ಈ ವರ್ಷ ಬಿಗ್ ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ ಈ ಸೂಪರ್ ಸ್ಟಾರ್ ..!
ಹಿಂದಿಯಲ್ಲಿ ಜನಪ್ರಿಯವಾದ ನಂತರ ಬಿಗ್ ಬಾಸ್ ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು.ಕನ್ನಡದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ಸುದೀಪ್ ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ನಾಗಾರ್ಜುನ ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ಕಮಲ್ ಹಾಸನ್ ಕಳೆದ ವರ್ಷದಿಂದ ವಿಜಯ್ ಸೇತುಪತಿ ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇಂಥಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಳೆದ ವರ್ಷ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದರು. ಹನ್ನೊಂದು ವರ್ಷದ ಸಂಬಂಧ ಕಡಿದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸುದೀಪ್ ಬದಲು ಬಿಗ್ ಬಾಸ್ ನಿರೂಪಣೆಯನ್ನು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿ ಸದ್ಯ ಇದೆ. ಇದಕ್ಕೆ ಪೂರಕವಾಗಿ ರಿಷಭ್ ಶೆಟ್ಟಿ ಅವರಿಂದ ಹಿಡಿದು ಗೋಲ್ಡನ್ ಸ್ಟಾರ್ ಗಣೇಶ್‌ವರೆಗೆ ಕೆಲ ಹೆಸರುಗಳು ಕೇಳಿ ಬರುತ್ತಿವೆ. ಇದರ ನಡುವೆ ತೆಲುಗಿನಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮದ ಸಾರಥಿ ಈ ವರ್ಷ ಯಾರಾಗುತ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ.

ಹೌದು, ಬಿಗ್ ಬಾಸ್ ಕಾರ್ಯಕ್ರಮವನ್ನು ತೆಲುಗಿನಲ್ಲಿ ಕಳೆದ 08 ವರ್ಷಗಳಿಂದ ನಾಗಾರ್ಜುನ ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ವರ್ಷ ನಾಗಾರ್ಜುನ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ. ನಾಗಾರ್ಜುನ ಅವರ ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದು ಸದ್ಯ ಬಹಿರಂಗವಾಗದಿದ್ದರೂ, ನಾಗಾರ್ಜುನ ಹಲವು ಚಿತ್ರಗಳನ್ನು ಮಾಡುತ್ತಿದ್ದಾರೆ ಹೀಗಾಗಿ ಬಿಗ್ ಬಾಸ್‌ಗೆ ಸಮಯ ನೀಡಲಾಗುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಹೀಗಿರುವಾಗ ಇದೀಗ ಬಿಗ್ ಬಾಸ್ ಕಾರ್ಯಕ್ರಮವನ್ನು ಈ ಬಾರಿ ನಾಗಾರ್ಜುನ ಬದಲು ಬಾಲಯ್ಯ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಸದ್ಯ ಆಂಧ್ರದಲ್ಲಿ ಹರಿದಾಡುತ್ತಿದೆ. ಇನ್ನು ಬಾಲಯ್ಯ ಈಗಾಗಲೇ ಅನ್‌ಸ್ಟಾಪೆಬಲ್ ವಿತ್ ಎನ್‌ಬಿಕೆ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ತಮ್ಮ ಮಾತು, ಹಾವ, ಭಾವದಿಂದ ತೆಲುಗು ನಾಡಿನ ಪ್ರೇಕ್ಷಕರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಹೀಗಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಾಲಯ್ಯ ಅವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಿಗ್ ಬಾಸ್ ಆಯೋಜಕರು ಬಂದಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಈ ಸುದ್ದಿ ಮುಂಬರುವ ದಿನಗಳಲ್ಲಿ ನಿಜವೇ ಆದಲ್ಲಿ ತೆಲುಗು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗುವುದರಲ್ಲಿ ಅನುಮಾನ ಇಲ್ಲ.
ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮ ಕನ್ನಡ ಮತ್ತು ಹಿಂದಿಯಲ್ಲಿ ಅಕ್ಟೋಬರ್ ನಲ್ಲಿ ಶುರುವಾದರೆ ತೆಲುಗು ಸೆಪ್ಟೆಂಬರ್‌ನಲ್ಲಿ ಶುರುವಾಗುತ್ತೆ. ಆದರೆ ಈ ಬಾರಿ ಬಿಗ್ ಬಾಸ್ ಸೀಸನ್ 9 ಸೆಪ್ಟೆಂಬರ್‌ಗಿಂತ ಮೊದಲೇ ಅಂದರೆ ಮೇ ತಿಂಗಳಿನಲ್ಲಿಯೇ ಶುರುವಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಸ್ಫರ್ಧಿಗಳ ಹುಡುಕಾಟ ಈಗಾಗಲೇ ಆಂಧ್ರಪ್ರದೇಶದಲ್ಲಿ ಶುರುವಾಗಿದ್ದು ಈ ಬಾರಿ ಕೂಡ ತೆಲುಗು ಸೆಲೆಬ್ರಿಟಿಗಳ ಜೊತೆ ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ಸ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಬಿಗ್ ಬಾಸ್ ಸೆಟ್ ನಿರ್ಮಾಣ ಕೆಲಸ ಕೂಡ ಶುರುವಾಗಿದೆ ಎಂದು ವರದಿಯಾಗಿದೆ. ಸ್ಟಾರ್ ಮಾ ಮತ್ತು ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಈ ವರ್ಷ ಕೂಡ ತೆಲುಗು ಬಿಗ್ ಬಾಸ್ ಪ್ರಸಾರವಾಗಲಿದೆ.
ಅಂದ್ಹಾಗೇ ಇದಕ್ಕೂ ಮುನ್ನ ತೆಲುಗು ಬಿಗ್ ಬಾಸ್ ಕಾರ್ಯಕ್ರಮವನ್ನು ಈ ವರ್ಷ ರಶ್ಮಿಕಾ ಮಂದಣ್ಣ ಅವರ ಗೆಳೆಯ ವಿಜಯ್ ದೇವರಕೊಂಡ ನಡೆಸಿಕೊಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ವಿಜಯ್ ದೇವರಕೊಂಡ ಬದಲು ನಂದಮೂರಿ ಬಾಲಕೃಷ್ಣ ಅವರ ಹೆಸರು ಕೇಳಿ ಬರುತ್ತಿದೆ. ಬಾಲಯ್ಯ ನಿರೂಪಣೆಯಲ್ಲಿ ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರುತ್ತಾ ? ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.


Click it and Unblock the Notifications











