ನೂರು ಸಂಚಿಕೆ ಪೂರೈಸಿದ 'ನಾತಿಚರಾಮಿ'; ಶ್ರೀಕಾಂತ ಪಾತ್ರಧಾರಿ ಹೇಳೋದೇನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನಾತಿಚರಾಮಿ' ಯೂ ಒಂದು. ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ಪಾತ್ರವರ್ಗದ ಮೂಲಕವೂ 'ನಾತಿಚರಾಮಿ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ ಎಂಬುದಕ್ಕೆ ಈ ಧಾರಾವಾಹಿಯು ನೂರು ಸಂಚಿಕೆ ಪೂರೈಸಿರುವುದೇ ಸಾಕ್ಷಿ.
'ನಾತಿಚರಾಮಿ' ಧಾರಾವಾಹಿಯಲ್ಲಿ ನಾಯಕಿ ಭಕ್ತಿಯ ಅಣ್ಣ ಶ್ರೀಕಾಂತನಾಗಿ ನಟಿಸುತ್ತಿರುವ ರಾಜೇಶ್ ಧ್ರುವ ಅವರು ಫಿಲ್ಮಿಬೀಟ್ ಕನ್ನಡ ಜೊತೆ ಖುಷಿಯ ಕ್ಷಣಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

"ನಾತಿಚರಾಮಿ ಧಾರಾವಾಹಿಯು ಯಶಸ್ವಿ ನೂರು ಸಂಚಿಕೆ ಪೂರೈಸಿದೆ. ಈಗಿನ ಟೈಮಲ್ಲಿ ನೂರು ಸಂಚಿಕೆ ಪೂರೈಸುವುದು ಸುಲಭವೇನಲ್ಲ. ಯಾಕೆಂದರೆ ಈಗ ಸಾಕಷ್ಟು ಆಪ್ಶನ್‌ಗಳಿವೆ. ಜನರು ನೋಡ್ತಾ ಇದ್ದಾರೆ ಎನ್ನುವ ಕಾರಣಕ್ಕೆ ಧಾರಾವಾಹಿಗಳು ನೂರು, ಇನ್ನೂರೈವತ್ತು, ಐನ್ನೂರು, ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ. ಅದರಲ್ಲೂ ಉದಯ ಟಿವಿಯ ಹೆಚ್ಚಿನ ಧಾರಾವಾಹಿಗಳು ಸಾವಿರ ಸಂಚಿಕೆಗಳನ್ನು ಪೂರೈಸಿದ್ದುದು ಇದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ರಾಜೇಶ್ ಧ್ರುವ ಹೇಳಿದ್ದಾರೆ.
"ನಾತಿಚರಾಮಿ ಧಾರಾವಾಹಿಗೆ ಅದರದೇ ಆದ ಆಡಿಯನ್ಸ್ ಇದ್ದಾರೆ. ನಾನು ಹೊರಗಡೆ ಹೋದಾಗೆಲ್ಲಾ ಅದರ ಬಗ್ಗೆ ಕೇಳಿದಾಗ ತುಂಬಾ ಖುಷಿ ಪಡ್ತೀನಿ. ಈಗಿನ ಸ್ಪರ್ಧಾತ್ಮಕ ಚಾನೆಲ್‌ಗಳ ಮಧ್ಯೆ ಉದಯ ಟಿವಿ ಈಗಲೂ ತನ್ನ ಸ್ವತ್ತನ್ನು ಉಳಿಸಿಕೊಂಡಿದೆ ಎಂಬುದೇ ತುಂಬಾ ಖುಷಿಯಾಗುತ್ತೆ. ನನ್ನ ಪ್ರೊಡ್ಯೂಸರ್ ಗಣಪತಿ ಭಟ್ ಅವರಿಗೆ ನಾನು ಈ ಮೂಲಕ ಧನ್ಯವಾದ ಹೇಳ್ತೀನಿ. ಯಾಕೆಂದ್ರೆ ಇದು ಅಷ್ಟು ಸುಲಭ ಇರಲಿಲ್ಲ. ಕೊಪ್ಪದಲ್ಲಿ ಶೂಟಿಂಗ್ ಇದೆ, ಬೆಂಗಳೂರಲ್ಲಿ ಶೂಟಿಂಗ್ ಇದೆ. ಪ್ರತಿ ಬಾರಿಯೂ ದೇವಸ್ಥಾನ ಶೂಟಿಂಗ್ ಅಂತ ಬಂದಾಗ ನಾವು ಪ್ರತಿಬಾರಿಯೂ ಕೊಪ್ಪಕ್ಕೆ ಟ್ರಾವೆಲ್ ಮಾಡಲೇಬೇಕು. ಇದೆಲ್ಲಾ ಚಾಲೆಂಜ್‌ಗಳ ನಡುವೆ ಧಾರಾವಾಹಿ ನೂರು ಸಂಚಿಕೆ ಪೂರೈಸಿರುವುದು ಸಂತಸದ ವಿಚಾರ. ಹಿಂದಿನ ನಿರ್ದೇಶಕರಾದ ರಾಮ್ ವೈದ್ಯ, ಈಗನ ನಿರ್ದೇಶಕರಾದ ಕೋಟೇಶ್, ಎಡಿಟರ್, ಕ್ಯಾಮೆರಾಮ್ಯಾನ್ ಎಲ್ಲರೂ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರಿಗೂ ನನ್ನ ಕಡೆಯಿಂದ ಕಂಗ್ರಾಟ್ಸ್ ಹೇಳ್ತೇನೆ" ಎಂದು ಹೇಳಿಕೊಂಡಿದ್ದಾರೆ ರಾಜೇಶ್ ಧ್ರುವ.
"ನಾತಿಚರಾಮಿ ಧಾರಾವಾಹಿಯಲ್ಲಿ ನಾನು ಶ್ರೀಕಾಂತ ಆಗಿ ನಟಿಸುತ್ತಿದ್ದೇನೆ. ಇದು ಒಂದು ಪಾಸಿಟಿವ್ ಕ್ಯಾರೆಕ್ಟರ್. ನಾನು ತುಂಬಾ ಇಷ್ಟಪಟ್ಟಂತಹ ಕ್ಯಾರೆಕ್ಟರ್ ಇದು. ಶ್ರೀಗೌರಿ ಧಾರಾವಾಹಿಯ ನಂತರ ನಂಗೆ ಒಳ್ಳೊಳ್ಳೆಯ ಕ್ಯಾರೆಕ್ಟರ್ ಸಿಗ್ತಾ ಇದೆ. ನಾತಿಚರಾಮಿ ಪಾಸಿಟಿವ್ ಯಾಕೆ ಅಂದರೆ ತುಂಬಾ ಒಳ್ಳೆಯ ಅಣ್ಣನಾಗಿ ಕಾಣಿಸಿಕೊಂಡಿದ್ದೇನೆ. ನಾಯಕನಟ ಅಲ್ಲದಿದ್ರೂ ಅಷ್ಟೇ ಪ್ರಾಮುಖ್ಯತೆ ಕೊಟ್ಟಂತಹ ಸೀರಿಯಲ್ ನಾತಿಚರಾಮಿ" ಎಂದು ಸಂತಸದಿಂದ ಹಂಚಿಕೊಂಡಿದ್ದಾರೆ ರಾಜೇಶ್ ಧ್ರುವ.
"ನಾನು ಇದರಲ್ಲಿ ಪಾಸೆಸಿವ್ ಅಣ್ಣ ಹೌದು. ತಂಗಿಯ ಜೀವನ ಸೆಟ್ ಮಾಡ್ಬೇಕು. ಅವಳನ್ನ ಹಾಳು ಬಾವಿಗೆ ತಳ್ಳುವ ಪ್ರಯತ್ನ ನಡಿತಿದ್ರೂ ಅದನ್ನ ತಡಿಬೇಕು. ತನ್ನ ಜೀವನವನ್ನು ಧಾರೆ ಎರೆದಾದ್ರೂ ಆಕೆಯ ಜೀವನವನ್ನು ರೂಪಿಸಬೇಕು ಎನ್ನುವ ವೆರಿ ಸೆನ್ಸೆಟೀವ್, ಪಾಸೆಸಿವ್ ಅಣ್ಣನಾಗಿ ನಾನು ನಟಿಸುತ್ತಿದ್ದೇನೆ. ಹಾಗಾಗಿ ನನಗೆ ಇದು ತುಂಬಾ ಹತ್ತಿರವಾದ ರೋಲ್. ವೈಯಕ್ತಿಕ ಜೀವನದಲ್ಲಿ ನನಗೂ ಒಂದು ಅಕ್ಕ, ತಂಗಿ ಇದ್ದಿದ್ರೆ ನಾನು ಇದೇ ತರಹ ಇರ್ತಿದ್ದೆ ಏನೋ. ಒಟ್ಟಿನಲ್ಲಿ ಶ್ರೀಕಾಂತನಾಗಿ ನಟಿಸುತ್ತಿರುವುದು ಖುಷಿ ನೀಡಿದೆ" ಎಂದು ಹೇಳಿದ್ದಾರೆ ರಾಜೇಶ್ ಧ್ರುವ.
ಇನ್ನು ಇದರ ಹೊರತಾಗಿ 'ಶಾರದೆ' ಧಾರಾವಾಹಿಯಲ್ಲಿಯೂ ನಟಿಸಲಿದ್ದಾರೆ ರಾಜೇಶ್ ಧ್ರುವ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಶಾರದೆ'ಯಲ್ಲಿ ರಾಜೇಶ್ ಧ್ರುವ ಅವರು ಪ್ರಮುಖ ಪಾತ್ರದಲ್ಲಿ ನಟಿಸಿಲಿದ್ದಾರೆ. ಧಾರಾವಾಹಿಯ ತಂಡದವರು ಈಗಾಗಲೇ ಪ್ರಸಾರ ಮಾಡಿರುವ ಪ್ರೋಮೋದಲ್ಲಿ ರಾಜೇಶ್ ಧ್ರುವ ಅವರು ಇದ್ದು, ನಾಯಕಿಯ ಗಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೋಮೋ ನೋಡಿದಾಗ ನೆಗೆಟಿವ್ ರೋಲ್‌ನಂತೆ ಭಾಸವಾದರೂ ಪಾತ್ರದ ಬಗ್ಗೆ ಧಾರಾವಾಹಿ ಆರಂಭವಾದ ಬಳಿಕವಷ್ಟೇ ತಿಳಿಯಬೇಕಿದೆ.
ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ರಾಜೇಶ್ ಧ್ರುವ ಅವರು ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.


Click it and Unblock the Notifications











