'ಕಾದಂಬರಿ' ಟು 'ನಾ ನಿನ್ನ ಬಿಡಲಾರೆ': ನಟಿ ಸಹನಾ ಬಣ್ಣದ ಪಯಣ
19 ವರ್ಷಗಳಿಂದ ಬಣ್ಣ ಲೋಕದಲ್ಲಿರುವ ನಟಿ ಸಹನಾ ರವೀಂದ್ರ ಅವರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರೂ, ಕಿರುತೆರೆಯಲ್ಲಿ ಮಾತ್ರ ಪೋಷಕ ಪಾತ್ರಗಳಿಗೆ ತೃಪ್ತಿ ಪಟ್ಟಿದ್ದಾರೆ. ನನ್ನ ವೃತ್ತಿ, ಪ್ರವೃತ್ತಿ ಎಲ್ಲವೂ ನಟನೆ. ನಟನೆ ಮಾಡದೇ ಇರಲು ಸಾಧ್ಯವೇ ಇಲ್ಲ ಎಂದು ಸಹನಾ ಅವರು ತಮ್ಮ ನಟನೆಯ ಮೇಲಿನ ಮೋಹವನ್ನು ಹೇಳಿದ್ದಾರೆ.
ನಟಿ ಸಹನಾ ರವೀಂದ್ರ ಅವರನ್ನು ಹೆಸರಿನಿಂದ ಗುರುತಿಸುವುದಕ್ಕಿಂತಲೂ ಅಹಲ್ಯ ಎಂಬ ಹೆಸರು ಎಲ್ಲರಿಗೂ ಚಿರಪರಿಚಿತವಾದದ್ದು. 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಅಹಲ್ಯಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಓದು ಮುಗಿಸಿ ಬಣ್ಣದ ಲೋಕದಲ್ಲೇ ಉಳಿದ ನಟಿ
ಸಹನಾ ಅವರ 'ನಮ್ಮನೆ ಯುವರಾಣಿ' ಧಾರಾವಾಹಿ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದರು. ಇನ್ನು ನಟಿ ಸಹನಾ ರವೀಂದ್ರ ಅವರು 2005-2006 ರಲ್ಲಿ ಸುಳ್ಯದಲ್ಲೇ ಬಿಎ ಓದು ಮುಗಿಸಿ ಕೆಲಸಕ್ಕೆ ಹೋಗುವ ಆತುರದಲ್ಲಿದ್ದರು. ಸುಳ್ಯ ಬಳಿಯ ಚಿಕ್ಕ ಹಳ್ಳಿಯಲ್ಲಿ ಬೆಳೆದ ಸಹನಾ ಅವರು ಶಾಲೆಯ ದಿನಗಳಲ್ಲೇ ನೃತ್ಯ, ಸಂಗೀತ ಎಂದು ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಓದು ಮುಗಿದಿದ್ದೇ ನಿರೂಪಣೆಯನ್ನು ಮಾಡಲು ಶುರು ಮಾಡಿದರು. ಹೈದರಾಬಾದ್‌ನಲ್ಲಿ ನಡೆದ 'ಅನ್ನದಾತ' ಕಾರ್ಯಕ್ರಮವೊಂದಕ್ಕೆ ನಿರೂಪಣೆ ಮಾಡಿದ ಇವರು ವರ್ಷ ಕಳೆಯುವುದರಲ್ಲಿ ಬೆಂಗಳೂರಿಗೆ ಬಂದು ಬಿಟ್ಟರು. ಮೊದಲು 'ಕಾದಂಬರಿ' ಧಾರಾವಾಹಿಯಿಂದ ಬಣ್ಣದ ಲೋಕದ ಪಯಣ ಶುರು ಮಾಡಿದರು.
ಸಹನಾ ನಟಿಸಿದ ಧಾರಾವಾಹಿಗಳು
ಅಲ್ಲಿಂದ ನಟಿ ಸಹನಾ ರವೀಂದ್ರ 'ಹೀರೋ ನಾನಲ್ಲ', ತುಳು ಚಿತ್ರ 'ಬಿರ್ಸೆ', 'ಮಠ', 'ಪುಟಾಣಿ ಪವರ್', 'ಫಿರಂಗಿ' ಚಿತ್ರಗಳಲ್ಲಿ ನಟಿಸಿರುವ ಸಹನಾ ಅವರು ಎರಡು ಚಿತ್ರಗಳಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದಿಷ್ಟೇ ಅಲ್ಲದೇ, 'ಕಾದಂಬರಿ' ಧಾರಾವಾಹಿಯ ಬಳಿಕ 'ಮಾಂಗಲ್ಯ', 'ಅಗ್ನಿಶಿಖೆ', 'ಗುಪ್ತಗಾಮಿನಿ', 'ಆಂತರ್ಯ', 'ಗೋಕುಲದಲ್ಲಿ ಸೀತೆ', 'ಹೊಸ ಬಾಳಿಗೆ ನೀ ಜೊತೆಯಾದೆ', 'ಎಸ್‌ಎಸ್‌ಎಲ್‌ಸಿ ನನ್ ಮಕ್ಳು', 'ದೇವಯಾನಿ', 'ಅಮ್ನೋರು', 'ಶ್ರೀ ಗುರು ರಾಘವೇಂದ್ರ ವೈಭವ', 'ಕೃಷ್ಣ ರುಕ್ಮಿಣಿ', 'ಆನಂದರಾಗ' ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.
ನಟನೆಯ ಜೊತೆಗೆ ಸಾಗಿದ ಬದುಕು
ನಟಿ ಸಹನಾ ಅವರು ಪತಿಯೂ ಕೂಡ ಬಣ್ಣದ ಲೋಕದವರೇ, ಸಿನಿಮಾ ನಿರ್ದೇಶನದತ್ತ ಒಲವು ಹೋಂದಿರುವ ರವೀಂದ್ರ ಅವರು ಈಗಾಗಲೇ ಕೆಲಸ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಹನಾ ಅವರ ಮನೆಯಲ್ಲೂ ನಟನೆಗೆ ಸಪೋರ್ಟ್ ಇತ್ತು. ಇದೀಗ ಮದುವೆಯ ಬಳಿಕ ಪತಿಯೂ ಸಪೋರ್ಟ್ ಮಾಡುತ್ತಿದ್ದು, ನಟನೆಯ ಜೊತೆಗೆ ಸಹನಾ ಅವರು ಮನೆ, ಸಂಸಾರ, ಮಗಳನ್ನು ಕೂಡ ನಿಭಾಯಿಸುತ್ತಿದ್ದಾರೆ. ಇದೀಗ ನಟಿ ಸಹನಾ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಮೃತೇಶ್ವರ ಸ್ವಾಮಿಗಳ ಭಕ್ತೆಯ ಕಥೆ
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಾಯಕಿ ದುರ್ಗಾಳ ಚಿಕ್ಕಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಮೃತೇಶ್ವರ ಸ್ವಾಮಿಗಳ ಭಕ್ತೆಯಾಗಿರುವ ಪ್ರಭಾವತಿಗೆ ಸದಾ ಹಣದ ಹಿಂದೆಯೇ ಓಡುತ್ತಿದ್ದು, ಭಾವನ ಮಗಳು ದುರ್ಗಾ ಎಂದರೆ ಅಷ್ಟಕಷ್ಟೇ. ಅವರ ಮನೆಯಲ್ಲೇ ವಾಸವಿದ್ದರೂ ಕೂಡ ಪ್ರಭಾವತಿಗೆ ದುರ್ಗಾಳಿಂದಲೇ ತನ್ನ ಕುಟುಂಬದಲ್ಲಿ ಧರಿದ್ರ ನೆಲೆಸಿದೆ ಎಂಬ ಕೆಟ್ಟ ಆಲೋಚನೆ ಇದೆ. ಹೀಗಾಗಿ ಹಣಕ್ಕೋಸಕರ ಏನೂ ಬೇಕಿದ್ದರೂ ಮಾಡಲು ರೆಡಿ ಇರುವ ಪ್ರಭಾವತಿ ಕೆಟ್ಟವರ ಸಂಗ ಮಾಡಿದ್ದು, ಅವರ ಜೊತೆ ಸೇರಿ ದುರ್ಗಾಳ ಬದುಕಿಗೆ ಆಗಾಗ ಅಡ್ಡಿಯಾಗುತ್ತಲೇ ಇರುತ್ತಾಳೆ.


Click it and Unblock the Notifications











