Puttakkana Makkalu: ಸ್ನೇಹಾ ಶವದ ಮೇಲೆ ರಾಷ್ಟ್ರಧ್ವಜ; ಸೋಷಿಯಲ್ ಮೀಡಿಯಾದಲ್ಲಿ ವಿರೋಧ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಡಿಸಿಯಾದ ಕೆಲವೇ ದಿನಗಳಲ್ಲಿ ಅಪಾಯ ಎದುರಾಗಿದೆ. ಸ್ನೇಹಾಗೆ ಡಿಸಿಯಾಗಬೇಕೆಂಬುದು ಚಿಕ್ಕವಯಸ್ಸಿನ ಕನಸಾಗಿತ್ತು. ಅದಕ್ಕಾಗಿಯೇ ಓದುತ್ತಿದ್ದಳು. ಆದರೆ ಕಂಠಿ ಜೊತೆಗೆ ಮದುವೆಯಾದ ಮೇಲೆ ಡಿಸಿಯಾಗುವ ಕನಸಿಗೆ ಬ್ರೇಕ್ ಬಿದ್ದಿತ್ತು. ಸ್ವಲ್ಪ ದಿನಗಳ ಕಾಲ ಹಾಗೇ ಸಮಯದೂಡಿದಳು. ಅತ್ತೆಯ ಸಪೋರ್ಟ್ ಸಿಕ್ಕಿತು, ಗಂಡನ ಬೆಂಬಲವೂ ಸಿಕ್ಕ ಮೇಲೆ ಫೈನಲೀ ಡಿಸಿಯಾದಳು. ಸ್ನೇಹಾ ಡಿಸಿಯಾದ ಮೇಲೆ ಪುಟ್ಟಕ್ಕ ಖುಷಿ ಪಟ್ಟಿದ್ದು ಕಡಿಮೆ ಏನು ಅಲ್ಲ.
ಸ್ನೇಹಾ ಕೂಡ ತನ್ನ ಹೆಸರ ಮುಂದೆ ಅವ್ವನ ಹೆಸರು ಸೇರಿಸಿಕೊಂಡಳು. ಕೆಲವೊಂದು ಅನ್ಯಾಯಗಳ ವಿರುದ್ಧ ಹೋರಾಡುವುದಕ್ಕೆ ಶುರು ಮಾಡಿದಳು. ಅತ್ತೆಯನ್ನು ಕಾಪಾಡಿದಳು, ಅಕ್ಕನನ್ನು ಕಂಡು ಹಿಡಿದಳು. ಎಲ್ಲಾ ಸತ್ಯವನ್ನು ಮನೆಯವರಿಗೆ ಹೇಳಬೇಕು ಎನ್ನುವಷ್ಟರಲ್ಲಿ ಸ್ನೇಹಾ ಬಾರದೂರಿಗೆ ಹೋಗಿದ್ದಾಳೆ. ಆದರೆ ಈಗ ಸ್ನೇಹಾ ಶವಸಂಸ್ಕಾರದ ವಿಚಾರಕ್ಕೆ ಧಾರಾವಾಹಿ ಟ್ರೋಲ್ ಆಗುತ್ತಿದೆ.

ಸ್ನೇಹಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಸ್ನೇಹಾಳ ಪಾತ್ರ ಅಂತ್ಯವಾಗಿದೆ. ಸಿಂಗಾರಮ್ಮ ಮಾಡಿದ ಪ್ಲ್ಯಾನ್‌ಗೆ ಸ್ನೇಹಾಗೆ ಆಕ್ಸಿಡೆಂಟ್ ಆಗಿದೆ. ಮನೆಯಲ್ಲಿ ಗೋಳಾಟ ಮುಗಿಲು ಮುಟ್ಟಿದೆ. ಸ್ನೇಹಾಳನ್ನ ಕಳೆದುಕೊಂಡ ಕಂಠಿ ಮೌನಿಯಾಗಿದ್ದಾನೆ. ಪುಟ್ಟಕ್ಕ ಎದೆ ಬಡಿದುಕೊಂಡು ಅಳುತ್ತಿದ್ದಾಳೆ. ಇದರ ನಡುವೆ ಸ್ನೇಹಾಳ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ತಯಾರಿ ನಡೆದಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.
ಸರ್ಕಾರಿ ಗೌರವಗಳ ಸಲ್ಲಿಕೆ
ಒಬ್ಬ ಜಿಲ್ಲಾಧಿಕಾರಿ ಸಾವನ್ನಪ್ಪಿದಾಗ ಯಾವ ರೀತಿಯ ಸರ್ಕಾರಿ ಗೌರವಗಳನ್ನು ನೀಡುತ್ತಾರೋ ಅದೇ ರೀತಿಯ ಗೌರವವನ್ನು ರೀ-ಕ್ರಿಯೇಟ್ ಮಾಡಲಾಗಿದೆ. ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದ್ದಾರೆ. ಮನೆಯವರೆಲ್ಲಾ ಮಗಳನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಈ ಸಮಯದಲ್ಲಿ ಸಹನಾ ಬದುಕಿರುವ ಸತ್ಯವೂ ತಿಳಿಯುತ್ತಿಲ್ಲ. ಪುಟ್ಟಕ್ಕನಿಗಂತು ಇಬ್ಬರು ಹೆಣ್ಣು ಮಕ್ಕಳನ್ನು ಕಳೆದುಕೊಂಡ ನೋವು ತಡೆಯುವಂತದ್ದಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ
ಸ್ನೇಹಾಳ ಶವದ ಮೇಲೆ ರಾಷ್ಟ್ರ ಧ್ವಜವನ್ನು ಹೊದಿಸಲಾಗಿದೆ. ಸರ್ಕಾರದ ಉನ್ನದ ಅಧಿಕಾರದಲ್ಲಿರುವವರು ಸಾವನ್ನಪ್ಪಿದರೆ ಎಲ್ಲಾ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಅದರಲ್ಲಿ ಪಾರ್ಥೀವ ಶರೀರದ ಮೇಲೆ ರಾಷ್ಟ್ರ ಧ್ವಜವನ್ನು ಹಾಕುತ್ತಾರೆ. ಇದು ಅವರ ಹುದ್ದೆಗೆ, ಅವರ ಕೆಲಸಕ್ಕೆ ನೀಡುವ ಗೌರವ. ಆದರೆ ಈ ಧಾರಾವಾಹಿಯಲ್ಲಿ ಸ್ನೇಹಾ ಶವದ ಮೇಲೆ ರಾಷ್ಟ್ರ ಧ್ವಜ ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ರಾಷ್ಟ್ರ ಧ್ವಜವನ್ನ ಎಲ್ಲರ ಮೇಲೂ ಹಾಕೋದಾದರೆ ಅದಕ್ಕೆನೀಡುವ ಗೌರವ ಏನು? ಧಾರಾವಾಹಿಯಲ್ಲಿ ಹೀಗೆ ಮಾಡಬೇಡಿ ಎಂದೇ ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬರು ಕೂಡ ಈ ರೀತಿ ರಾಷ್ಟ್ರ ಧ್ವಜವನ್ನು ಹಾಕಬಾರದು ಅಲ್ವಾ? ಎಂದೇ ಕಮೆಂಟ್ ಹಾಕುತ್ತಿದ್ದಾರೆ.
ನಿರ್ದೇಶಕರ ಎಡವಟ್ಟು?
'ಪುಟ್ಟಕ್ಕನ ಮಕ್ಕಳು' ನಿರ್ದೇಶಕರು ಏನೋ ಮಾಡಲು ಹೋಗಿ ಏನು ಮಾಡಿದೆ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳು ಸಾವನ್ನಪ್ಪಿದರೆ ನಿಜ ಜೀವನದಲ್ಲಿ ರಾಷ್ಟ್ರ ಧ್ವಜ ಹಾಕ್ತಾರೆ ಅಂತ ಹೇಳಿ, ಧಾರಾವಾಹಿಯಲ್ಲೂ ಬಳಕೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅದರದ್ದೇ ಆದ ಗೌರವವಿದೆ. ಅದನ್ನು ಹೀಗೆ ಬಳಕೆ ಮಾಡಿಕೊಳ್ಳುವುದು ಸೂಕ್ತವಲ್ಲ ಎಂಬ ವಾದದೊಂದಿಗೆ ವಿರೋಧವೂ ವ್ಯಕ್ತವಾಗಿದೆ.


Click it and Unblock the Notifications











