Namma Lacchi: ಮನಮುಟ್ಟುವ ಸನ್ನಿವೇಶದಲ್ಲಿ ನಿರ್ದೇಶಕರ ಎಡವಟ್ಟು; ನೆಟ್ಟಿಗರು ಹೇಳಿದ್ದೇನು?
'ನಮ್ಮ ಲಚ್ಚಿ' ಕಥೆ ನೋಡುಗರ ಮನಮುಟ್ಟುವಂತೆ ಇದೆ. ಒಂದು ನಿಶ್ಕಲ್ಮಶ ಪ್ರೀತಿಯನ್ನ ಸಾಧನೆಯ ಹೆಸರಲ್ಲಿ ಕೊಂದೇ ಬಿಟ್ಟಿರುವ ಕಥೆ ಅದು. ಅಪ್ಪ ಕಣ್ಣ ಮುಂದೆ ಇದ್ದರೂ ಹೇಳಿಕೊಳ್ಳಲಾಗದ ವ್ಯಥೆ ಅದು. ಪ್ರೀತಿ ಹುಡುಕಿ ಹೊರಟಾಗ ಪ್ರೀತಿಸಿದವಳೆ ಇಲ್ಲವೆಂಬ ಕಹಿ ಸತ್ಯ ಒಪ್ಪಲಾರದ ತಳಮಳವದು. ಇಷ್ಟೆಲ್ಲಾ ಎಮೋಷನ್ಸ್‌ನಿಂದ ಕಾಡುವ ಧಾರಾವಾಹಿ ನಮ್ಮ ಲಚ್ಚಿ.
ಈ ಧಾರಾವಾಹಿಯಲ್ಲಿ ಸಂಗೀತಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡಿದ್ದ ಸಂಗಮ್, ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ನಿರ್ದೇಶಕ ಸಂಪೃಥ್ವಿ ತೆರೆದಿಟ್ಟಿದ್ದಾರೆ. ಆದರೆ ಸಣ್ಣ ಯಡವಟ್ಟು ನೋಡುಗರ ಬೇಸರಕ್ಕೆ ಕಾರಣವಾಗಿದೆ.

ಗಿರಿಜಾಳ ನೆನಪಲ್ಲಿ ಸಂಗಮ್
ಗಿರಿಜಾಳ ನೆನಪು ಸಂಗಮ್‌ನ ತುಂಬಾ ಕಾಡುತ್ತಿದೆ. ಇಷ್ಟು ವರ್ಷಗಳು ಹಾಗೋ ಹೀಗೋ ನೆನಪು ಮರೆಮಾಚಿ ಬದುಕುತ್ತಿದ್ದ ಸಂಗಮ್‌ಗೆ ಇತ್ತಿಚಿನ ಪರಿಸ್ಥಿತಿಗಳು ಪದೇ ಪದೇ ಗಿರಿಜಾಳ ನೆನಪನ್ನು ಕೆದಕುತ್ತಿವೆ. ಎಷ್ಟೇ ಹುಡುಕಿದರೂ ಆಕೆಯ ಸಾವಿನ ಕಾರಣಕರ್ತರು ಗೊತ್ತಿಲ್ಲ. ಈಗ ಮಗಳಿದ್ದಾಳೆ ಎಂಬ ಸತ್ಯ ಗೊತ್ತಾಗಿದೆ. ಎಲ್ಲಿದ್ದಾಳೆ ತಿಳಿದಿಲ್ಲ. ಈ ಎಲ್ಲಾ ನೋವು ಸಂಗಮ್‌ನನ್ನು ಕುಗ್ಗಿಸಿದ್ದು, ಹಾಡಿನ ಮೂಲಕ ಮನಸ್ಸಿನ ನೋವನ್ನು ಹೊರ ಹಾಕಲು ಪ್ರಯತ್ನ ಪಟ್ಟಿದ್ದಾನೆ.
ಮನೆಯವರೆಲ್ಲ ಮೇಲೆ ಕೂಗಾಟ
ಆಟ ಹುಡುಗಾಟವೋ.. ಪರಮಾತ್ಮನಾಟವೋ ಹಾಡನ್ನು ಹಾಡುವ ಮೂಲಕ ಕಣ್ಣೀರು ಸುರಿಸಿದ್ದಾನೆ. ಅವನ ಕೋಪ, ಹತಾಶೆ ಎಷ್ಟಿತ್ತು ಎಂಬುದಕ್ಕೆ ಗಿಟಾರ್ ತಂತಿ ಕಿತ್ತು, ಕೈಬೆರಳಲ್ಲಿ ರಕ್ತ ಬಂದಿದ್ದೆ ಉದಾಹರಣೆಯಾಗಿದೆ. ಸಂಗಮ್ ಕೈನಲ್ಲಿ ರಕ್ತ ಬಂದೊಡನೆ ಮನೆಯವರೆಲ್ಲರ ಮನಸ್ಸಿಗೆ ಘಾಸಿಯಾಗಿದೆ. ಸಂಗಮ್‌ನನ್ನು ಸಮಾಧಾನ ಮಾಡಲು ಹೋಗಿದ್ದಾರೆ. ಈ ವೇಳೆ ಸಾಗರ್ ಹತ್ತಿರ ಹೋದಾಗ, ಕೋಪದಲ್ಲಿದ್ದ ಸಂಗಮ್ ತಳ್ಳಿದ್ದಾನೆ.
ಜಾಜಿ ಮಾತಿಗೆ ಸೈಲೆಂಟ್ ಆದ ಸಂಗಮ್
ಸಾಗರ್‌ನನ್ನು ತನ್ನ ಗುರುವೆಂದೆ ನಂಬಿದ್ದ ಸಂಗಮ್. ಆದರೆ ಆತ ತನ್ನ ಸ್ವಾರ್ಥಕ್ಕಾಗಿ ಗಿರಿಜಾ ಹಾಗೂ ಸಂಗಮ್ ಪ್ರೀತಿಯನ್ನು ಬಲಿ ಕೊಟ್ಟಿರುವುದು ಇತ್ತಿಚೆಗೆ ತಿಳಿದಿತ್ತು. ಹೀಗಾಗಿಯೇ ಸಾಗರ್ ಕಂಡರೆ ಸಂಗಮ್ ಕೋಪ ಜಾಸ್ತಿ. ಎಲ್ಲಾ ಕೋಪ ಹೊರ ಹಾಕಬೇಕು, ಸತ್ಯ ಕೇಳಬೇಕು ಎನ್ನುವಷ್ಟರಲ್ಲಿ ಜಾಜಿ ಅಡ್ಡ ಬಂದಿದ್ದಾಳೆ. ಏನನ್ನು ಕೇಳಬಾರದು ಎಂದು ಕಣ್ಸನ್ನೆಯಲ್ಲೇ ಮನವಿ ಮಾಡಿದ್ದಾಳೆ. ಸಂಗಮ್, ಜಾಜಿಯ ಮಾತಿಗೆ ಒಪ್ಪಿ ಸುಮ್ಮನಾಗಿದ್ದಾನೆ. ಆದರೆ ಆ ಕೋಪ ಕಡಿಮೆಯಾಗಿಲ್ಲ. ಯಾರೂ ಇಲ್ಲಿ ನಿಲ್ಲಬೇಡಿ ಎಂದು ಜೋರಾಗಿ ಕಿರುಚಿದ್ದಾನೆ.

ಹಾಡಿನ ಬಗ್ಗೆ ನೆಟ್ಟಿಗರ ಬೇಸರ
ಇಷ್ಟು ದಿನ ನಿರ್ದೇಶಕ ಸಂಪೃಥ್ವಿ ಹಾಕುತ್ತಿದ್ದ ನಮ್ಮ ಲಚ್ಚಿ ಧಾರಾವಾಹಿಯ ಒಂದೊಂದು ಪೋಸ್ಟ್ ಕೂಡ ಮನಮುಟ್ಟುವಂತೆ ಇತ್ತು. ಅಲ್ಲೊಂದು ಸಂಬಂಧಗಳ ಒಡನಾಟವಿರುತ್ತಾ ಇತ್ತು. ಗಿರಿಜಾ-ಸಂಗಮ್ ಪ್ರೀತಿಯ ಫೋಟೋಗಳು, ಲಚ್ಚಿ-ಗಿರಿಜಾಳ ಬಾಂಧವ್ಯ, ಸೆಟ್ ನಲ್ಲಿ ಕಲಾವಿದರು ಹೇಗಿರುತ್ತಾರೆ, ಲಚ್ಚಿ-ರಿಯಾ ರಿಯಲ್ ಆಗಿ ಹೇಗಿರುತ್ತಾರೆ ಹೀಗೆ ಸ್ಪೆಷಲ್ ಎನಿಸಬೇಕು. ಆ ರೀತಿಯ ವಿಡಿಯೋ ಫೋಟೋಗಳನ್ನೇ ಹಾಕುತ್ತಿದ್ದರು. ಇನ್ನು ಸ್ಟಾರ್ ಸುವರ್ಣದಲ್ಲಿ ಬಿಡುತ್ತಿದ್ದ ಪ್ರೋಮೋಗಳು ಕುತೂಹಲವನ್ನು ಹುಟ್ಟು ಹಾಕುತ್ತಿದ್ದವು. ಆದರೆ ಇಂದು ಸಂಗಮ್ ಹಾಡಿರುವ ವಿಡಿಯೋಗೆ ಎಲ್ಲರದ್ದು ಒಂದೇ ಕಮೆಂಟ್, ಲಿಪ್ ಸಿಂಕ್ ಆದರೂ ಮಾಡಿಸಿ ಅಂತ. ಇದು ಮ್ಯೂಸಿಕ್ ಮೇಲೆ ನಡೆಯುವ ಧಾರಾವಾಹಿಯಾಗಿರುವ ಕಾರಣ ಒರಿಜಿನಲ್ ಮ್ಯೂಸಿಕ್ ಕ್ರಿಯೇಟ್ ಮಾಡಿಸಬಹುದಿತ್ತು ಎಂಬ ಅಭಿಪ್ರಾಯ ನೋಡುಗರದ್ದು.


Click it and Unblock the Notifications