ರಮೇಶ್ ಅರವಿಂದ್ ನಿರ್ಮಾಣದ ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಸಾರ
ಕಳೆದ ತಿಂಗಳು ದೀಪಾವಳಿ ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಾರಂಭವಾಗಿದೆ. ಇಬ್ಬರು ವಿಭಿನ್ನ ಮನಸ್ಥಿತಿಯ ನಾಯಕ ಮತ್ತು ನಾಯಕಿ ಒಂದಾಗುವ ಪ್ರೇಮ ಕಥೆಯೇ ಗೌರಿಶಂಕರ.
ಆ ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಳ್ಳುವ ಮುನ್ನವೇ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರ ಕಾಣಲು ಮುಂದಾಗಿದೆ.

ವಿಶೇಷ ಎಂದರೆ, ಸ್ಯಾಂಡಲ್‌ವುಡ್ ಎವರ್ ಗ್ರೀನ್ ಸ್ಟಾರ್ ಹೀರೋ ರಮೇಶ್ ಅರವಿಂದ್ ಈ ಹೊಸ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಪ್ರೋಮೊಗಳು ರಿಲೀಸ್ ಆಗಿ ಗಮನ ಸೆಳೆದಿದೆ.
ಆಸೆ ಧಾರಾವಾಹಿಯ ನಿರ್ಮಾಪಕ ಯಾರು ಗೊತ್ತಾ..?
'ಪ್ರೀತಿಯಿಂದ ರಮೇಶ್' ಕಾರ್ಯಕ್ರಮವನ್ನು ಮತ್ತೆ ಪ್ರಸಾರ ಮಾಡಬೇಕು. ರಮೇಶ್ ಅವರನ್ನು ಕಿರುತೆರೆಯಲ್ಲಿ ಪ್ರತೀ ವೀಕೆಂಡ್ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಡುತ್ತಲೇ ಇದ್ದಾರೆ. ಆದರೆ, ರಮೇಶ್ ಕಿರುತೆರೆಯಲ್ಲಿ ಹೊಸ ಪ್ರಯತ್ನ ಒಂದನ್ನು ಮಾಡಿದ್ದಾರೆ. ತಾವೇ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಈ ಹಿಂದೆಯೇ ರಮೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅಭಿಮಾನಿಗಳನ್ನು ನಿಮ್ಮ ಬದುಕಿನಲ್ಲಿ ನಡೆದ ಅಸಮಾನ್ಯ ಕಥೆ ಇದ್ದರೆ, ನಮಗೆ ತಿಳಿಸಿ ಎಂದು ಹೇಳಿದ್ದರು. ಈಗ ಅಂತಹದ್ದೇ ಒಂದು ಅಸಾಮಾನ್ಯ ಕಥೆಯನ್ನು ಧಾರಾವಾಹಿ ರೂಪದಲ್ಲಿ ಜನರ ಮುಂದಿಡಲು ಸಜ್ಜಾಗಿದ್ದಾರೆ.
ಯಾರು ಯಾರು ಇದ್ದಾರೆ..?
ಅಸಾಮಾನ್ಯ ಕಥೆಗೆ 'ಆಸೆ' ಎಂದು ಹೆಸರಿಟ್ಟಿದ್ದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಾರಂಭಿಸಲಿದ್ದಾರೆ. ಮುಂದಿನ ಸೋಮವಾರ ಅಂದರೆ, ಡಿಸೆಂಬರ್ 11ರಿಂದ ಸಂಜೆ 7.30ಕ್ಕೆ ಆಸೆ ಧಾರಾವಾಹಿ ಪ್ರಸಾರವಾಗಲಿದೆ. ಇದರಲ್ಲಿ ನಟ ಮಂಡ್ಯ ರಮೇಶ್, ನಿನಾದ್ ಹರಿತ್ಸಾ, ಪ್ರಿಯಾಂಕಾ, ಸ್ನೇಹಾ ಈಶ್ವರ್, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ನಟಿಸುತ್ತಿದ್ದಾರೆ. ನಾಯಕ ಸೂರ್ಯನ ಪಾತ್ರದಲ್ಲಿ ನಿನಾದ್ ಕಾಣಿಸಿಕೊಂಡಿದ್ದು, ನಾಯಕಿ ಮೀನಾ ಪಾತ್ರವನ್ನು ನಟಿ ಪ್ರಿಯಾಂಕ ನಿಭಾಯಿಸಲಿದ್ದಾರೆ.

ಧಾರಾವಾಹಿಯ ಕಥೆ ಏನು..?
'ಆಸೆ' ಧಾರಾವಾಹಿಯಲ್ಲಿ ಸೂರ್ಯ ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆಯೊಂದರಿಂದ ತಾಯಿಯಿಂದ ನಿಂದನೆಗೆ ಒಳಗಾಗಿದ್ದು, ನಿತ್ಯ ದೂಷಿಸಲ್ಪಡುತ್ತಿರುತ್ತಾನೆ. ತಂದೆ ಒಬ್ಬನೇ ಮಗನ ಆಸೆ, ಕನಸು ಹಾಗೂ ಉಜ್ವಲ ಬದುಕಿಗೆ ನೀರೆರೆದು ಪೋಷಿಸುತ್ತಿರುತ್ತಾನೆ. ಮಗನ ಪ್ರತಿಯೊಂದು ಭಾವನೆಗಳಿಗೂ ತಂದೆ ಸ್ಪಂದಿಸುತ್ತಿರುತ್ತಾನೆ. ಹೀಗಾಗಿ ಸೂರ್ಯನಿಗೆ ತಂದೆಯೇ ಎಲ್ಲವೂ.
ಸೆಟ್‌ನಲ್ಲಿ ಅವಘಡ
ಬದುಕಿನಲ್ಲಿ ಗುರಿ, ಆಸೆ ಏನೂ ಇರದೇ, ಜೀವಿಸಬೇಕು ಎಂಬಂತೆ ಬದುಕುತ್ತಿರುತ್ತಾನೆ ಸೂರ್ಯ. ಆದರೆ, ಇತ್ತ ನಾಯಕಿಯ ಕಥೆಯೇ ಬೇರೆ. ಮೀನಾ ತನ್ನ ವಿದ್ಯಾಭ್ಯಾಸವನ್ನು ತ್ಯಜಿಸಿ, ಒಡಹುಟ್ಟಿದವರ ಭವಿಷ್ಯಕ್ಕಾಗಿ ಕೆಲಸ ಮಾಡಿ ಹಣ ಸಂಪಾದಿಸುತ್ತಿರುತ್ತಾಳೆ. ಮೀನಾ ಬಹಳ ಆಸೆ, ಕನಸುಗಳನ್ನು ಹೊತ್ತು ಜೀವನ ನಡೆಸುತ್ತಿರುತ್ತಾಳೆ. ಇವರಿಬ್ಬರ ಭೇಟಿ, ಇಬ್ಬರ ಬದುಕನ್ನು ಬದಲಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಧಾರಾವಾಹಿ ಸೆಟ್‌ನಲ್ಲಿ ಅವಘಡ ಸಂಭವಿಸಿ ನಟ ಮಂಡ್ಯ ರಮೇಶ್‌ಗೆ ಪೆಟ್ಟಾಗಿತ್ತು. ಬಳಿಕ ಅವರು ಚಿಕಿತ್ಸೆ ಪಡೆದಿದ್ದರು.
ಶೀರ್ಷಿಕೆ ಗೀತೆಗೆ ಅಭಿಮಾನಿಗಳು ಫಿದಾ
ಈಗಾಗಲೇ ಆಸೆ ಧಾರಾವಾಹಿಯ ಪ್ರೋಮೋ ಹಾಗೂ ಶೀರ್ಷಿಕೆ ಗೀತೆ ವೀಕ್ಷಕರನ್ನು ಸೆಳೆಯುತ್ತಿದೆ. ಆಸೆ ಧಾರಾವಾಹಿಯ ಶೀರ್ಷಿಕೆ ಗೀತೆನು ಗಾಯಕ ಕೀರ್ತನ್ ಹೊಳ್ಳ ಹಾಗೂ ಗಾಯಕಿ ಪೃಥ್ವಿ ಭಟ್ ಹಾಡಿದ್ದಾರೆ. ಈ ಶೀರ್ಷಿಕೆ ಗೀತೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸದ್ದು ಮಾಡುತ್ತಿದೆ. ವೀಕ್ಷಕರು ಧಾರಾವಾಹಿಯನ್ನು ನೋಡಲು ಕಾತುರರಾಗಿದ್ದಾರೆ. ಇನ್ನು ಈ ಧಾರಾವಾಹಿಯ ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮತ್ತೊಂದು ಧಾರಾವಾಹಿಯ ಪ್ರೋಮೋ ಕೂಡ ಪ್ರಸಾರಗೊಂಡಿದೆ. 'ಲಕ್ಷ್ಮೀ ಟಿಫನ್ ರೂಮ್' ಧಾರಾವಾಹಿ ಒಟ್ಟಿಗೆ ಬೆಳೆಯುವ ಸ್ನೇಹಿತೆಯರ ಕಥೆಯಾಗಿದೆ.


Click it and Unblock the Notifications











