Actress Ankita Amar: ಮೂರು ಸಿನಿಮಾ ಕೈಯಲ್ಲಿರುವಾಗಲೇ 4ನೇ ಸಿನಿಮಾಗೆ ಸಹಿ ಹಾಕಿದ ಕಿರುತೆರೆ ನಟಿ
ನಟಿಯಾಗಿ ನಿರೂಪಕಿಯಾಗಿ ಹಾಗೆ ನೃತ್ಯಗಾರ್ತಿಯಾಗಿ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿರುವ ಅಂಕಿತ ಅಮರ್ ತಮ್ಮ 4ನೇ ಚಿತ್ರಕ್ಕೆ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಅರೇ! ಹಾಗಾದರೆ ಯಾವುದಪ್ಪ ಅವರ ಸಿನಿಮಾ ಎಂದು ಯೋಚಿಸುತ್ತಿದ್ದೀರಾ?! ಅದೇ ವಿಶೇಷ ನೋಡಿ.. ಈಗಾಗಲೇ ನಟಿ ಅಂಕಿತ ಅಮರ್ ಅವರು ನಟಿಸಿರುವ ಮೂರು ಚಿತ್ರಗಳು ಇನ್ನೂ ಬಿಡುಗಡೆಯೇ ಆಗಿಲ್ಲ. ಆಗಲೇ ಆಕೆ 4ನೇ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.
ಪ್ರತಿ ಬಾರಿಯೂ ಡೈರೆಕ್ಟರ್ ಅಥವಾ ಪ್ರೊಡ್ಯೂಸರ್ ಅಂಕಿತಾ ಅವರನ್ನು ಸಿನಿಮಾಗೆ ಆಯ್ಕೆ ಮಾಡಲು ಮುಂದೆ ಬಂದಾಗ ಆಕೆಗೆ ನಿಜವಾಗಿಯೂ ಅಚ್ಚರಿಯಾಗುತ್ತದೆಯಂತೆ. ಏಕೆಂದರೆ, ಇದುವರೆಗೂ ಯಾರು ಆಕೆಯನ್ನು ಬಿಗ್ ಸ್ಕ್ರೀನ್‌ನಲ್ಲಿ ನೋಡಿಲ್ಲ. ಆದರೂ ಕೂಡಾ ಆಕೆಯನ್ನು ಹೀರೋಯಿನ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅದು ಆಕೆಯ ಪಾಲಿಗೆ ಒಲಿದ ಅದೃಷ್ಟವೇ ಸರಿ.

ಅಂಕಿತಾ ಅಮರ್ ನಟಿಸಿರುವ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗಿದ್ದು ಇನ್ನೂ ರಿಲೀಸ್ ಆಗಿಲ್ಲ. ಆಗಲೇ ನಾಲ್ಕನೇ ಸಿನಿಮಾ ಆಕೆಯ ಕೈ ಸೇರಿರುವುದು ಆಕೆಗಂತೂ ತುಂಬಾನೇ ಖುಷಿ ಕೊಟ್ಟಿದೆಯಂತೆ.
ಇದರ ಜೊತೆಗೆ ಜನರು ಅಂಕಿತಾ ಅವರನ್ನು ಕೇವಲ ನಟಿಯಾಗಷ್ಟೇ ಅಲ್ಲದೇ 'ನಮ್ಮನೆ ಯುವರಾಣಿ'ಯ ಮೀರಾ ಆಗಿ ಗುರುತಿಸುತ್ತಾರೆ. ಮಾತ್ರವಲ್ಲದೇ ಕೆಲವೊಮ್ಮೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿ, ಭರತನಾಟ್ಯ ನೃತ್ಯಗಾರ್ತಿಯಾಗಿ ಗುರುತಿಸುತ್ತಾರೆ. ಇದು ಆಕೆಗೆ ಖುಷಿ ನೀಡಿದೆಯಂತೆ. ಜೊತೆಗೆ ಅಂಕಿತಾ ಯಾವುದೋ ಒಂದು ಪ್ರಕಾರಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂಬ ಖುಷಿ ಆಕೆಗಿದೆಯಂತೆ.

ಅಂಕಿತಾ ಅಮರ್ ಈ ಮೊದಲು 'ಅಬ ಜಬ ದಬ', 'ಇಬ್ಬನಿ ತಬ್ಬಿದ ಇಳೆಯಲಿ' ಹಾಗೂ ಈಗ 'ಜಸ್ಟ್ ಮ್ಯಾರೀಡ್' ಎಂಬ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂರು ಚಿತ್ರಗಳ ಪಾತ್ರಗಳು ಬಹಳ ವಿಭಿನ್ನವಾಗಿದ್ದಾವೆ. ಈ ರೀತಿ ವಿಭಿನ್ನ ಪಾತ್ರಗಳನ್ನು ಮಾಡಲು ಆಕೆಗೆ ಬಹಳ ಖುಷಿ ಇದೆಯಂತೆ.
ಪಾತ್ರಗಳ ಆಯ್ಕೆಯ ಸಮಯದಲ್ಲಿ ನಾವು ಆ ಪಾತ್ರವನ್ನು ಮಾಡಲು ಕಂಫರ್ಟೇಬಲ್ ಇದ್ದೇವಾ ಎಂಬುದೇ ಮುಖ್ಯವಾಗಿರುತ್ತದೆ. ನಮಗೆ ಪಾತ್ರ ಹಿಡಿಸಿದರೆ ಮಾತ್ರ ನಾವು ಅದಕ್ಕೆ ಜೀವ ತುಂಬಲು ಸಾಧ್ಯ ಎಂಬುದು ಅಂಕಿತಾ ಅಮರ್ ಅಭಿಪ್ರಾಯ. ಒಟ್ಟಿನಲ್ಲಿ ಇನ್ನು ಒಂದೇ ಒಂದು ಸಿನಿಮಾ ಬಿಡುಗಡೆಯಗೊಳ್ಳದಿದ್ದರೂ ಆಗಲೇ 4ನೇ ಸಿನಿಮಾವನ್ನು ಮಾಡುತ್ತಿರುವ ವಿಶೇಷ ನಟಿ ಅಂಕಿತ ಅಮರ್ ಎಂದರೆ ತಪ್ಪಾಗಲ್ಲ.


Click it and Unblock the Notifications











