Ankita Amar: 'ನಮ್ಮನೆ ಯುವರಾಣಿ' ಅಂಕಿತಾ ಅಮರ್ ಸಿನಿಮಾ ಆರಂಭ!
ಎಲ್ಲರ ನೆಚ್ಚಿನ ನಟಿ ಅಂಕಿತಾ ಅಮರ್ ಈಗ ಸಿನಿಮಾದಲ್ಲೂ ನಟಿಸಲಿದ್ದಾರೆ. ನಟನಾ ಕೌಶಲ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ಅಂಕಿತಾ ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣವನ್ನು ನಿನ್ನೆಯಷ್ಟೇ ಪ್ರಾರಂಭಿಸಿದ್ದಾರೆ. ಟಿವಿ ಶೋಗಳಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಅಂಕಿತಾ ಅಮರ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ಯಾವ ಪಾತ್ರವನ್ನು ಬೇಕಾದರೂ ನಟಿಸುವ ಅಂಕಿತಾ ಅಮರ್ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸೈಲೆಂಟ್ ಆಗೇ ಫೇಮಸ್ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗಿನ ಕಿರುತೆರೆಯಲ್ಲೂ ನಟಿಸುತ್ತಿರುವ ಅಂಕಿತಾ, ಅಲ್ಲೂಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ, ಈ ಹಿಂದೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು.
ಈಗಾಗಲೇ ಬಾಲ ನಟಿಯಾಗಿ ಶಂಕರ್ ನಾಗ್ ಅವರ ಜೊತೆಗೆ ನಟಿಸಿದ್ದ ಅಂಕಿತಾ ಅವರು, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲೂ ಬಣ್ಣ ಹಚ್ಚಿದ್ದರು. 'ಜಗಳಗಂಟಿಯರು', 'ತುಂಟ' ಸಿನಿಮಾಗಳಲ್ಲಿ ನಟಿಸಿದ್ದು, ಕುಲವಧು ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಇನ್ನು ಅಂಕಿತಾ ಅಮರ್ ಮೆಡಿಕಲ್ ಬಯೋ ಕೆಮಿಸ್ಟ್ರಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಪಡೆದವರು. ಮುಂದೆ ಪಿಎಚ್‌ಡಿ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಆದರೆ, ಸದ್ಯ ಸಿನಿಮಾ, ಧಾರಾವಾಹಿಗಳಲ್ಲಿ ಅಂಕಿತಾ ಬ್ಯುಸಿಯಾಗಿದ್ದಾರೆ.
ಚೊಚ್ಚಲ ಚಿತ್ರದಲ್ಲಿ ಅಂಕಿತಾ ಅಮರ್!
ಅಂಕಿತಾ ಅಮರ್, ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. ಆರ್ಜೆ ಮಯೂರ್ ರಾಘವೇಂದ್ರ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಂಕಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮುಹೂರ್ತ ನಿನ್ನೆ( ಏಪ್ರಿಲ್ 12) ನಡೆದಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ಅಂಕಿತಾ ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಅಂತಿಮವಾಗಿ ಸುದಿನ ಬಂದಿದೆ. ಶಾರ್ಟ್ಸ್ ಶೂಟ್ ಎಂದು ಬರೆದುಕೊಂಡಿದ್ದಾರೆ. ಬಳಿಕ ಅಂಕಿತಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇಂಡಸ್ಟ್ರಿಯಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಅಂಕಿತಾ ಅವರ ವೃತ್ತಿಜೀವನದ ಮೈಲಿಗಲ್ಲನ್ನು ಅಭಿನಂದಿಸುತ್ತಿದ್ದಾರೆ.
ನಿರೂಪಣೆಯಲ್ಲೂ ಸೈ ಎನಿಸಿಕೊಂಡ ನಟಿ!
ಅಂಕಿತಾ ಅಮರ್ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ನಮ್ಮನೆ ಯುವರಾಣಿಯ ಮೀರಾ ತೆರೆಯ ಮೇಲಿನ ಪಾತ್ರದ ಮೂಲಕ ಖ್ಯಾತಿಯನ್ನು ಅಂಕಿತಾ ಗಳಿಸಿದ್ದಾರೆ. ಅಂಕಿತಾ ಅಭಿನಯದ ಜೊತೆಗೆ ಗಾಯಕಿ ಹಾಗೂ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಒಂದು ತಿಂಗಳ ಹಿಂದೆ ನಮ್ಮನೆ ಯುವರಾಣಿ ಧಾರಾವಾಹಿಯಿಂದ ಹೊರ ನಡೆದಿದ್ದರು. ಬಳಿಕ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಸದ್ಯ ತೆಲುಗು ಕಿರುತೆರೆಯಲ್ಲೂ ಕಮಾಲ್ ಮಾಡಿರುವ ಅಂಕಿತಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
'ಅಬ ಜಬ ದಬ' ಚಿತ್ರದಲ್ಲಿ ಅಂಕಿತಾ ನಾಯಕಿ!
'ಅಬ ಜಬ ದಬ' ಚಿತ್ರದ ಮುಹೂರ್ತವನ್ನು ಕನಕಪುರದಲ್ಲಿ ಚಿತ್ರತಂಡ ಸದ್ದಿಲ್ಲದೆ ಮುಗಿಸಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಪೃಥ್ವಿ ಹಾಗೂ ಅಂಕಿತಾ ಅಮರ್ ಭಾಗಿಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣವು ಸುಮಾರು 15 ದಿನಗಳು ನಡೆಯಲಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಊರ್ವಶಿ ಕೂಡ ನಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರವನ್ನು ಅನಂತ ಕೃಷ್ಣ ಶಾಸ್ತ್ರಿ ನಿರ್ಮಿಸುತ್ತಿದ್ದಾರೆ.
ಕಾಮಿಡಿ, ಫ್ಯಾಂಟಸಿ ಚಿತ್ರ 'ಅಬ ಜಬ ದಬ'!
ಇನ್ನು ಮಯೂರ ರಾಘವೇಂದ್ರ 'ಕನ್ನಡ್ ಗೊತ್ತಿಲ್ಲ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. 'ಅಬ ಜಬ ದಬ' ಅವರ ಎರಡನೇಯ ಚಿತ್ರವಾಗಿದೆ. ಈ ಚಿತ್ರ ಹೆಸರಿನಂತೆಯೇ ಫ್ಯಾಂಟಸಿ ಹಾಗೂ ಕಾಮಿಡಿಯಿಂದ ಕೂಡಿದೆ ಎನ್ನಲಾಗಿದೆ. 'ಅಬ ಜಬ ದಬ' ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣವಿದ್ದು, ಸತೀಶ್ ರಘುನಾಥನ್ ಅವರ ಸಂಗೀತವಿದೆ. ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ, ನಿರ್ದೇಶಕ ಮಯೂರ ರಾಘವೇಂದ್ರ ಸೇರಿದಂತೆ ಪಿಡಿ ಸತೀಶ್ ಚಂದ್ರ, ಮಹಾಂತೇಶ್, ಮುಖ್ಯಮಂತ್ರಿ ಚಂದ್ರು, ಅನಿರುದ್ಧ ಮಹೇಶ್, ಅನಂತ ಕೃಷ್ಣ, ಬಿಗ್ ಬಾಸ್ ಖ್ಯಾತಿಯ ರಘು, ಊರ್ವಶಿ ಹಾಗೂ ವಿಶ್ವಕಿರಣ್ ಮುಂತಾದವರು ನಟಿಸಲಿದ್ದಾರೆ.


Click it and Unblock the Notifications











