ಮಿ. ದುಬೈ ಆಗಿದ್ದವರು ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ? ದಿಲೀಪ್ ಶೆಟ್ಟಿ ಜರ್ನಿ ಬಗ್ಗೆ ನಿಮಗೆ ಗೊತ್ತೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಗಳ ಪೈಕಿ 'ನೀನಾದೆ ನಾ' ಧಾರಾವಾಹಿಯೂ ಕೂಡಾ ಒಂದು. 'ನೀನಾದೆ ನಾ' ಧಾರಾವಾಹಿಯ ಹಳೆಯ ಅಧ್ಯಾಯ ಇತ್ತೀಚೆಗಷ್ಟೇ ಮುಗಿದಿದ್ದು, ಹೊಸ ಅಧ್ಯಾಯ ಇದೀಗ ಶುರುವಾಗಿದೆ. ಆದರೆ, ಹೊಸ ಅಧ್ಯಾಯದಲ್ಲಿಯೂ ನಾಯಕ ವಿಕ್ರಮ್ ಹಾಗೂ ನಾಯಕಿ ವೇದಾಳಾಗಿ ದಿಲೀಪ್ ಶೆಟ್ಟಿ ಹಾಗೂ ಖುಷಿ ಶಿವು ನಟಿಸುತ್ತಿರುವುದು ಸೀರಿಯಲ್ ಪ್ರಿಯರ ಪಾಲಿಗೆ ಖುಷಿಯ ವಿಚಾರವೂ ಹೌದು.
ಅಂದ ಹಾಗೇ ನಾಯಕ ವಿಕ್ರಮ್ ಆಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ದಿಲೀಪ್ ಶೆಟ್ಟಿ. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದಿಲೀಪ್ ಶೆಟ್ಟಿ ಎಂ.ಕಾಂ ಪದವಿಯನ್ನು ಪಡೆದಿದ್ದಾರೆ. ಪದವೀಧರರಾಗಿರುವ ಇವರು ಮುಂದೆ ದುಬೈಯ ಎಂ.ಎನ್.ಸಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸವನ್ನೂ ಕೂಡಾ ಮಾಡುತ್ತಿದ್ದಾರೆ.

ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ದಿಲೀಪ್ ಶೆಟ್ಟಿ ಕೆಲವೊಂದು ಫ್ಯಾಷನ್ ಶೋಗಳಲ್ಲಿಯೂ ಭಾಗವಹಿಸಿದ್ದರು. 2015 ರಲ್ಲಿ ದುಬೈನಲ್ಲಿ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ಇವರು ಮಿ. ದುಬೈ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು. ತದ ನಂತರ ಕೆಲಸಕ್ಕೆ ವಿದಾಯ ಹೇಳಿ ಭಾರತಕ್ಕೆ ಮರಳಿದ ದಿಲೀಪ್ ನಟನೆಯತ್ತ ಮುಖ ಮಾಡಿದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ನಾಯಕ ವಿನಾಯಕ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ದಿಲೀಪ್ ಶೆಟ್ಟಿ. ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ದಿಲೀಪ್ ಶೆಟ್ಟಿ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಪ್ರತಿಭಾವಂತ ಹುಡುಗ. ತೆಲುಗಿನ 'ಸ್ವರ್ಣ ಖಡ್ಗಂ'ಎನ್ನುವ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡ ಇವರು ನಂತರ ಕನ್ನಡ ಕಿರುತೆರೆಗೆ ಮರಳಿದ್ದು ರಾಘವನಾಗಿ.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಯಕ ರಾಘವನಾಗಿ ಅಭಿನಯಿಸಿದ್ದರು ದಿಲೀಪ್ ಶೆಟ್ಟಿ. ಅಲ್ಲಿಯೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ಇವರು ಮತ್ತೆ ಪುನಃ ಹಾರಿದ್ದು ತೆಲುಗು ಕಿರುತೆರೆಗೆ. ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು ದಿಲೀಪ್ ಶೆಟ್ಟಿ.

ಸಂತಸದ ವಿಚಾರವೆಂದರೆ ತೆಲುಗಿನ 'ಕೃಷ್ಣ ತುಳಸಿ' ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ ಅದೇ ಹೆಸರಿನಲ್ಲಿ ಪ್ರಸಾರವಾಗಿತ್ತು. ವಿಭಿನ್ನ ರೀತಿಯ ಕೌಟುಂಬಿಕ ಕಥಾಹಂದರವನ್ನೊಳಗೊಂಡಿರುವ ಈ ಧಾರಾವಾಹಿಯನ್ನು ಕನ್ನಡ ಕಿರುತೆರೆ ವೀಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು. ನಂತರ 'ನೀನಾದೆ ನಾ' ಧಾರಾವಾಹಿಯಲ್ಲಿ ನಾಯಕ ವಿಕ್ರಮ್ ಆಗಿ ಬಣ್ಣ ಹಚ್ಚಿರುವ ಈಕೆ ಪಕ್ಕಾ ರೌಡಿಯಾಗಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು.
ಈಗ ಹೊಸ ಅಧ್ಯಾಯದಲ್ಲಿಯೂ ಕೂಡಾ ಅವರೇ ವಿಕ್ರಮ್ ಆಗಿ ಅಭಿನಯಿಸುತ್ತಿದ್ದು ಇಲ್ಲಿಯೂ ಕೂಡಾ ರೌಡಿಯಾಗಿ ಮಿಂಚುತ್ತಿರುವುದು ವಿಶೇಷ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದಿಲೀಪ್ ಶೆಟ್ಟಿ ಹಿರಣ್ಯ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ಹಿರಿತೆರೆಗೂ ಕಾಲಿಟ್ಟಿದ್ದಾರೆ.


Click it and Unblock the Notifications











