'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯ ತಂಗಿ ಪಾತ್ರ ಮಾಡಿದ್ದು ಯಾರು ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ 'ಬ್ರಹ್ಮಗಂಟು' ಎಂಬ ಹೆಸರಿನ ಹೊಸ ಧಾರಾವಾಹಿ ಇನ್ನೇನು ಶುರುವಾಗಲಿದೆ. ಧಾರಾವಾಹಿಯ ಪ್ರೋಮೋ ಕೂಡಾ ಈಗಾಗಲೇ ರಿಲೀಸ್ ಆಗಿದ್ದು ಬಹಳಷ್ಟು ಕುತೂಹಲ ಕೆರಳಿಸಿದೆ. ಅಕ್ಕನಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ಧವಿರುವ ತಂಗಿಯ ಕಥೆ ಇದಾಗಿದ್ದು, ಇದರಲ್ಲಿ ತಂಗಿ ಪಾತ್ರವನ್ನು ಮಾಡುತ್ತಿರುವ ನಟಿಯ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ.
ಅಂದ ಹಾಗೇ ತಂಗಿಯಾಗಿ ಮೋಡಿ ಮಾಡುತ್ತಿರುವ ನಟಿ ಹೆಸರು ದಿಯಾ ಪಾಲಕ್ಕಲ್. 'ಕಿನ್ನರಿ' ಧಾರಾವಾಹಿಯ ಐಶ್ವರ್ಯ, 'ಅಮ್ಮಚ್ಚಿ ಎಂಬ ನೆನಪು' ಸಿನಿಮಾದ ವೈದೇಹಿಯೇ ಇದೀಗ 'ಬ್ರಹ್ಮಗಂಟು' ಧಾರಾವಾಹಿಯ ನಟಿ. ಹೌದು ಬಾಲ ನಟಿಯಾಗಿ 'ಕಿನ್ನರಿ' ಧಾರಾವಾಹಿಯಲ್ಲಿ ಐಶ್ವರ್ಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ನಟಿ ದಿಯಾ ಪಾಲಕ್ಕಲ್ ಅವರು ತಮಿಳು ಕಿರುತೆರೆಯಲ್ಲೂ ನಟಿಸಿದ ಅನುಭವ ಪಡೆದಿದ್ದಾರೆ.

ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡ ಬೆಡಗಿ ದಿಯಾ ಎಂದರೆ ತಪ್ಪಾಗಲಾರದು. 'ಜಾನ್ ಜಾನಿ ಜನಾರ್ಧನ್', 'ಜಾನಿ ಜಾನಿ ಎಸ್ ಪಪ್ಪಾ' ಮುಂತಾದ ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಹೆಸರು ಮಾಡಿರುವ ಈಕೆ '50' ಎಂಬ ಕಿರು ಚಿತ್ರದಲ್ಲಿಯೂ ನಟಿಸಿದ್ದಾರೆ.
'ಕಿನ್ನರಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಈಕೆ ನಂತರ ಕಾಣಿಸಿಕೊಳ್ಳುತ್ತಿರುವುದು ಈಗಲೇ. ಅಂದ ಹಾಗೆ ಸದ್ಯಕ್ಕೆ 'ಬ್ರಹ್ಮಗಂಟು' ಧಾರಾವಾಹಿ, ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಇವರು ತಮ್ಮ ಪಾತ್ರ ಹಾಗೂ ಸ್ವಭಾವದ ಮೂಲಕ ಈಗಾಗಲೇ ಬಹಳಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

ಅಂತೂ ಹೊಸದೊಂದು ಧಾರಾವಾಹಿಗೆ ಹೊಸ ಮುಖಗಳನ್ನು ನೋಡುವ ಸೌಭಾಗ್ಯ ಸಿಕ್ಕಿತಲ್ಲ ಎಂದು ಪ್ರೇಕ್ಷಕರು ಸಂತೋಷ ಪಡುವಾಗಲೇ, ಕೆಲ ವರ್ಷಗಳ ಹಿಂದೆ ಅವರನ್ನು ಮನರಂಜಿಸಿದ್ದ ನಟಿ ಇದೀಗ ಹೊಸದೊಂದು ರೂಪದಲ್ಲಿ ಬರುತ್ತಿರುವುದು ಅವರಿಗೆ ಮತ್ತಷ್ಟು ಸಂತೃಪ್ತಿ ತಂದಿದೆ ಎಂದರೆ ತಪ್ಪಾಗಲ್ಲ.
ವಿಭಿನ್ನ ಕಥೆಯುಳ್ಳ ಹಾಗೂ ವಿಭಿನ್ನ ಪಾತ್ರಗಳ ಹೊಸದೊಂದು ಧಾರಾವಾಹಿ ಇದೀಗ ಪ್ರೇಕ್ಷಕರಿಗೆ ಸಿಗುತ್ತಿದ್ದು, ಜೀ ಕನ್ನಡ ವಾಹಿನಿಯಲ್ಲಿ ಇದು ಪ್ರಸಾರವಾಗಲಿದೆ. ಕಥೆ ಹೇಗಿದೆ ಹಾಗೂ ಯಾವ ರೀತಿಯ ತಿರುವುಗಳನ್ನು ಹಾಗೂ ಕೊನೆಯನ್ನು ಕಾಣುತ್ತದೆ ಎಂಬುದನ್ನು ಧಾರಾವಾಹಿಯನ್ನು ಕಾದು ನೋಡಿ ತಿಳಿಯಬೇಕಿದೆ.
ಅಂದ ಹಾಗೆ ನಟಿ ದಿಯಾ ಪಾಲಕ್ಕಲ್ ಅವರು, ಇತ್ತೀಚೆಗಷ್ಟೇ ಪಿಯುಸಿ ಮುಗಿಸಿದ್ದು, ಭರತನಾಟ್ಯದಲ್ಲೂ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದಾರೆ. ಅವರ ತಾಯಿಯೇ ಅವರ ಭರತನಾಟ್ಯ ಗುರುವಾಗಿದ್ದು ಅವರ ನಟನೆಗೂ ತಾಯಿಯೇ ಪ್ರೇರಣೆಯಂತೆ.


Click it and Unblock the Notifications











