Namrutha Gowda: ಬಾಲನಟಿಯಾಗಿ ಬಣ್ಣ ಹಚ್ಚಿದ್ದ ಈಕೆ ಇದೀಗ ಕಿರುತೆರೆಯ ಇಚ್ಛಾಧಾರಿಣಿ ನಾಗಿಣಿ
ನಾಗಿಣಿ ಹಾಗೂ ನಾಗಲೋಕದ ವಿಷಯವನ್ನಾಧರಿಸಿ ಕನ್ನಡದಲ್ಲಿ ಅದೆಷ್ಟೋ ಧಾರಾವಾಹಿಗಳು ಪ್ರಸಾರವಾಗಿವೆ. ಅವುಗಳಲ್ಲಿ 'ನಾಗಿಣಿ 2' ಕೂಡ ಒಂದು. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ನಿರ್ದೇಶಕ ರಾಮ್ ಜೀ. ಈಗ ವಿಷಯ ಏನಪ್ಪಾ ಅಂದ್ರೆ ಈ ಧಾರಾವಾಹಿಯಲ್ಲಿ ನಾಗಿಣಿಯಾಗಿ ಮೋಡಿ ಮಾಡುತ್ತಿರುವ ಚೆಲುವೆ ಶಿವಾನಿ ಅಲಿಯಾಸ್ ನಿಜ ಜೀವನದ ನಮ್ರತಾ ಗೌಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗಮಣಿಯ ಆಸೆಗಾಗಿ ನಾಗಲೋಕಕ್ಕೆ ಬರುವ ದುಷ್ಟರು ನಾಗಲೋಕದ ರಾಜ ಆದಿಶೇಷನನ್ನು ಕೊಂದು, ನಾಗಮಣಿಯನ್ನು ವಶಕ್ಕೆ ಪಡೆದು ಹಿಂತಿರುಗುತ್ತಾರೆ. ತನ್ನ ಪ್ರಿಯಕರನನ್ನು ಕೊಂದ ದುಷ್ಟರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಭೂಲೋಕಕ್ಕೆ ಬರುವ ನಾಗಿಣಿ ಶಿವಾನಿ, ನಾಗಮಣಿಯನ್ನು ಪಡೆಯುವುದರೊಂದಿಗೆ ಇಪ್ಪತ್ತು ವರ್ಷಗಳ ಬಳಿಕ ಭೂಲೋಕದಲ್ಲಿ ಪುರ್ನಜನ್ಮ ಪಡೆದಿರುವ ಆದಿಶೇಷನನ್ನು ಹುಡುಕಿ ಮತ್ತೆ ಆತನನ್ನು ಸೇರಲು ಸಾಗುವುದರ ಸುತ್ತ ಕಥೆಯಿದೆ.

'ನಾಗಿಣಿ' ಧಾರಾವಾಹಿಯ ನಮ್ರತಾ ಗೌಡ
'ನಾಗಿಣಿ 2' ಧಾರಾವಾಹಿಯಲ್ಲಿ ಇಚ್ಛಾಧಾರಿ ನಾಗಿಣಿಯಾಗಿ ಅಭಿನಯಿಸುತ್ತಿರುವ ನಮ್ರತಾ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಅದರಲ್ಲಿ ನಾಯಕ ಮಹೇಶನ ಪ್ರೇಯಸಿ ಹಿಮಾ ಎಂಬ ಪಾತ್ರದ ಮೂಲಕ ಜನ ಮನ್ನಣೆಯನ್ನು ಗಳಿಸಿದ್ದರು.

'ನಾಕುತಂತಿ' ಧಾರಾವಾಹಿಯಲ್ಲಿ ನಟನೆ
ಹಾಗೆಂದು ಇವರು ಪ್ರಾಯಕ್ಕೆ ಬಂದ ಮೇಲೆ ನಟನೆಗೆ ಕಾಲಿಟ್ಟವರಲ್ಲ.ಬಾಲಕಲಾವಿದೆಯಾಗಿ. ಬಿ.ಸುರೇಶ್ ನಿರ್ದೇಶನದ 'ನಾಕುತಂತಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಇವರು 'ಎಕ್ಸ್ ಕ್ಯೂಸ್ ಮೀ', 'ಮಿಲನ', 'ತುತ್ತೂರಿ' ಮುಂತಾದ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದಲ್ಲದೆ 'ವಾತ್ಸಲ್ಯ', 'ಚೆಲುವಿ', 'ಸಿಲ್ಲಿ ಲಲ್ಲಿ', 'ಅಪಾರ್ಟ್ ಮೆಂಟ್' ಧಾರಾವಾಹಿಗಳಲ್ಲಿ ಅಭಿನಯಿಸಿದ ನಮ್ರತಾ ಗೌಡ ಮಧ್ಯಂತರದಲ್ಲಿ ವಿದ್ಯಾಭ್ಯಾಸದ ಸಲುವಾಗಿ ನಟನೆಯನ್ನು ಬದಿಗಿಟ್ಟಿದ್ದರು.

'ಆಕಾಶದೀಪ' ಸಿರೀಯಲ್‌ನಿಂದ ಮತ್ತೆ ನಟನೆ ಆರಂಭ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕಾಶದೀಪ' ಧಾರಾವಾಹಿಯಲ್ಲಿ ಮನೆಕೆಲಸದ ಹುಡುಗಿಯಾಗಿ ನಟಿಸಿದ್ದ ನಮ್ರತಾ ಗೌಡ ನಂತರ ಬದಲಾದುದು ಹಿಮಾ ಆಗಿ. 'ಪುಟ್ಟ ಗೌರಿ' ಮದುವೆ ಧಾರಾವಾಹಿಯಲ್ಲಿ ನಾಯಕ ಮಹೇಶನ ಪ್ರೇಯಸಿ ಹಿಮಾ ಆಗಿ ಕಾಣಿಸಿಕೊಂಡು ಕರುನಾಡಿನಾದ್ಯಂತ ಮನೆ ಮಾತಾಗಿರುವ ನಮ್ರತಾ ಗೌಡ ಸದ್ಯ 'ನಾಗಿಣಿ'ಯಾಗಿ ಮಿಂಚುತ್ತಿದ್ದಾರೆ.

ಡ್ಯಾನ್ಸರ್ ಕೂಡ ಹೌದು
ಅಂದ ಹಾಗೆ ನಟನೆಯನ್ನು ಹೊರತುಪಡಿಸಿದ ಪ್ರತಿಭೆಯೂ ಇವರಿಗಿದೆ. ಅದ್ಭುತ ನೃತ್ಯಗಾರ್ತಿಯಾಗಿಯೂ ಆಗಿರುವ ನಮ್ರತಾ ಶಾಸ್ತ್ರೋಕ್ತವಾಗಿ ನೃತ್ಯಾಭ್ಯಾಸವನ್ನು ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತಕಧಿಮಿತದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಹಿರಿಮೆ ಇವರದು.


Click it and Unblock the Notifications











