80 ದಿನ ಒಂದೇ ಸೀರೆಯಲ್ಲಿ ಶೂಟಿಂಗ್.. ಕೊನೆಗೂ 'ನಾ ನಿನ್ನ ಬಿಡಲಾರೆ' ನಟಿ ಸಿಕ್ಕಿತು ಮುಕ್ತಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಧಾರಾವಾಹಿಗಳ ಪೈಕಿ 'ನಾ ನಿನ್ನ ಬಿಡಲಾರೆ'ಯೂ ಒಂದು. ಹಾರರ್ ಧಾರಾವಾಹಿ 'ನಾ ನಿನ್ನ ಬಿಡಲಾರೆ' ಯಲ್ಲಿ ನಾಯಕಿ ಅಂಬಿಕಾ ಪಾತ್ರಕ್ಕೆ ಜೀವ ತುಂಬುತ್ತಿರುವ ಬೆಡಗಿ ಹೆಸರು ನೀತಾ ಅಶೋಕ್. ನಾಯಕ ಶರತ್ ಹಾಗೂ ನಾಯಕಿ ಅಂಬಿಕಾಳ ಮುದ್ದಿನ ಮಗಳ ಹೆಸರು ಹಿತಾ. ನಾಯಕ ಶರತ್‌ನನ್ನು ಖಳನಾಯಕಿ ಮಾಯಾ ಪ್ರೀತಿಸುತ್ತಿರುತ್ತಾಳೆ.
ಶರತ್‌ನನ್ನು ತನ್ನ ವಶ ಮಾಡಿಕೊಳ್ಳಬೇಕು, ಆತನನ್ನು ಪಡೆಯಬೇಕು ಎಂಬ ಆಸೆಯಿಂದ ಸ್ವತಃ ಮಾಯಾಳೇ ಅಂಬಿಕಾಳನ್ನು ಸಾಯಿಸುತ್ತಾಳೆ. ಅಮ್ಮನಿಲ್ಲದೆ ಅನಾಥಳಾಗಿ ಬೆಳೆಯುವ ಹಿತಾ ತನ್ನ ತಂದೆಯೇ ಅಮ್ಮನನ್ನು ಕೊಂದಿರುವುದು ಎಂದು ಕೋಲ ಮಾಡಿಕೊಂಡು ಮಾತು ಬಿಡುತ್ತಾಳೆ. ಇದರ ಜೊತೆಗೆ ಹಿತಾ ತನ್ನ ಮಾತು ಶರತ್‌ನ ಪ್ರೀತಿಗೆ ಅಡ್ಡವಾಗಿದ್ದಾಳೆ ಎಂದು ಹಿತಾಳನ್ನೂ ಕೊಲ್ಲುವುದಕ್ಕೆ ಮಾಯಾ ಸಂಚು ರೂಪಿಸುತ್ತಾಳೆ.

ಯಾವಾಗ ಮಗಳು ಹಿತಾಳಿಗೆ ತೊಂದರೆ ಆಗುತ್ತಿದೆ ಎಂಬುದು ಗೊತ್ತಾಗುತ್ತದೋ, ಆಗ ಸತ್ತು ಹೋದ ತಾಯಿ ಅಂಬಿಕಾ ಪುನಃ ಬರುತ್ತಾಳೆ. ಖಳನಾಯಕಿ ಮಾಯಾಳಿಂದ ತನ್ನ ಮಗಳನ್ನು ಅಂಬಿಕಾ ಹೇಗೆ ಕಾಪಾಡಿಕೊಳ್ಳುತ್ತಾಳೆ? ಹಿತಾಳಿಗೆ ತಂದೆಯ ಮೇಲಿನ ಕೋಪ ಯಾವಾಗ ಕಡಿಮೆ ಆಗುತ್ತದೆ? ಎಂಬುದೇ 'ನಾ ನಿನ್ನ ಬಿಡಲಾರೆ' ಧಾರಾವಾಹಿಯ ಕಥಾ ಹಂದರ.
ಸದ್ಯ ಆತ್ಮವಾಗಿರುವ ಅಂಬಿಕಾ ಧಾರಾವಾಹಿ ಶುರುವಾದಾಗಿನಿಂದಲೋ ಒಂದೇ ಸೀರೆಯಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಇದರ ನಡುವೆ ಆತ್ಮವಾಗಿರುವ ಅಂಬಿಕಾ, ತನ್ನ ತಂಗಿ ದುರ್ಗಾಳಿಗೆ ಕಾಣಿಸುವಂತೆ ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ದುರ್ಗಾ ಅಂಬಿಕಾ ಬಳಿ ಬಂದು ನೀವು ಮನೆಯಲ್ಲಿ ಗಂಡನ ಜೊತೆ ಜಗಳ ಮಾಡಿಕೊಂಡು ಬಂದಿದ್ದೀರಿ. ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಬಂದಿದ್ದೀರಿ ಎಂದು ಕಾಣಿಸುತ್ತೆ. ಇರೀ, ನಾನೇ ನಿಮಗೆ ಬೇರೆ ಸೀರೆ ಕೊಡುತ್ತೇನೆ ಎಂದು ಹೇಳಿ ಒಂದಷ್ಟು ಸೀರೆ ತಂದು ನಿಮಗೆ ಯಾವುದು ಬೇಕು ಅದನ್ನ ಉಡಬಹುದು ಎಂದು ಹೇಳುತ್ತಾಳೆ.
ಮೊದಲಿಗೆ ಪಿಂಕ್ ಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದ ಅಂಬಿಕಾ ಈಗ ನೇರಳೆ ಸೀರೆಯನ್ನು ಉಡುತ್ತಾಳೆ. ಈ ಕುರಿತ ವಿಡಿಯೋದ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನೀತಾ ಅಶೋಕ್ "ಇದೇ ಸೀರೆಯಲ್ಲಿ 80 ದಿನಗಳ ಕಾಲ ಚಿತ್ರೀಕರಣ ಮಾಡಿದ ನಂತರ, ನಾನು ಅಂತಿಮಾವಾಗಿ ಈ ಸೀರೆಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಕಷ್ಟ ಮತ್ತು ನೋವನ್ನು ಅರ್ಥ ಮಾಡಿಕೊಂಡಿದಕ್ಕಾಗಿ ಬರಹಗಾರರಿಗೆ ಹೃತ್ಪೂರ್ವಕ ಧನ್ಯವಾದ " ಎಂದು ಬರೆದುಕೊಂಡಿದ್ದಾರೆ.
ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನೀತಾ ಅಶೋಕ್ ಸದ್ಯ ಅಂಬಿಕಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಂದ ಹಾಗೇ ನೀತಾ ಅಶೋಕ್ ಅವರು ಯಶೋಧೆಯಾಗಿ ಕಿರುತೆರೆಗೆ ಕಾಲಿಟ್ಟಿದ್ದು ಕೂಡಾ ಆಕಸ್ಮಿಕ. ಫೇಸ್ ಬುಕ್‌ನಲ್ಲಿ ದೊರೆತ ಅವಕಾಶದಿಂದ ಕಿರುತೆರೆಗೆ ಕಾಲಿಟ್ಟ ನೀತಾ ಅಶೋಕ್ ಮುಂದೆ ಹಿರಿತೆರೆಯಲ್ಲಿಯೂ ಮಿಂಚಿದ ಪ್ರತಿಭೆ.
ಯಶೋಧೆ ಧಾರಾವಾಹಿಯ ನಿರ್ದೇಶಕ ವಿನೋದ್ ದೊಂಡಾಳೆ ಅವರು ಯಶೋಧೆ ಧಾರಾವಾಹಿಯ ಪ್ರಮುಖ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದರು. ನೀತಾ ಅಶೋಕ್ ಅವರ ಫೋಟೋ ನೋಡಿದ ವಿನೋದ್ ನಟಿಸುವ ಅವಕಾಶ ಕೊಟ್ಟಾಗ ಅಸ್ತು ಎಂದರು. ತದ ನಂತರ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನೀತಾ ಅಶೋಕ್.
ಮುಂದೆ 'ನೀಲಾಂಬರಿ' ಧಾರಾವಾಹಿಯಲ್ಲಿಯೂ ನಾಯಕಿಯಾಗಿ ಕಮಾಲ್ ಮಾಡಿದ ನೀತಾ ಅಶೋಕ್ 'ವಿಕ್ರಾಂತ್ ರೋಣ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ ನೀತಾ ಅಶೋಕ್. ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಅಪರ್ಣಾ ಬಲ್ಲಾಳ್ ಆಲಿಯಾಸ್ ಪನ್ನಾ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಸಿನಿಮಾದ ನಟನೆಗೆ 11ನೇ ಸೈಮ ಅವಾರ್ಡ್ಸ್‌ನಲ್ಲಿ ಉತ್ತಮ ನಾಯಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಕಿರುತೆರೆ, ಸ್ಯಾಂಡಲ್‌ವುಡ್ ಹೊರತಾಗಿ ಕೋಸ್ಟಲ್‌ವುಡ್‌ನಲ್ಲೂ ಸದ್ದು ಮಾಡಿರುವ ಬೆಡಗಿ ಈಕೆ.
'ಜಬರ್‌ದಸ್ತ್ ಶಂಕರ' ತುಳು ಸಿನಿಮಾದಲ್ಲಿ ನಟಿಸುವ ಮೂಲಕ ಕೋಸ್ಟಲ್‌ವುಡ್‌ನಲ್ಲೂ ಕಮಾಲ್ ಮಾಡಿದ್ದಾರೆ ನೀತಾ ಅಶೋಕ್. ಇದೀಗ ಸಣ್ಣ ಗ್ಯಾಪ್‌ನ ಬಳಿಕ ಅಂಬಿಕಾ ಆಗಿ ಕಿರುತೆರೆಗೆ ಮರಳಿರುವ ನೀತಾ ಅಶೋಕ್ ಅವರು ನಟನೆಯ ಮೂಲಕ, ಅಂಬಿಕಾ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.


Click it and Unblock the Notifications











