Namma lacchi: ನಮ್ಮ ಲಚ್ಚಿಗೆ ಮನಸೋತ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶೃತಿ.. ಸೆಟ್‌ಗೆ ಭೇಟಿ ಕೊಟ್ಟಿದ್ದೇಕೆ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ನಮ್ಮ ಲಚ್ಚಿ'. ಇಬ್ಬರು ಮಕ್ಕಳೇ ಈ ಧಾರಾವಾಹಿಯಲ್ಲಿ ಹೈಲೈಟ್. ಒಂದು ಮಗು ನೆಗೆಟಿವ್ ಪಾತ್ರ ಪ್ಲೇ ಮಾಡಿದ್ರೆ ಇನ್ನೊಂದು ಮಗು ಸಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಸಂಪೃಥ್ವಿ, ಮಕ್ಕಳ ಜೊತೆಗೆ ಮಕ್ಕಳಾಗಿ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.
'ನಮ್ಮ ಲಚ್ಚಿ' ಬಳಗದ ಎಲ್ಲರೂ ಅದಾಗಲೇ ಎಲ್ಲಾ ವರ್ಗದವರನ್ನು ಸೆಳೆದು ಆಗಿದೆ. ಮಕ್ಕಳ ನಟನೆಗಂತು ಎಲ್ಲರಿಂದಾನೂ ಶಬ್ಬಾಶ್ ಗಿರಿ ಸಿಕ್ಕಿದ್ದಲ್ಲದೆ, 100% ಮಾರ್ಕ್ಸ್ ಕೂಡ ಸಿಕ್ಕು ಆಗಿದೆ. ಇಬ್ಬರು ಮಕ್ಕಳು ವಯಸ್ಸಿಗೂ ಮೀರಿ ನಟನೆಯ ಕೌಶಲ್ಯ ತೋರಿಸಿದ್ದಾರೆ. ಈಗಾಗಲೇ ಸಾಕಷ್ಟು ಜನ ಸೆಟ್‌ಗೆ ವಿಸಿಟ್ ಮಾಡಿದ್ದಾರೆ. ಈಗ ಶೃತಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನೀಡಿದ್ದಾರೆ.

'ನಮ್ಮ ಲಚ್ಚಿ'ಯ ಕಥೆ ಏನು?
ಹಳ್ಳಿಯಲ್ಲಿ ಶುರುವಾಗುವ ಪ್ರೇಮಕಥೆ. ಆ ಕಥೆಯಲ್ಲಿ ಸಂಗಮ್ ಮತ್ತು ಗಿರಿಜಾ ದೂರಾಗುತ್ತಾರೆ. ಅವರಿಬ್ಬರ ಪ್ರೀತಿಯ ಮಗಳೇ ಲಚ್ಚಿ. ಆದರೆ, ಆ ಸತ್ಯ ಸಂಗಮ್‌ಗೆ ಗೊತ್ತಿಲ್ಲ. ಆದರೂ ಲಚ್ಚಿ ಸಂಗಮ್ ಮನೆಗೆ ಬಂದಿದ್ದು ವಿಧಿ ಲಿಖಿತ. ಮಗನಂತೆಯೇ ಲಚ್ಚಿಯನ್ನು ಕಾಣುತ್ತಿದ್ದಾನೆ ಸಂಗಮ್. ಆದಷ್ಟು ಬೇಗ ಅಪ್ಪ ಮಗಳು ಒಂದಾಗಲಿ ಎಂದೇ ಪ್ರೇಕ್ಷಕರು ಬಯಸುತ್ತಿದ್ದಾರೆ.
ಲಚ್ಚಿ ಹಾಗೂ ರಿಯಾ ಮಾತಿಗೆ ಫಿದಾ
ಮಕ್ಕಳ ಆಟ ತುಂಟಾಟ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅಂತದ್ರಲ್ಲಿ ದೊಡ್ಡವರಿಗೂ ಕಷ್ಟ ಎನಿಸುವ ಪಾತ್ರವನ್ನು ಮಾಡಿದರೆ ಇನ್ನಷ್ಡು ಖುಷಿ ಅಲ್ಲವೇ. ಲಚ್ಚಿ ರಿಯಲ್ ಲೈಫ್‌ನಲ್ಲಿ ಇನ್ನು ನಾಲ್ಕನೇ ಕ್ಲಾಸ್ ಹುಡುಗಿ. ಆದರೆ, ಗೊತ್ತಿಲ್ಲದೆ ಇದ್ದರು ಪಕ್ಕ ಹಳ್ಳಿ ಹುಡುಗಿ ಎಂಬಂತೆ ಮಾತನಾಡುತ್ತಾಳೆ. ಇನ್ನು ರಿಯಾ ಕೂಡ ಅದೇ ವಯಸ್ಸಿನವಳು. ನೆಗೆಟಿವ್ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾಳೆ. ಹೀಗಾಗಿ ಮಕ್ಕಳ ನಟನೆಗೆ ಎಲ್ಲರೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಸೆಟ್ ವಿಸಿಟ್ ಮಾಡಿದ ಗಣೇಶ್ ಅಂಡ್ ಶೃತಿ
'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಬರುವ ಇಬ್ಬರು ಮಕ್ಕಳಿಗೂ ಎಲ್ಲಾಕಡೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಈಗಾಗಲೇ ಸೆಟ್‌ಗೆ ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಹಲವರು ವಿಸಿಟ್ ಮಾಡಿದ್ದರು. ಒಂದೇ ಕಡೇ ಶೂಟಿಂಗ್ ನಡೆಯುವ ಕಾರಣ 'ಲಕ್ಷ್ಮೀ ಬಾರಮ್ಮ' ತಂಡದವರಿಗೂ ಈ ಮಕ್ಕಳೇ ಟೈಮ್ ಪಾಸ್. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಹಿರಿಯ ನಟಿ ಶೃತಿ ಸೆಟ್ ವಿಸಿಟ್ ಮಾಡಿದ್ದಾರೆ. ಮಕ್ಕಳಿಗೆ ಇನ್ನಷ್ಟು ಸ್ಪೂರ್ತಿ ತುಂಬಿದ್ದಾರೆ. ಮಕ್ಕಳಂತು ಗಣೇಶ್ ಹಾಗೂ ಶೃತಿಯನ್ನು ನೋಡಿ ಫುಲ್ ಖುಷಿಯಾಗಿದ್ದಾರೆ.
ಸೆಲೆಬ್ರೆಟಿಗಳು ಮಕ್ಕಳನ್ನ ಭೇಟಿ ಮಾಡಿದ್ಯಾಕೆ?
ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರ ಸಾಕು ಇಡೀ ಟೀಂ ಈ ಸುಂದರ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಶೃತಿ ಹಾಗೂ ಗಣೇಶ್ ಕೂಡ ಮಕ್ಕಳ ಜೊತೆಗೆ ಸೆಟ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಈ ಫೋಟೋಗಳ ಬಗ್ಗೆ ನಿರ್ದೇಶಕ ಸಂಪೃಥ್ವಿ ಹೇಳಿದ್ದು ಹೀಗೆ, "ನಮ್ಮ ಲಚ್ಚಿ ಧಾರಾವಾಹಿಯ ಶೂಟಿಂಗ್ ನಡೆಯುವ ಪಕ್ಕದಲ್ಲಿಯೇ ಗಣೇಶ್ ಅವರ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿತ್ತು. ಹೀಗಾಗಿ 'ನಮ್ಮ ಲಚ್ಚಿ' ಸೆಟ್‌ಗೆ ವಿಸಿಟ್ ಮಾಡಿದ್ದರು" ಎಂದಿದ್ದಾರೆ. ಹೀಗೊಂದು ಬಾಂಧವ್ಯ ಬೆರೆತಾಗ ಇಡೀ ಟೀಂಗೆ ಇನ್ನಷ್ಟು ಖುಷಿ ಹೆಚ್ಚಾಗುತ್ತದೆ. ವಾಣಿಶ್ರಿ, ಐಶ್ವರ್ಯಾ, ಸಂಪೃಥ್ವಿ, ಸಾಂಘವಿ, ದಿಶಾ ಎಲ್ಲರೂ ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.


Click it and Unblock the Notifications











