ವಂಚನೆ, ಅಪಹರಣದ ಆರೋಪ ಹೊತ್ತವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿರುವ ಬಿಗ್ ಬಾಸ್, ಪ್ರೇಕ್ಷಕರ ಆಕ್ಷೇಪ...!
ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕನ್ನಡದಲ್ಲಿ ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತಿದೆ. ಜನ ಮನ ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದೆ. ಆದರೆ, ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಹೋಗಲು ಬೇಕಿರುವ ಮಾನದಂಡಗಳೇನು, ಯಾವ ಆಧಾರದ ಮೇಲೆ ಬಿಗ್ ಬಾಸ್ ಸ್ಫರ್ಧಿಗಳನ್ನು ಆಯ್ಕೆ ಮಾಡಲಾಗುತ್ತೆ ಎನ್ನುವ ಚರ್ಚೆ ಶುರುವಾಗಿದೆ.
ಹೌದು, ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಿರುತೆರೆಯಲ್ಲಿ ಹೆಸರು ಮಾಡಿರುವ ಅಥವಾ ವಿವಾದಕ್ಕೀಡಾದ ವ್ಯಕ್ತಿಯನ್ನು ಬಿಗ್ ಬಾಸ್ ಮನೆಗೆ ಕರೆತಂದು ಬಿಡಲಾಗುತ್ತೆ. ಒಮ್ಮೊಮ್ಮೆ ಜನ ಸಾಮಾನ್ಯರಿಗೆ ಕೂಡ ಅವಕಾಶ ಮಾಡಿಕೊಡಲಾಗುತ್ತೆ. ಸೋಶಿಯಲ್ ಮೀಡಿಯಾ ಇನ್ ಪ್ಲುಯೆನ್ಸರ್‌ಗಳಿಗೆ ಕೂಡ ಬಿಗ್ ಬಾಸ್ ಕಡೆಯಿಂದ ಬುಲಾವ್ ಬರುತ್ತೆ. ಆದರೆ ಈಗೀಗ ವಂಚನೆಯ ಆರೋಪವನ್ನು ಹೊತ್ತಿರುವವರನ್ನು ಕೂಡ ಬಿಗ್ ಬಾಸ್ ತಲೆ ಮೇಲೆ ಹೊತ್ತು ಮೆರೆಸುತ್ತಿದೆ. ಇದು ಎಷ್ಟು ಸರಿ ಎನ್ನುವುದೇ ಸದ್ಯಕ್ಕೆ ಸಾರ್ವತ್ರಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ಮನೆಯಲ್ಲಿರುವ ಚೈತ್ರಾ ಕುಂದಾಪುರ ಅವರ ಮೇಲೆ ವಂಚನೆ ಆರೋಪ ಇದೆ. ಕರ್ನಾಟಕ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಉದ್ಯಮಿಯೊಬ್ಬರಿಗೆ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 5 ಕೋಟಿ ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಸದ್ಯ ಜಾಮೀನು ಪಡೆದು ಹೊರಗಡೆ ಇರುವ ಚೈತ್ರಾ ಕುಂದಾಪುರ ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದು ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ವಿಚಾರಣೆಯನ್ನು ಎದುರಿಸಿದ್ದಾರೆ.ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಈಗ ಬಿಗ್ ಬಾಸ್ ಮನೆಯಲ್ಲಿರುವ ಮತ್ತೊಬ್ಬ ಸ್ಫರ್ಧಿ ಮೋಕ್ಷಿತಾ ಪೈ ಕೂಡ ಜೈಲಿಗೆ ಹೋಗಿ ಬಂದವರೇ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿದ ಆರೋಪ ಮೋಕ್ಷಿತಾ ಅವರ ಮೇಲಿದೆ. ಹತ್ತು ವರ್ಷದ ಹಿಂದೆ ಸುವರ್ಣ ನ್ಯೂಸ್ ಈ ಪ್ರಕರಣದ ಕುರಿತು ಮಾಡಿದ್ದ ವರದಿಯ ತುಣುಕು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆ ಪ್ರಕಾರ ನೋಡುವುದಾದರೆ ಮೋಕ್ಷಿತಾ 2014ರ ಆಸು ಪಾಸು ತನ್ನ ಬಳಿ ಟ್ಯೂಷನ್‌ಗೆಂದು ಬರುತ್ತಿದ್ದ ಬಾಲಕಿಯನ್ನು ತಮ್ಮ ಬಾಯ್‌ಫ್ರೆಂಡ್ ನಾಗಭೂಷಣ್ ಜೊತೆ ಸೇರಿ ಅಪಹರಿಸಿದ್ದರು. 25 ಲಕ್ಷಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಆ ನಂತರ ಮೋಕ್ಷಿತಾ ಅಲಿಯಾಸ್ ಐಶ್ವರ್ಯ ಮತ್ತು ಅವರ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದರು. ಈ ಕಾರಣಕ್ಕೆ ಈಗ ಬಿಗ್ ಬಾಸ್ ನಡೆಯನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಹೀಗೆ ಚೈತ್ರಾ ಕುಂದಾಪುರ ಮತ್ತು ಮೋಕ್ಷಿತ ಇಬ್ಬರ ಮೇಲೆ ಆರೋಪ ಇದೆ, ಅಪರಾಧದ ಹಿನ್ನಲೆ ಇದೆ. ಆದರೂ ಕೂಡ ಬಿಗ್ ಬಾಸ್‌ನಲ್ಲಿ ಅವಕಾಶ ನೀಡಲಾದ ಹಿನ್ನೆಲೆ ಅನೇಕರು ಈ ಮೂಲಕ ಸಮಾಜಕ್ಕೆ ನೀವೇನು ಸಂದೇಶ ಕೊಡುತ್ತಿದ್ದೀರಾ ಎಂದು ಬಿಗ್ ಬಾಸ್‌ಗೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯನ್ನು ಮಾಡುತ್ತಿದ್ದಾರೆ. ಕೆಲವರು ಬಿಗ್ ಬಾಸ್ ಮನೆಗೆ ಚೈತ್ರಾ ಕುಂದಾಪುರ ಮತ್ತು ಮೋಕ್ಷಿತಾ ಅವರನ್ನು ಕಳುಹಿಸಿದ್ದು ಇಲ್ಲಿಯವರೆಗೆ ಇಬ್ಬರನ್ನು ಮನೆಯಲ್ಲಿ ಉಳಿಸಿಕೊಂಡಿದ್ದು ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸಿದರೆ ಇನ್ನು ಕೆಲವರು ಇಬ್ಬರ ಮೇಲಿರುವುದು ಕೇವಲ ಆರೋಪ ಮಾತ್ರ ಅವರು ನಿಜಕ್ಕೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗುತ್ತೆ ಅದಕ್ಕೂ ಮೊದಲೇ ನಾವು ಅವರನ್ನು ಅಪರಾಧಿಗಳು ಎಂದು ನಿರ್ಧರಿಸುವುದು ತಪ್ಪಾಗುತ್ತೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಮೋಕ್ಷಿತಾ ಪರ ಬೆಂಬಲದ ಬಾವುಟ ಹಾರಿಸುತ್ತಿದ್ದಾರೆ. ಅಂದ್ಹಾಗೇ ಈ ಹಿಂದೆ ವಂಚನೆ ಆರೋಪ ಎದುರಿಸಿದ್ದ ಡ್ರೋನ್ ಪ್ರತಾಪ್ ಅವರಿಗೆ ಕೂಡ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು.


Click it and Unblock the Notifications











