Namma Lacchi: ಪ್ರಜ್ಞೆ ತಪ್ಪಿಬಿದ್ದ ಗಿರಿಜಾಳನ್ನು ಎಚ್ಚರಗೊಳಿಸಿದ ಲಚ್ಚಿ ಹಾಡು?
ಏನೇ ಕಷ್ಟ ಬಂದರೂ, ಎಷ್ಟೇ ಅವಮಾನವಾದರೂ ಸಹಿಸಿಕೊಳ್ಳುತ್ತಿದ್ದ ಲಚ್ಚಿಗೆ ಈಗ ಆಕಾಶವೇ ತಲೆ ಮೇಲೆ ಬಿದ್ದಂತೆ ಭಾಸವಾಗುತ್ತಿದೆ. ಅತಿಯಾಗಿ ಪ್ರೀತಿಸುತ್ತಿದ್ದ, ಆರಾಧಿಸುತ್ತಿದ್ದ ಸಂಗಮಪ್ಪ ತನ್ನೂರಿಗೆ ಬಂದಿದ್ದಾರೆ ಎಂದು ಸಂತಸಪಡುವ ಹೊತ್ತಿನಲ್ಲಿಯೇ ಲಚ್ಚಿಗೆ ಬರ ಸಿಡಿಲು ಬಡಿದಂತ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಲಚ್ಚಿ ಹೆಚ್ಚು ಹೆದರುವ, ಹೆಚ್ಚು ಪ್ರೀತಿಸುವ ತಾಯಿ ಇಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಗಿರಿಜಾಗೆ ಕ್ಯಾನ್ಸರ್ ಅತಿಯಾಗಿ ಕಾಡುತ್ತಿದೆ. ದಿನೇ ದಿನೆ ಹೆಚ್ಚಾಗುತ್ತಿರುವ ಕಾಯಿಲೆಯಿಂದ ಗಿರಿಜಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮಾರಾಣಾಂತಿಕ ಕಾಯಿಲೆ ಇದೆ ಎಂಬುದು ಗೊತ್ತಾದ ಮೇಲೂ ಗಿರಿಜಾಳ ಅಣ್ಣ ಚಿಕಿತ್ಸೆ ಕೊಡಿಸುವುದಕ್ಕೆ ಹೋಗಿಲ್ಲ. ಇಂದು ಬೀದಿಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಾಗಲೇ ಲಚ್ಚಿಗೆ ತಾಯಿಗಿರುವ ಕಾಯಿಲೆ ಬಗ್ಗೆ ಗೊತ್ತಾಗಿದೆ.

ರಸ್ತೆಯಲ್ಲಿಯೇ ಬಿದ್ದ ಗಿರಿಜಾ
ಲಚ್ಚಿಗೆ ಹಾಡೆಂದರೆ ಪ್ರಾಣ, ಸಂಗಮ್ ಅಪ್ಪನೆಂದರೆ ಇಷ್ಟ. ಅವರೇ ನಿಜವಾದ ಅಪ್ಪನೆಂದು ಹೇಳಲಾಗದೆ, ಗಿರಿಜಾ ಮನಸ್ಸಿನಲ್ಲಿಯೇ ನೋವು ತಿನ್ನುತ್ತಿದ್ದಾಳೆ. ಲಚ್ಚಿಗೆ ಎಷ್ಟೇ ಹೇಳಿದರೂ ಸಂಗಮ್ ಅವರನ್ನು ಇಷ್ಟ ಪಡದೆ ಇರುವುದನ್ನು ನಿಲ್ಲಿಸುತ್ತಿಲ್ಲ. ಈಗ ಮೇಲುಕೋಟೆಗೆ ಬಂದ ಸಂಗಮ್‌ನನ್ನು ನೋಡಲು ಓಡಿದ ಲಚ್ಚಿಯ ನಡೆಗೆ ನೋವು ಪಟ್ಟುಕೊಂಡ ಗಿರಿಜಾ, ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾಳೆ. ಜ್ಞಾನ ಕಳೆದುಕೊಂಡಿದ್ದಾಳೆ.

ಸುಕ್ಕಿಯಿಂದ ವಿಚಾರ ತಿಳಿಯಿತು
ಸಂಗಮ್ ಎಂದರೆ ಲಚ್ಚಿಗೆ ಅದೆಷ್ಟು ಇಷ್ಟ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂಗಮ್ ಫೋಟೋವನ್ನೇ ನೋಡುತ್ತಾ ನಿಂತಿದ್ದ ಲಚ್ಚಿಗೆ ಅತ್ತೆಯ ಮಗಳು ಸುಕ್ಕಿ ಬಂದು, ಗಿರಿಜಾ ಅತ್ತೆ ಜೀವ ಇಲ್ಲದಂಗೆ ಬಿದ್ದೋಗಿದ್ದಾಳೆ ಎಂದಾಗಲೇ ಲಚ್ಚಿಗೆ ಭಯವಾಗಿ ಬಿಡುತ್ತೆ. ಅಲ್ಲಿಂದ ಸೀದಾ ಆಸ್ಪತ್ರೆ ಓಡುತ್ತಾಳೆ. ಆದ್ರೆ ಅಲ್ಲಿ ವೈದ್ಯರು, ಮಕ್ಕಳಿಗೆ ಗಿರಿಜಾಳನ್ನು ನೋಡುವುದಕ್ಕೆ ಬಿಡುವುದಿಲ್ಲ. "ಮನೆಯಲ್ಲಿ ಯಾರನ್ನಾದರೂ ದೊಡ್ಡವರು ಕರೆದುಕೊಂಡು ಬನ್ನಿ. ಇದೆಲ್ಲಾ ನಿಮಗೆ ಅರ್ಥವಾಗುವುದಿಲ್ಲ. ಅವರನ್ನು ಅರ್ಜೆಂಟ್ ಆಗಿ ನಗರದ ಆಸ್ಪತ್ರೆಗೆ ಸೇರಿಸಬೇಕು" ಎಂದಿದ್ದಾರೆ.

ಲಚ್ಚಿಯ ಹಾಡಿನಿಂದ ಬಂತು ಪ್ರಜ್ಞೆ
ಲಚ್ಚಿಗೆ ಅವ್ವನನ್ನು ನೋಡಲು ವೈದ್ಯರು ಬಿಡುವುದೇ ಇಲ್ಲ. ಆಗ ನರ್ಸ್ ಬಳಿ ಕೇಳುತ್ತಾಳೆ. ಅವರು ಕೂಡ ಈಗ ನಿಮ್ಮ ಅವ್ವನಿಗೆ ಪ್ರಜ್ಞೆ ಇಲ್ಲ. ಮನೆಯಲ್ಲಿ ಯಾರಾದರೂ ದೊಡ್ಡವರನ್ನು ಕರೆದುಕೊಂಡು ಬನ್ನಿ ಪುಟ್ಟ ಎಂದು ಕಳುಹಿಸಿ ಬಿಡುತ್ತಾರೆ. ಆಗ ಸಕ್ಕಿ ಇದ್ದವಳು, ಗಿರಿಜತ್ತೆ ಸತ್ತೋಗ್ತಾಳಾ ಎಂದಾಗ, ಲಚ್ಚಿ ಗದರುತ್ತಾಳೆ. "ಅವ್ವನನ್ನು ಹೇಗೆ ಎಚ್ಚರ ಮಾಡಬೇಕು ಅಂತ ನಂಗೆ ಗೊತ್ತು. ನಾನು ಹಾಡು ಹಾಡಿದರೆ ಅವಳಿಗೆ ಇಷ್ಟವಾಗಲ್ಲ. ಆಗ ಎದ್ದೇಳುತ್ತಾಳೆ." ಎಂದು ಹಾಡಲು ಶುರು ಮಾಡುತ್ತಾಳೆ. ಅವಳ ಊಹೆಯೇ ಸತ್ಯವಾಗುತ್ತದೆ. ಕಡೆಗೂ ಗಿರಿಜಾ ಎಚ್ಚರವಾಗುತ್ತಾಳೆ.

ಅವ್ವನನ್ನು ಉಳಿಸಿಕೊಳ್ಳಲು ಹಾಡುತ್ತಾಳಾ..?
ಗಿರಿಜಾಗೆ ಕ್ಯಾನ್ಸರ್ ಇರುವುದು ಲಚ್ಚಿಗೆ ಗೊತ್ತಾಗಿದೆ. ಆದರೆ ಅದು ಯಾವ ರೀತಿಯ ಕಾಯಿಲೆ ಎಂದು ತಿಳಿಯುವಷ್ಟು ದೊಡ್ಡವಳಲ್ಲ 'ನಮ್ಮ ಲಚ್ಚಿ'. ಆದ್ರೆ ನರ್ಸಮ್ಮನ ಬಳಿ ಎಲ್ಲಾ ರೀತಿಯಾದ ಮಾಹಿತಿಯನ್ನು ಪಡೆದಿದ್ದಾಳೆ. ಅದಕ್ಕೆ ನರ್ಸಮ್ಮ ಕೂಡ ನಿಮ್ಮ ಅವ್ವನನ್ನು ಬದುಕಿಸುವುದಕ್ಕೆ ಸಿಕ್ಕಾಪಟ್ಟೆ ಹಣ ಬೇಕು ಎಂದು ಹೇಳುತ್ತಾರೆ. ಈಗ ಲಚ್ಚಿಗೆ ಇರುವ ದಾರಿ ಒಂದೇ ಹಾಡಿನ ಮೂಲಕ ಸಂಪಾದನೆ ಮಾಡಿ, ಅವ್ವನನ್ನು ಬದುಕಿಸಿಕೊಳ್ಳುವುದು. ಆದರೆ, ಶಾಂತಾಳಿಗೂ ಹಣದ ಆಸೆ ಜಾಸ್ತಿ. ಲಚ್ಚಿಯ ಧ್ವನಿಯನ್ನು ಬಳಸಿಕೊಂಡೇ ಹಣ ಮಾಡಲು ಹೊರಟಿದ್ದಾಳೆ. ಇದರ ನಡುವೆ ಲಚ್ಚಿ ಅವ್ವನನ್ನು ಉಳಿಸಿಕೊಳ್ಳುವುದೇ ಚಾಲೆಂಜ್ ಆಗಿದೆ.


Click it and Unblock the Notifications











