಡುಕಲು ಶುರು ಮಾಡಿದ್ದಾರೆ.


Click it and Unblock the Notifications











