ಕಿರುತೆರೆ ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ; ಮನ ಸೆಳೆಯಲು ಬರುತ್ತಿದೆ 'ಲಕ್ಷ್ಮಿ' ಟಿಫನ್ ರೂಮ್!
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋ ಮೂಲಕ ವೀಕ್ಷಕರ ಮನ ಸೆಳೆಯುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಇದೀಗ ಈ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗಲಿದೆ. ಹೌದು, 'ಲಕ್ಷ್ಮಿ ಟಿಫನ್ ರೂಮ್' ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸ್ಟಾರ್ ಸುವರ್ಣ ವಾಹಿನಿ ತಯಾರಿ ಮಾಡಿಕೊಂಡಿದೆ.
ನೇರನುಡಿಯನ್ನು ಹೊಂದಿರುವ ವರಲಕ್ಷ್ಮಿ ಈ ಧಾರಾವಾಹಿಯ ಕಥಾನಾಯಕಿ. ಯಾವುದೇ ಸಮಯ ಎದುರಾದರೂ ವರಲಕ್ಷ್ಮಿ ನ್ಯಾಯದ ಪರ ನಿಲ್ಲುವ ಹುಡುಗಿ. ಅಪ್ಪ ಅಮ್ಮ ಇಲ್ಲದ ಈಕೆ ಅಕ್ಕ ಭಾವನ ಆಶ್ರಯದಲ್ಲಿ ಬೆಳೆಯುತ್ತಿರುವಾಕೆ. ಐಎಎಸ್ ಅಧಿಕಾರಿಯಾಗಬೇಕು ಎಂಬುದೇ ಈಕೆಯ ಜೀವನದ ಬಹುದೊಡ್ಡ ಕನಸು.

ಪರಿಸ್ಥಿತಿ ಎನ್ನುವುದು ಆಕೆಯನ್ನು ಕೂಡಾ ಬಿಡುವುದಿಲ್ಲ. ಇದ್ದಕ್ಕಿದ್ದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ವರಲಕ್ಷ್ಮಿ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಧೋರಣೆಯನ್ನು ಒಳಗೊಂಡಿರುವಂತಹ ಮನೆಗೆ ಸೊಸೆಯಾಗಿ ಸೇರುತ್ತಾಳೆ. ಗಂಡನ ಮನೆಯ ಕಟ್ಟುಪಾಡುಗಳನ್ನು, ರೀತಿ ನೀತಿಗಳ ಜೊತೆಗೆ ಸವಾಲುಗಳನ್ನು ಎದುರಿಸುವ ಆಕೆ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾಳಾ? ಐಎಎಸ್ ಕನಸನ್ನು ನನಸಾಗಿತ್ತಾಳಾ ಎಂಬುದು ಧಾರಾವಾಹಿಯ ಕಥೆ.
ಇದರ ಜೊತೆಗೆ ಬದುಕಿನಲ್ಲಿ ತನ್ನದೇ ಆದ ಕನಸುಗಳನ್ನು ಹೊಂದಿರುವ ಹೆಣ್ಣುಮಗಳು ವರಲಕ್ಷ್ಮಿ. ಈಕೆ ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಧಾರಾವಾಹಿ ತುಂಬಾ ಸೊಗಸಾಗಿ ವೀಕ್ಷಕರ ಮುಂದೆ ತೋರಿಸಲಿದೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟರಲ್ಲಿ ಒಬ್ಬರಾದ ಟೆನ್ನಿಸ್ ಕೃಷ್ಣ ಅವರು ಈ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕಿರುತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರ ಹೊರತಾಗಿ ಸುನೇತ್ರಾ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಹೀಗೆ ಅನೇಕ ಕಲಾವಿದರು ಲಕ್ಷ್ಮಿ ಟಿಫನ್ ರೂಂ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಅಂದ ಹಾಗೇ ಈ ಧಾರಾವಾಹಿಯು ಇದೇ ಸೋಮವಾರ (ಮಾರ್ಚ್ 4) ರಿಂದ ಸಂಜೆ 6.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











