Namma Lacchi: ಪ್ರಸಾರವಾಯ್ತು ಹಾಡುಗಾರ್ತಿ 'ನಮ್ಮ ಲಚ್ಚಿ' ಧಾರಾವಾಹಿ
ಒಂದು ಧಾರಾವಾಹಿ ಮುಗಿದ ಮೇಲೆ ಮತ್ತೊಂದು ಧಾರಾವಾಹಿ ಶುರುವಾಗುತ್ತದೆ. ಹಾಗೆಯೇ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಾರಂಭವಾಗಿದೆ. ಅದೇ 'ನಮ್ಮ ಲಚ್ಚಿ' ಸೀರಿಯಲ್.
ನಿನ್ನೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ನಮ್ಮ ಲಚ್ಚಿ' ಎಂಬ ಹೊಸ ಧಾರಾವಾಹಿ ಪ್ರಾರಂಭವಾಗಿದೆ. ಇದರಲ್ಲಿ ಲಚ್ಚಿ ನಾಯಕಿ ಹಾಗೂ ನಾಯಕ ಎರಡೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇನಪ್ಪ ನಾಯಕಿ, ನಾಯಕ ಇಬ್ಬರೂ ಒಬ್ಬರೇ ಅಂದರೆ ಡಬಲ್ ಆಕ್ಟಿಂಗ್ ಅಂತ ಅಂದುಕೊಳ್ಳಬೇಡಿ. 'ಲಚ್ಚಿ'ಯೇ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರನ್ನು ನಿಭಾಯಿಸಿರುವುದು.

ಹಾಡುಗಾರ್ತಿಯ ಕಥೆ 'ನಮ್ಮ ಲಚ್ಚಿ'
ಲಚ್ಚಿ 8 ವರ್ಷದ ಹುಡುಗಿ ಈಕೆಯ ತಾಯಿ ಗಿರಿಜಾ, ತಂದೆ ಸಂಗಮ್ ಸಾತ್ನೂರು. ಈತ ಸಿಂಗರ್ ಆಗಿದ್ದು, ಗಿರಿಜಾಳನ್ನು ಪ್ರೀತಿಸಿ ಹಳ್ಳಿಯಲ್ಲೇ ಬಿಟ್ಟು ಸಿಟಿಗೆ ಹೋಗಿರುತ್ತಾನೆ. ಹಾಗಾಗಿ ಗಿರಿಜಾ ಲಚ್ಚಿಯ ತಂದೆ ಯಾರು ಎಂದು ಯಾರಿಗೂ ಹೇಳಿರುವುದಿಲ್ಲ. ಮದುವೆಯಾಗದೇ ಹುಟ್ಟಿದ ಮಗು ಎಂದು ಗಿರಿಜಾ ಅವರ ಅತ್ತಿಗೆ ಲಚ್ಚಿಯನ್ನು ಸದಾ ಬೈಯುತ್ತಿರುತ್ತಾಳೆ. ಲಚ್ಚಿಗೆ ಹಾಡು ಹಾಡುವುದು ಎಂದರೆ ತುಂಬಾನೇ ಇಷ್ಟ. ಸದಾ ಕೈಯಲ್ಲಿ ರೇಡಿಯೋವನ್ನು ಹಿಡಿದು ಹಾಡುಗಳನ್ನು ಕೇಳುತ್ತಿರುತ್ತಾಳೆ. ತಂದೆ ಯಾರು ಎಂದು ಗೊತ್ತಿಲ್ಲವಾದರೂ ಲಚ್ಚಿಗೆ ಹಾಡು ಕೇಳುವುದು ಬಿಟ್ಟು ಬೇರೆ ಏನೂ ಬೇಡ.

ಹಾಡು ಬಿಟ್ಟು ಲಚ್ಚಿಗೆ ಬೇರೆನೂ ಬೇಡ
ಅತ್ತೆ ಎಷ್ಟೇ ಹಿಂಸೆ ಕೊಟ್ಟರೂ ನಗು ನಗುತಾ ಇರುತ್ತಾಳೆ. ರೇಡಿಯೋವನ್ನು ಕೋಗಿಲಮ್ಮ ಎಂದು ಕರೆಯುವ ಲಚ್ಚಿ ಬಹುಬೇಗನೇ ಹಾಡುಗಳನ್ನು ಕಲಿತುಕೊಳ್ಳುತ್ತಾಳೆ. ಆದರೆ, ಸಂಗಮ್ ಸಾತ್ನೂರು, ಗಿರಿಜಾಳನ್ನು ಮರೆತು ಸಿಟಿಯಲ್ಲಿ ಬೇರೆಯವರನ್ನು ಮದುವೆಯಾಗಿರುತ್ತಾನೆ. ಅವನಿಗೆ ಹಾಡುವುದು ಎಂದರೆ ಇಷ್ಟ. ರೇಡಿಯೋದಲ್ಲಿ ಸಂಗಮ್ ಹಾಡುವುದನ್ನು ಲಚ್ಚಿ ಕೇಳಲು ಬಯಸುತ್ತಾಳೆ. ಸಂಗಮ್ ಹಾಡನ್ನು ಕೇಳುವ ಲಚ್ಚಿಗೆ ಅವರೇ ತನ್ನ ತಂದೆ ಎಂಬ ಸತ್ಯ ಗೊತ್ತಿರುವುದಿಲ್ಲ. ಆದರೆ ಈ ಸತ್ಯ ಗಿರಿಜಾ ಹಾಗೂ ಅವರ ಸಹೋದರ ಗೋವಿಂದಪ್ಪನಿಗೆ ಮಾತ್ರವೇ ತಿಳಿದಿರುತ್ತದೆ.

'ಭಜರಂಗಿ- 2'ನಲ್ಲಿ ನಟಿಸಿರುವ ಬಾಲಕಿ
ಈ ಕಾರಣಕ್ಕಾಗಿಯೇ ಗಿರಿಜಾಳಿಗೆ ತನ್ನ ಮಗಳು ಹಾಡು ಹಾಡುವುದು ಇಷ್ಟವಿರುವುದಿಲ್ಲ. ಆದರೂ ಲಚ್ಚಿ ಮಾತ್ರ ಹಾಡುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಗಿರಿಜಾ ತುಂಬಾ ಬೇಸರ ಮಾಡಿಕೊಳ್ಳುತ್ತಿರುತ್ತಾಳೆ. ಹೀಗೆ ಪ್ರಾರಂಭವಾಗಿರುವ ನಮ್ಮ ಲಚ್ಚಿ ಧಾರಾವಾಹಿ ಎಲ್ಲರನ್ನು ರಂಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಲಚ್ಚಿ ಪಾತ್ರವನ್ನು ನಿರ್ವಹಿಸಿರುವ ಬಾಲಕಿ ಸಾಂಗವಿ ಅದ್ಭುತವಾಗಿ ನಟಿಸಿದ್ದಾಳೆ. 'ಭಜರಂಗಿ- 2' ಸಿನಿಮಾದಲ್ಲಿ ಈ ಬಾಲಕಿ ನಟಿಸಿದ್ದಾಳೆ.

ನೇಹಾ ಗೌಡ ಹಾಗೂ ಚಂದು ನಟನೆ
ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ವಿಜಯ್ ಸೂರ್ಯ ನಟಿಸಿದ್ದರು. ಆದರೆ ಅದು ಕಾರಣಾಂತರಗಳಿಂದ ನಿಂತು ಹೋಗಿತ್ತು. ಬಳಿಕ ಕೆಲವೊಂದು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದ ಮೂಲಕ ಬಂದು ಹೋಗಿದ್ದರು. ಇದೀಗ ಸುವರ್ಣ ವಾಹಿನಿಯಲ್ಲಿಯೇ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ನೇಹಾ ಗೌಡ ಕನ್ನಡದ ಕಿರುತೆರೆಯಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಈ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇನ್ನು ಚಂದು ಬಿ ಗೌಡ ಕೂಡ ಇದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇನ್ನೂ ಪಾತ್ರದ ಪರಿಚಯವಾಗಿಲ್ಲ.


Click it and Unblock the Notifications











