ಉದಯ ಟಿವಿಯಲ್ಲಿ ಬರಲಿದೆ ಹೊಸ ಧಾರಾವಾಹಿ 'ಕಣ್ಮಣಿ'
ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಸತತ 23 ವರ್ಷಗಳಿಂದ ಅನೇಕ ಮನರಂಜನಾ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನ ಗೆದ್ದಿದೆ.
ಇದೀಗ ಹೊಚ್ಚ ಹೊಸ ಧಾರಾವಾಹಿಯೊಂದನ್ನು ಪ್ರೇಕ್ಷಕರಿಗೆ ನೀಡಲು ಉದಯ ಟಿವಿ ಸಜ್ಜಾಗಿದೆ. ಒಂದು ರೋಮಾಂಚಕ ಪ್ರೇಮಕಥೆಯಾದ 'ಕಣ್ಮಣಿ' ಮಾರ್ಚ್ 19 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 10 ಕ್ಕೆ ಪ್ರಸಾರವಾಗಲಿದೆ.
'ಕಣ್ಮಣಿ' ಒಂದು ರೋಮಾಂಚಕ, ತ್ರಿಕೋನ ಪ್ರೇಮಕಥೆ ಸುತ್ತ ಹೆಣೆದಿರುವ ಧಾರಾವಾಹಿ. ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರುವ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿ. ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಗಳಿಂದ ನೊಂದ ನಾಯಕಿ ತನ್ನ ಹೊಸ ಬದುಕನ್ನ ಹೇಗೆ ಕಟ್ಟಿಕೊಳ್ಳುತ್ತಾಳೆ. ಅವಳ ಮುಂದೆ ಎದುರಾಗುವ ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಎನ್ನುವುದೇ ಈ ಕಥೆಯ ತಿರುಳು. ಮುಂದೆ ಓದಿರಿ....

ಬಿಸಿನೆಸ್ ಮ್ಯಾನ್ ಡಿ.ಕೆ
ಕೋಟ್ಯಾಂತರ ರೂಪಾಯಿ ಆಸ್ತಿ ಇರುವ ಒಬ್ಬ ಬಿಸಿನೆಸ್ ಮ್ಯಾನ್ ದ್ವಾರಕನಾಥ್ ಅಲಿಯಾಸ್ ಡಿ.ಕೆ. "ತಾನು ತಪ್ಪು ಮಾಡಲ್ಲ, ತಪ್ಪು ಮಾಡಿದವರನ್ನೂ ಬಿಡಲ್ಲ" ಅನ್ನೋದು ಇವನ ಘೋಷ ವಾಕ್ಯ. ಹೆಂಡತಿ ಕಾವ್ಯ ಸತ್ತು ನಾಲ್ಕು ವರ್ಷಗಳಾದರೂ ಇನ್ನೊಂದು ಮದುವೆಯಾಗದೆ ಅವಳ ನೆನಪಲ್ಲಿ ಇರುವ ಅಮರ ಪ್ರೇಮಿ.

ಧಾರಾವಾಹಿಯಲ್ಲಿ 'ಕಾವ್ಯ ಮಹಲ್'
ಮಡದಿ ಮುಮ್ತಾಜ್ ಗಾಗಿ ಶಹಜಹಾನ್ ತಾಜ್ ಮಹಲ್ ಕಟ್ಟಿಸಿದ್ರೆ, ಹೆಂಡತಿ ಮೇಲಿನ ಪ್ರೀತಿಗೆ ಡಿಕೆ ಕಾವ್ಯ ಮಹಲ್ ಕಟ್ಟಿಸಿ ಇತಿಹಾಸ ಸೃಷ್ಟಿಸಲು ಹೊರಡುತ್ತಾನೆ. ಅದಕ್ಕಾಗಿ ಏನೂ ಬೇಕಾದ್ರೂ ಮಾಡಲು ಸಿದ್ಧವಾಗ್ತಾನೆ.

ಕಣ್ಮಣಿ ಕಥೆ ಏನು.?
ಮುಂದೊಂದು ದಿನ ತನ್ನ ಹೆಂಡತಿಯ ರೂಪವುಳ್ಳ ಹುಡುಗಿಯೊಬ್ಬಳು ಇವನಿಗೆ ಎದುರಾಗುತ್ತಾಳೆ. ಅವಳು ಅವನ ಹೆಂಡಿತಿಯೇ.? ಇಹಲೋಕ ತ್ಯಜಿಸಿರುವವಳು ಎದುರಿಗೆ ಬರಲು ಹೇಗೆ ಸಾಧ್ಯ? ಆಕೆ ಯಾರು? ಇದು ಡಿ.ಕೆ ಕಥೆ.

ಇನ್ನೊಬ್ಬ ಹೀರೋ ಕಿಶನ್
'ಕಣ್ಮಣಿ'ಯ ಇನ್ನೊಬ್ಬ ನಾಯಕ ಕಿಶನ್. ತುಂಬು ಕುಟುಂಬದಲ್ಲಿ ಬೆಳದಿರುವ ಇವನು ಸಂಸ್ಕಾರವಂತನೂ, ತುಂಟನೂ ಹೌದು. ಸ್ವಂತ ಕಂಪನಿ ಇದ್ರೂ ಪ್ರೀತಿಗಾಗಿ ಕೂಲಿ ಕೆಲಸ ಮಾಡೋಕೂ ಸಿದ್ಧ. ನಾಯಕಿಯ ಒಳ್ಳೆತನಕ್ಕೆ ಮನಸೋಲುವ ಕಿಶನ್ ಅವಳ ಮುಂದೆ ಪ್ರೇಮ ಭಿಕ್ಷೆ ಬೇಡುತ್ತಾನೆ. ನಾಯಕಿ ತನ್ನ ಜೀವನದಲ್ಲಿ ನಡೆದ ಘಟನೆ ಹೇಳಿ ಅವನಿಂದ ದೂರ ಹೋಗ್ತಾಳೆ. ಕಿಶನ್ ತನ್ನ ಪ್ರೀತಿಯನ್ನ ಹೇಗೆ ಪಡೆಯುತ್ತಾನೆ, ನಾಯಕಿ ಅವನಿಗೆ ಸಿಗುತ್ತಾಳಾ? ಅನ್ನೋದು ಇವನ ಕಥೆ.

ತ್ರಿಕೋನ ಪ್ರೇಮಕಥೆಯ ಧಾರಾವಾಹಿ
ಪ್ರತೀ ಸಂಚಿಕೆಯಲ್ಲೂ ಕುತೂಹಲಕಾರಿ ತಿರುವುಗಳು ಹೊಂದಿದ್ದು, ಡಿಕೆ, ಅಂಜಲಿ, ಕಿಶನ್ ಈ ಮೂವರ ನಡುವೆ ನಡೆಯುವ ರೋಮಾಂಚಕ ಪ್ರೇಮಕಥೆಯೇ ಕಣ್ಮಣಿ. ಇಲ್ಲಿ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಔಚಿತ್ಯವನ್ನು ಹೊಂದಿರುವುದು ಈ ಕಥೆಯ ವಿಶೇಷ.

ಧಾರಾವಾಹಿಯ ತಾಂತ್ರಿಕ ತಂಡ
ಪಾರಿಜಾತ ಟೆಲಿ ಎಂಟರ್‍ಟ್ರೆನರ್ಸ್ ಬ್ಯಾನರ್ ಅಡಿ 'ಕಣ್ಮಣಿ' ನಿರ್ಮಾಣವಾಗುತ್ತಿದೆ. ಚಿತ್ರಕಥೆ ದೇವ್, ವೆಂಕಟ್ ರಾಮ್ ಅವರದ್ದು, ಸಂಭಾಷಣೆ ರೂಪಾ ಪ್ರಭಾಕರ್, ಎಸ್.ಎಂ.ಪಾಟೀಲ್, ರಾಜಶೇಖರ್ ಬರೆಯುತ್ತಿದ್ದಾರೆ. ಪೃಥ್ವಿರಾಜ್ ಕುಲಕರ್ಣಿ ನಿರ್ದೇಶಿಸುತ್ತಿದ್ದು, ಜೀವ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ.

ತಾರಾಬಳಗದಲ್ಲಿ ಯಾರ್ಯಾರಿದ್ದಾರೆ.?
ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ದಿವ್ಯಾ ಶೈಲೇಶ್ ನಾಯಕಿ ಅಂಜಲಿ ಪಾತ್ರ ನಿಭಾಯಿಸುತ್ತಿದ್ದಾರೆ. ಕಿರುತೆರೆಗೆ ಈಗತಾನೆ ಕಾಲಿಟ್ಟ ದರ್ಶಕ್ ಗೌಡ ‘ಡಿ.ಕೆ' ಪಾತ್ರ ಹಾಗೂ ಇನ್ನೊಬ್ಬ ನಾಯಕ ‘ಕಿಶನ್' ಪಾತ್ರವನ್ನು ನಂದೀಶ್ ಅಂದಗಾರ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಾಗೇಶ್, ಮೈಸೂರು ಮಾಲತಿ, ಗಿರೀಶ್, ಮೈಸೂರು ಶೋಭಾ, ನಾಯಕ್, ಸುಜಾತ, ಬೇಬಿ ಶ್ರೀಲಕ್ಷ್ಮಿ, ಸಿಂಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಧಾರಾವಾಹಿ ಪ್ರಸಾರ ಯಾವಾಗ.?
ಈಗಾಗಲೇ 'ಕಣ್ಮಣಿ' ಧಾರಾವಾಹಿಯ ಮೂವತ್ತಕ್ಕೂ ಹೆಚ್ಚು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಇದು ಕನ್ನಡ ಕಿರುತೆರೆ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು. ಹಾಗೆ 'ಕಣ್ಮಣಿ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಸುಕನ್ಯಾ ಹಾಸನ್ ಬರೆದಿದ್ದು, ಶ್ರೀಧರ್ ಸಂಭ್ರಮ್, ಹಿತನ್ ಹಾಸನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತ್ರಿಕೋನ ಪ್ರೇಮಕಥೆಯ 'ಕಣ್ಮಣಿ' ಇದೇ ಮಾರ್ಚ್ 19 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











