ದೀಪಾವಳಿ ಹಬ್ಬಕ್ಕೆ ಕನ್ನಡ ವೀಕ್ಷಕರ ಮುಂದೆ ಹೊಸ ಧಾರಾವಾಹಿ
ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ದೀಪಾವಳಿ ಹಬ್ಬಕ್ಕಾಗಿ ಎಲ್ಲಾ ವಾಹಿನಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿ ದೀಪಾವಳಿ ಹಬ್ಬದಂದೇ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಆ ಧಾರಾವಾಹಿ ಯಾವುದು ಎಂದು ತಿಳಿಯಲು ಮುಂದೆ ನೋಡಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಗೌರಿ ಶಂಕರ' ಪ್ರೋಮೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ದೀಪಾವಳಿಗೆ ಹೊಸ ಧಾರಾವಾಹಿ
ದೀಪಾವಳಿ ಹಬ್ಬದ ಪ್ರಯುಕ್ತ 'ಗೌರಿಶಂಕರ' ಧಾರಾವಾಹಿಯನ್ನು ಸ್ಟಾರ್ ಸುವರ್ಣ ವಾಹಿನಿ ನವೆಂಬರ್ 13ರಿಂದ ಪ್ರಸಾರ ಮಾಡಲಿದೆ. ಈ ಬಗ್ಗೆ ಪ್ರೋಮೋ ರಿಲೀಸ್ ಆಗಿದ್ದು, ವೀಕ್ಷಕರು ಯಾವ ಸಮಯಕ್ಕೆ ಪ್ರಸಾರ ಎಂಬ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಸಮಯದ ಬಗ್ಗೆ ಮಾಹಿತಿ ನೀಡದ ವಾಹಿನಿ, ಬರ್ತಿದೆ ಬೆಂಕಿ ಜೊತೆ ಬಿರುಗಾಳಿಯ ಪ್ರೀತಿ ಕಥೆ 'ಗೌರಿ ಶಂಕರ' ಎಂದು ಪ್ರೋಮೋವನ್ನು ಪ್ರಸಾರ ಮಾಡಿದೆ. ಇದರಲ್ಲಿ ನಾಯಕ ನಾಯಕಿಯ ಮನೆಗೆ ಬಂದು ತಾನೇ ಮದುವೆ ಹುಡುಗ ಇರುವಾಗ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳಬಾರದು ಎಂದು ನಾಯಕಿ ಮತ್ತು ಮನೆಯವರಿಗೆ ಹೆದರಿಸಿ ಹೋಗುತ್ತಾನೆ.
ನಾಯಕಿಗೆ ಮನಸೋಲುವ ನಾಯಕ
ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನು ನಟಿ ಕೌಸ್ತುಭಮಣಿ ಹಾಗೂ ನಾಯಕನ ಪಾತ್ರದಲ್ಲಿ ಯಶವಂತ್ ಬೆಟ್ಟಸ್ವಾಮಿ ನಟಿಸುತ್ತಿದ್ದಾರೆ. ಈ ಹಿಂದೆ ಯಶವಂತ್ ಕನ್ನಡದ 'ಅರಮನೆ ಗಿಳಿ', 'ಇವಳು ಸುಜಾತ' ಹಾಗೂ 'ಹೂ ಮಳೆ' ಮತ್ತು ತೆಲುಗು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 'ಗೌರಿ ಶಂಕರ' ಧಾರಾವಾಹಿಯಲ್ಲಿ ಶಿವರುದ್ರಪ್ಪನ ಮಗ ಶಂಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಣ್ಣಿಗೆ ತಲೆ ಬಾಗಬಾರದು ಎಂದುಕೊಂಡಿರುವ ನಾಯಕ ಈಗ ನಾಯಕಿಯನ್ನು ನೋಡಿದ ಮೊದಲ ನೋಟಕ್ಕೆ ಮನಸೋತು ಹಿಂದೆ ಬಿದ್ದಿದ್ದಾನೆ. ವಿರುದ್ಧ ಆಲೋಚನೆಗಳಿರುವ ನಾಯಕ-ನಾಯಕಿ ಹೇಗೆ ಒಂದಾಗುತ್ತಾರೆ ಎಂಬುದೇ ಧಾರಾವಾಹಿಯ ಕಥೆಯಾಗಿದೆ.
ನಾಯಕಿಯ ಇತರೆ ಧಾರಾವಾಹಿಗಳು
ಇನ್ನು 'ಗೌರಿಶಂಕರ' ಮೂಲಕ ಕನ್ನಡ ಕಿರುತೆರೆಗೆ ಮರಳಿರುವ ಕೌಸ್ತುಭಮಣಿ ಈಗಾಗಲೇ ಹಿರಿತೆರೆಗೂ ಕಾಲಿಟ್ಟಾಗಿದೆ. ತೇಜ್ ನಿರ್ದೇಶಿಸಿ ನಟಿಸಿರುವ 'ರಾಮಾಚಾರಿ 2.0' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದ ಈಕೆ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. '45' ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿದ್ದಾರೆ.

ನಟಿ ವಿದ್ಯಾಮೂರ್ತಿ ನಟನೆ
ನಾಯಕ-ನಾಯಕಿ ಹೊರತುಪಡಿಸಿ ಈ ಧಾರಾವಾಹಿಯಲ್ಲಿ ನಟಿ ವಿದ್ಯಾಮೂರ್ತಿ, ನಾಯಕಿಯ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಟಿ ವಿದ್ಯಾಮೂರ್ತಿ ನಟಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ವಿದ್ಯಾಮೂರ್ತಿ ಎಲ್ಲರಿಗೂ ಚಿರಪರಿಚಿತರು. 'ಮಾಯಾಮೃಗ', 'ಮುಕ್ತ', 'ದೇವ್ರು', 'ದಂಡಪಿಂಡಗಳು', 'ಮೌನರಾಗ', 'ಪ್ರೀತಿ ಇಲ್ಲದ ಮೇಲೆ', 'ಮನ್ವಂತರ', 'ಪಾ.ಪ.ಪಾಂಡು', 'ಸಿಲ್ಲಿ ಲಲ್ಲಿ', 'ಅಡಚಣೆಗಾಗಿ ಕ್ಷಮಿಸಿ', 'ಜೋಗುಳ', 'ಜೊತೆಜೊತೆಯಲಿ', 'ನಿಗೂಢ ರಾತ್ರಿ', 'ಶಾಂತಂ ಪಾಪಂ', 'ಮನೆಯೊಂದು ಮೂರು ಬಾಗಿಲು', 'ಸ್ತ್ರೀ', 'ಮುಕ್ತ ಮುಕ್ತ', 'ಮಗಳು ಜಾನಕಿ' ಹೀಗೆ ಸುಮಾರು 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಧಾರಾವಾಹಿಯ ಪ್ರೋಮೋ ನೋಡಿದ ವೀಕ್ಷಕರು ಧಾರಾವಾಹಿಯ ಪ್ರಸಾರದ ಸಮಯಕ್ಕೆ ಬೇಡಿಕೆ ಇಟ್ಟಿದ್ದಾರೆ. 8 ಅಥವಾ 9 ಗಂಟೆಗೆ ಪ್ರಸಾರ ಮಾಡಿ ಎಂದು ಕೇಳುತ್ತಿದ್ದಾರೆ.


Click it and Unblock the Notifications











