Namma Lacchi: ಮುಸ್ಸಂಜೆ ಗಿರಿಜಾ-ಸಂಗಮ್ ಫೋಟೊಶೂಟ್; ಬಹುಪರಾಕ್ ಎಂದ ನೆಟ್ಟಿಗರು
ಗಿರಿಜಾ-ಸಂಗಮ್ ಪ್ರೀತಿ ಚಿಗುರಿದ್ದಷ್ಟೇ ಬೇಗ ಚಿವುಟಿ ಬಿಟ್ಟಿದ್ದರು. ಗೆಲುವಿಗಾಗಿ ಪ್ರೀತಿಯನ್ನು ಬಿಟ್ಟಿದ್ದ ಸಂಗಮ್. ಅಂದು ಪರಿಸ್ಥಿತಿಗೆ ಸಿಕ್ಕಿ ಹಾಕಿಕೊಂಡಿದ್ದ ಸಂಗಮ್, ಗಿರಿಜಾಳಿಂದ ದೂರವಾಗುವಂತೆ ಮಾಡಿತ್ತು. ಆದರೆ, ಇಂದು ಜೊತೆಯಾಗಿಯೇ ಇದ್ದರು, ಗಿರಿಜಾಳೆಂದು ಅಪ್ಪುವಂತೆಯೂ ಇಲ್ಲ, ಕ್ಷಮೆ ಕೇಳಿ ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳುವಂತೆಯೂ ಇಲ್ಲ. ಯಾಕಂದ್ರೆ ಗಿರಿಜಾ ಜಾಜಿಯಾಗಿ ಬದಲಾಗಿದ್ದಾಳೆ.
ಜಾಜಿಯೇ ಗಿರಿಜಾ ಎಂಬ ಸತ್ಯವಂತು ನೋಡುಗರಿಗೆ ಮನದಟ್ಟಾಗಿದೆ. ಹಾಗಂತ ಆಕ್ಸಿಡೆಂಟ್ ನೆನಪುಗಳನ್ನು ಕಳೆದುಕೊಂಡಿದ್ದಾಳೆ ಅಂತ ಅಲ್ಲ. ಗಿರಿಜಾ ಬೇಕು ಅಂತಾನೇ ನಾಟಕವಾಡುತ್ತಿದ್ದಾಳೆ. ಗಿರಿಜಾಳ ಬಗ್ಗೆ ಮನೆಯವರಿಗೆ ನೆನಪಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಆದರೆ, ಯಾವಾಗ ಸಂಗಮ್ ಮುಂದೆ ಸತ್ಯ ಬಯಲಾಗುತ್ತದೆ ಎಂಬುದೇ ಕುತೂಹಲದ ಘಟ್ಟ.

ಮುಸ್ಸಂಜೆಯಲ್ಲಿ ಬ್ಯೂಟಿಫುಲ್ ಫೋಟೋಸ್
ವಿಜಯ್ ಸೂರ್ಯಗೆ ಮೊದಲಿಂದಾನೂ ಮಹಿಳಾ ಅಭಿಮಾನಿಗಳು ಇದ್ದಾರೆ. ಅವರನ್ನು ಕಿರುತೆರೆ ಅಥವಾ ಬೆಳ್ಳಿತೆರೆ ಎಲ್ಲಾದರೂ ಸರಿ ನೋಡುತ್ತಾ ಇರಬೇಕು. ಆಗ ಮಾತ್ರ ಖುಷಿ. ಈಗ 'ನಮ್ಮ ಲಚ್ಚಿ' ಧಾರಾವಾಹಿ ಮೂಲಕ ಮತ್ತೆ ಮನರಂಜಿಸುತ್ತಿದ್ದಾರೆ. ಅದರಲ್ಲೂ ಈ ಧಾರಾವಾಹಿಯಲ್ಲಿ ಗಿರಿಜಾ ಮತ್ತು ಸಂಗಮ್ ಜೋಡಿಯನ್ನು ನೋಡುವುದೇ ಚೆಂದವಲ್ಲ. ಇನ್ನು ಸೂರ್ಯ ಮುಳುಗುವಾಗ ಫೋಟೋಗೆ ಪೋಸ್ ಕೊಟ್ಟರೆ ಕೇಳಬೇಕಾ..? ಮುದ್ದಾದ ಜೋಡಿ ಇನ್ನಷ್ಟು ಮುದ್ದಾಗಿ ಕಾಣುತ್ತದೆ.
ಕೆಂಪು ಸೂರ್ಯನ ಜೊತೆಗೆ ಆರೆಂಜ್ ಕ್ಯಾಂಡಿ
ಹಳ್ಳಿಯಲ್ಲಿಯೇ ಗಿರಿಜಾಳ ಪಯಣ ಶುರುವಾಗುವುದು. ಈ ಫೋಟೋ ಕೂಡ ಹಳ್ಳಿ ಪ್ರೀತಿಯನ್ನೇ ಸಾರುತ್ತಿದೆ. ಆ ಗದ್ದೆ, ಗದ್ದೆ ಹಿಂದೆ ಮುಳುಗುತ್ತಿರುವ ಸೂರ್ಯ, ಸೂರ್ಯನ ಬೆಳಕಿನಲ್ಲಿ ಗಾಡಿ ಮೇಲೆ ಕುಳಿತ ರೊಮ್ಯಾಂಟಿಕ್ ಕಪಲ್, ಕೈಯಲ್ಲೊಂದು ಐಸ್ ಕ್ಯಾಂಡಿ. ಅಬ್ಬಬ್ಬಾ ಫೋಟೋ ಹಿಂದಿನ ಬ್ಯಾಗ್ರೌಂಡ್ ಮತ್ತೆ ಮತ್ತೆ ಸ್ಕ್ರೋಲ್ ಮಾಡುವಂತೆ ಮಾಡುತ್ತಿದೆ. ಇಬ್ಬರ ಫೋಟೋ ತುಂಬಾ ಬ್ಯೂಟಿಫುಲ್ ಆಗಿ ಕ್ಲಿಕ್ಕಿಸಲಾಗಿದೆ.

ಜೋಡಿಗೆ ಬಹುಪರಾಕ್ ಎಂದ ನೆಟ್ಟಿಗರು
ಸಂಗಮ್ ಅಲಿಯಾಸ್ ವಿಜಯ್ ಸೂರ್ಯ ಹೇಳಿ ಕೇಳಿ ಲವ್ವರ್ ಬಾಯ್. ನೇಹಾ ಗೌಡಗೂ ಫ್ಯಾನ್ಸ್ ಏನು ಕಡಿಮೆ ಇಲ್ಲ. ಹೀಗಿರುವಾಗ ಇಬ್ಬರು ಒಂದಾದರೆ ಫ್ಯಾನ್ಸ್ ಖುಷಿಗೆ ಪಾರವಿರುತ್ತದಾ? ನಿರ್ದೇಶಕ ಸಂಪೃಥ್ವಿ ಈ ಬ್ಯೂಟಿಫುಲ್, ರೋಮ್ಯಾಂಟಿಕ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೆ ತಡ, ಅಭಿಮಾನಿಗಳು ಪ್ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ. ಸೂಪರ್ ಜೋಡಿ ಅಂತ ಒಂದಷ್ಟು ಜನ ಹೊಗಳಿದರೆ, ಇನ್ನೊಂದಷ್ಟು ಜನ ಹಾರ್ಟ್ ನೀಡಿದ್ದಾರೆ. ಮತ್ತಷ್ಟು ಜನ ದೃಷ್ಟಿ ತೆಗೆದಿದ್ದಾರೆ.
ಗಿರಿಜಾಳ ಮೇಲಿನ ಪ್ರೀತಿಗೆ ಮನಸೋತ ಜಾಜಿ
ಇನ್ನು ಧಾರಾವಾಹಿಗೆ ಬರುವುದಾದರೆ ಜಾಜಿಯ ರೂಪದಲ್ಲಿ ಇರುವುದು ಗಿರಿಜಾಳೇ. ಇತ್ತೀಚೆಗಷ್ಟೇ ಬೇಕು ಅಂತಾನೇ ನಾಟಕವಾಡಿದಳು. ಮನೆಯವರು ಬರುವ ತನಕ ನಾರ್ಮಲ್ ಆಗಿದ್ದ ಜಾಜಿ, ಮನೆಯವರು ಬಂದೊಡನೆ ಸಂಪಿಗೆಹಳ್ಳಿ ಗಿರಿಜಾ ನಾನು ಎಂಬಂತೆ ಆಡುವುದಕ್ಕೆ ಶುರು ಮಾಡಿದಳು. ಆಕ್ಸಿಡೆಂಟ್‌ನಿಂದಾಗಿ ನೆನಪುಗಳು ಹೋಗಿ ಬಂದು ಮಾಡುತ್ತಿದೆ ಎಂಬಂತೆ ನಾಟಕವಾಡಿದಳು. ಈಗ ಸಂಗಮ್ ಬಳಿ ಗಿರಿಜಾಳ ಮೇಲಿನ ಪ್ರೀತಿಯ ಬಗ್ಗೆ ಹೊರ ಹಾಕಿಸುತ್ತಿದ್ದಾಳೆ. ಗಿರಿಜಾ ಅಂದರೆ ಎಷ್ಡು ಪ್ರೀತಿ ಎಂಬುದೆಲ್ಲಾ ಸಂಗಮ್ ಹೊರ ಹಾಕಿದ್ದಾನೆ. ಅವಳನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾನೆ. ಇದನ್ನು ಕೇಳಿದ ಜಾಜಿಗೆ ಸಂಗಮ್ ಸಿಕ್ಕಿ ಹಾಕಿಕೊಂಡಿದ್ದ ಪರಿಸ್ಥಿತಿ ಅರ್ಥವಾಗಬಹುದು.


Click it and Unblock the Notifications











