ಮರಾಠಿಗೆ ರಿಮೇಕ್ ಆಗುತ್ತಿದೆ _ಕನ್ನಡದ 'ನಾ ನಿನ್ನ ಬಿಡಲಾರೆ' ಧಾರಾವಾಹಿ
ಜೀ ಕನ್ನಡದಲ್ಲಿ ಹಲವಾರು ಜನಪ್ರಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಕೆಲವು ಕನ್ನಡದವರದ್ದೇ ಕಥೆಗಳಾಗಿದ್ದರೆ ಇನ್ನು ಕೆಲವು ಬೇರೆ ಭಾಷೆಗಳಿಂದ ಕನ್ನಡಕ್ಕೆ ರಿಮೇಕ್ ಮಾಡಿದ ಧಾರಾವಾಹಿಗಳು. ಆದರೆ ಎಲ್ಲಾ ಧಾರಾವಾಹಿಗಳೂ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. ಹೇಗೆ ಬೇರೆ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗುತ್ತವೆಯೋ ಅದೇ ರೀತಿ ಕನ್ನಡದಲ್ಲಿ ಫೇಮಸ್ ಆದ ಧಾರವಾಹಿಗಳು ಬೇರೆ ಭಾಷೆಗೂ ರಿಮೇಕ್ ಆಗುತ್ತವೆ. ಆದರೆ ಧಾರಾವಾಹಿ ಪ್ರಾರಂಭಗೊಂಡು ಇಷ್ಟು ಬೇಗ ರಿಮೇಕ್ ಆದ ಧಾರಾವಾಹಿ ಸದ್ಯದಲ್ಲಿ ಯಾವುದೂ ಇಲ್ಲ.
ಕೆಲವು ಧಾರಾವಾಹಿಗಳು ಪರಭಾಷೆಗೆ ಡಬ್ ಆದರೆ ಇನ್ನು ಕೆಲವು ರಿಮೇಕ್ ಆಗುತ್ತವೆ. ಹೊಸದಾಗಿ ಪ್ರಸಾರ ಆರಂಭಿಸಿರುವ ಒಂದು ಕನ್ನಡ ಧಾರಾವಾಹಿ ಈಗ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಈ ವಿಚಾರ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ಯಾವುದು ಆ ಧಾರಾವಾಹಿ ಎನ್ನುತ್ತೀರಾ? ಅದುವೇ 'ನಾ ನಿನ್ನ ಬಿಡಲಾರೆ' ಧಾರಾವಾಹಿ.

ಹೌದು, ಜೀ ಕನ್ನಡದಲ್ಲಿ ಶುರುವಾದ ದಿನದಿಂದಲೇ ಮನೆ ಮಾತಾಗಿರುವ 'ನಾ ನಿನ್ನ ಬಿಡಲಾರೆ' ಧಾರಾವಾಹಿ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ಈ ಹಾರರ್ ಥ್ರಿಲ್ಲರ್ ಧಾರಾವಾಹಿಯನ್ನು ಜೀ ಮರಾಠಿಯಲ್ಲಿ 'ತುಲಾ ಜಪ್ನಾರ್ ಆಚೆ' ಎಂಬ ಹೆಸರಿನಲ್ಲಿ ಮುಂದೆ ಪ್ರಸಾರ ಮಾಡಲಾಗುವುದು. ಈ ರಿಮೇಕ್‌ನಲ್ಲಿ ಅತ್ಯುತ್ತಮ VFX ಮತ್ತು ಕಥಾಹಂದರವಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಈ ಧಾರಾವಾಹಿಯ ಹೆಸರನ್ನು ಇದಕ್ಕೂ ಮುಂಚೆ ನೀವು ಕೇಳಿಯೇ ಇರುತ್ತೀರಿ. ಯಾಕೆಂದರೆ 'ನಾ ನಿನ್ನ ಬಿಡಲಾರೆ' ಕನ್ನಡದ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಒಂದು. ಅನಂತ್ ನಾಗ್ ಹಾಗೂ ಲಕ್ಷ್ಮೀ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಇಂದಿಗೂ ಸಿನಿ ಪ್ರೇಕ್ಷಕರ ಫೇವರೆಟ್ ಸಿನೆಮಾಗಳಲ್ಲಿ ಒಂದು. ಈಗ ಅದೇ ಚಿತ್ರದ ಶೀರ್ಷಿಕೆಯನ್ನು ಇಟ್ಟುಕೊಂಡು 'ನಾ ನಿನ್ನ ಬಿಡಲಾರೆ' ಧಾರಾವಾಹಿಯನ್ನು ಮಾಡಲಾಗಿದೆ. ಅಲ್ಲದೆ ಇದೂ ಕೂಡ ಸಿನಿಮಾದಂತೆಯೇ ಹಾರರ್ ಥೀಮ್ ಇಟ್ಟುಕೊಂಡಿರೋದು ವಿಶೇಷ. ಒಟ್ಟಿನಲ್ಲಿ ಕನ್ನಡಿಗರ ಮನೆ ಮನ ಗೆದ್ದಿರುವ ಸೀರಿಯಲ್ ಈಗ ಮರಾಠಿಗೆ ರಿಮೇಕ್ ಆಗುತ್ತಿರುವುದು ಸಂತೋಷದ ವಿಚಾರ.

ಇನ್ನು ಮರಾಠಿ ವಾಹಿನಿಯ ವಿಚಾರಕ್ಕೆ ಬಂದರೆ 'ತುಲಾ ಜಪ್ನಾರ್ ಆಚೆ' ಎಂಬ ಹೆಸರಿನಲ್ಲಿ ಈ ಧಾರಾವಾಹಿ ಮೂಡಿ ಬರಲಿದೆ. ಈಗಾಗಲೇ ಪ್ರೋಮೋ ಪ್ರಸಾರವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಝೀ ಮರಾಠಿ ವಾಹಿನಿಯಲ್ಲಿ ಫೆಬ್ರವರಿ 17ರಿಂದ ಪ್ರಸಾರ ಕಾಣಲು ಪೂರ್ಣವಾಗಿ ಸಜ್ಜಾಗುತ್ತಿದೆ. ಶಾರ್ವರಿ ಲೋಹೋಕರೆ, ನೀರಜ್ ಗೋಸ್ವಾಮಿ, ಪ್ರತೀಷ್ಕಾ ಶಿವಂಕರ್, ಮಿಲಿಂದ್ ಫಾಟಕ್, ಪೂರ್ಣಿಮಾ ತಲ್ವಾಲ್ಕರ್, ನೀಲೇಶ್ ರಾನಡೆ ಸೇರಿದಂತೆ ಹೆಸರಾಂತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಕನ್ನಡ ಹಾಗೂ ಮರಾಠಿಯಲ್ಲಿ ಎರಡು ಭಾಷೆಯಲ್ಲೂ ಜೊತೆಯಾಗಿ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ ಪಕ್ಕಾ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿರುವುದರೊಂದಿಗಿದೆ ತಾಯಿ ಮಗುವಿನ ಪ್ರೀತಿ ಒಂದೇ ವಾರದಲ್ಲಿ ಎಲ್ಲರ ಗಮನ ಸೆಳೆದಿದೆ. ಸದ್ಯ ಜೀ ಕನ್ನಡದಲ್ಲಿ ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಸೀರಿಯಲ್ ಹಾರರ್ ಆಗಿರುವ ಕಾರಣಕ್ಕೂ ಈ ಸ್ಲಾಟ್ ನೀಡಲಾಗಿದೆ. ಮುಂದೆ ಮರಾಠಿಯಲ್ಲಿ ಈ ಧಾರಾವಾಹಿ ರಾತ್ರಿ 10.30ಕ್ಕೆ ಪ್ರಸಾರ ಕಾಣಲಿದೆ ಎಂದು ಹೇಳಲಾಗಿದೆ.
ಈ ಹಿಂದೆ ಪಾರು ಸೀರಿಯಲ್ ಮೂಲಕ ಮನೆಮಾತಾಗಿದ್ದ ಶರತ್ ಪದ್ಮನಾಭ್ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಾಯಕ ಶರತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ನಾಯಕಿ ನೀತಾ ಅಶೋಕ್ ಈ ಬಾರಿ ಅಂಬಿಕಾ ಎಂಬ ಪಾತ್ರದಲ್ಲಿ ಶರತ್‌ಗೆ ಜೋಡಿಯಾಗಿದ್ದಾರೆ. ಈ ಧಾರಾವಾಹಿಯಲ್ಲಿ ಮತ್ತೋರ್ವ ನಾಯಕಿಯಾಗಿ ರಿಷಿಕಾ ಕಾಣಿಸಿಕೊಂಡಿದ್ದಾರೆ. ರುಹಾನಿ ಶೆಟ್ಟಿ ಈ ಸೀರಿಯಲ್‌ನ ಖಳನಾಯಕಿ. ಅಲ್ಲದೆ ಇವರೊಂದಿಗೆ ಪುಟಾಣಿ ಮಹಿತಾ ಕೂಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











