ಹೊಸ ಸೀರಿಯಲ್.. ಹೊಸ ಪ್ರೊಮೋ.. ವೀಕ್ಷಕರ ಮನದಲ್ಲಿ ನೂರೆಂಟು ಪ್ರಶ್ನೆ
ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಹೊಸ ಧಾರಾವಾಹಿಯನ್ನು ಶುರು ಮಾಡಲು ಮುಂದಾಗಿದೆ. ಹೊಸ ಧಾರಾವಾಹಿಯ ಹೆಸರನ್ನು ವಾಹಿನಿ ರಿವೀಲ್ ಮಾಡಿದೆ.
ಆದರೆ ಹೊಸ ಧಾರಾವಾಹಿಯಲ್ಲಿ ನಟಿಸುವ ನಾಯಕ-ನಾಯಕಿ, ಪೋಷಕ ಪಾತ್ರಗಳ ಬಗ್ಗೆ ಮಾತ್ರ ಯಾವುದೇ ಸುದ್ದಿ ಬಿಟ್ಟುಕೊಟ್ಟಿಲ್ಲ.
ಧಾರಾವಾಹಿಯಲ್ಲಿ ಬರುವ ಪ್ರಮುಖ ಪಾತ್ರವಾದ ನಾಯಕಿಯ ಬಗ್ಗೆ ಒಂದು ಸಣ್ಣ ಝಲಕ್ ಕೊಟ್ಟಿದೆ. ಪ್ರೋಮೋ ನೋಡಿದ ವೀಕ್ಷಕರು ಕುತೂಹಲಗೊಂಡಿದ್ದಾರೆ.

ಹೊಸ ಕತೆಯ ಪ್ರೊಮೋ
ಕರ್ಲರ್ಸ್ ಕನ್ನಡ ವಾಹಿನಿ ತನ್ನ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹೊಸ ಧಾರಾವಾಹಿ ಪ್ರೊಮೋವನ್ನು ರಿಲೀಸ್ ಮಾಡಿದೆ. ಪ್ರೋಮೋದಲ್ಲಿ ಯಾವ ಪಾತ್ರಗಳನ್ನು ತೋರಿಸಿಲ್ಲ. ಬದಲಿಗೆ ದೊಡ್ಡ ಕೆರೆ ಅಥವಾ ನದಿಯ ಮಧ್ಯದಲ್ಲಿ ದೋಣಿ ಇದ್ದು, ಅದರಲ್ಲಿ ಹುಡುಗ ಹುಡುಗಿ ಹಾಗೂ ಒಬ್ಬ ನಾವಿಕನಿರುವ ಚಿತ್ರವನ್ನು ತೋರಿಸಲಾಗಿದೆ. ಹೂವಂತೆ ಅರಳುವ ಹುಡುಗಿ, ರಾತ್ರಿ ಬಾಡುವ ಭಯವಿಲ್ಲ ಇವಳಿಗೆ. ಹೆಮ್ಮೆಯಿಂದ ಅರ್ಪಿಸುವ ಹೊಸ ಕತೆ - ಶ್ರೀಗೌರಿ ಎಂದು ವಾಹಿನಿ ಬರೆದುಕೊಂಡಿದೆ. ಆದರೆ, ಧಾರಾವಾಹಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
ವೀಕ್ಷಕರ ನಿರೀಕ್ಷೆಯ ಕಮೆಂಟ್
ಪ್ರೊಮೋ ನೋಡಿದ ವೀಕ್ಷಕರು ಖುಷಿ ಪಟ್ಟರೂ ಕೂಡ ಹೆಸರು ನೋಡಿ ಕೊಂಚ ಬೇಸರಗೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿ, ಲಕ್ಷ್ಮಿ, ಗೌರಿ ಎಂಬ ಎರಡೂ ಹೆಸರನ್ನೂ ಬಿಡುವುದೇ ಇಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದು, ಮತ್ತೆ ಕೆಲವರು ಇದು ಮಂಗಳ ಗೌರಿ ಮಗಳ ಕಥೆ ಇರಬಹುದು ಎಂದು ಗೆಸ್ ಮಾಡಿದ್ದಾರೆ. ಪುಟ್ಟಗೌರಿ ಆಯ್ತು, ಬಳಿಕ ಮಂಗಳಗೌರಿ ಬಂದಳು ಈಗ ಶ್ರೀಗೌರಿ ಕತೆ ಅಂತಲೂ ಹೇಳಿದ್ದಾರೆ. ಇದು ರಾಮ್ ಜಿ ಅವರದ್ದೇ ಡೈರೆಕ್ಷನ್ ಅಂತ ಮತ್ತೆ ಕೆಲವರು ಗೆಸ್ ಮಾಡಿದ್ದಾರೆ.
ನಾಯಕ - ನಾಯಕಿ ಯಾರಾಗಬೇಕು?
ಕೆಲ ವೀಕ್ಷಕರು ಈ ಧಾರಾವಾಹಿಗೆ ರಂಜಿನಿ ರಾಘವನ್ ನಾಯಕಿಯಾಗಲಿ ಎಂದು ಬಯಸಿದ್ದರೆ, ಮತ್ತೆ ಕೆಲವರು ನಮ್ಮನೆ ಯುವರಾಣಿ ಜೋಡಿಗಳಾದ ದೀಪಕ್ ಗೌಡ ಮತ್ತು ಅಂಕಿತಾ ನಾಯಕ-ನಾಯಕಿ ಆಗಲಿ ಎಂದು ಕೇಳಿದ್ದಾರೆ. ಆದರೆ, ಈ ಧಾರಾವಾಹಿಯ ಒಂದು ವಿಚಾರ ಸೋಶಿಯಲ್ ಮೀಡಿಯಾದಿಂದಲೇ ರಿವೀಲ್ ಆಗಿದೆ.
'ಶ್ರೀಗೌರಿ' ಧಾರಾವಾಹಿಯ ನಿರ್ಮಾಣ
ಹೌದು, ಶ್ರೀಗೌರಿ ಧಾರಾವಾಹಿಯ ಪ್ರೋಮೋವನ್ನು ನಟ ಜಗನ್ ನಾಥ್ ನಿರ್ಮಿಸುತ್ತಿದ್ದಾರೆ ಎಂಬ ವಿಷಯ ಬಯಲಾಗಿದೆ. ನಟ ಜಗನ್ನಾಥ್ ಕೂಡ ಈ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ಅವರಿಗೆ ಗೆಳೆಯರು ಹಾಗೂ ಆಪ್ತರು ವಿಶ್ ಮಾಡಿದ್ದಾರೆ. 'ಲಕ್ಷಣ', 'ರಕ್ಷಾಬಂಧನ' ಹಾಗೂ 'ಗೃಹಪ್ರವೇಶ' ಧಾರಾವಾಹಿಯನ್ನು ನಟ ಜಗನ್ನಾಥ್ ಅವರೇ ನಿರ್ಮಿಸಿದ್ದರು. ಇದೀಗ 'ಶ್ರೀಗೌರಿ' ಧಾರಾವಾಹಿಯ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಟಿ ಅಮೂಲ್ಯ ಓಂಕಾರ್ ಗೌಡ ಹಾಗೂ ನಟ ಜಗನ್ ನಾಯಕ-ನಾಯಕಿ ಆಗಿ ನಟಿಸಬಹುದು ಎಂದು ಕೆಲವರು ಗೆಸ್ ಮಾಡಿದ್ದಾರೆ.
ನಟ ಜಗನ್ ಅವರ ಧಾರಾವಾಹಿಗಳು
ಇನ್ನು ನಟ ಜಗನ್ 'ಜೋಶ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ಜಗನ್ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀನಸ್ 5ರ ಸ್ಪರ್ಧಿಯಾಗಿ ಮತ್ತಷ್ಟು ಖ್ಯಾತಿಗಳಿಸಿದ್ದರು. ಜಗನ್ ನಟಿಸಿದ ಮೊದಲ ಧಾರಾವಾಹಿ 'ಪುನರ್ ವಿವಾಹ'. ಅದರ ನಂತರ ಇನ್ನು ಕೆಲವು ಧಾರಾವಾಹಿಗಳಲ್ಲಿ ಜಗನ್ ನಟಿಸಿದರು. 'ಗಾಂಧಾರಿ', 'ಸೀತಾ ವಲ್ಲಭ' ಧಾರಾವಾಹಿಗಳಲ್ಲಿಯೂ ಮಿಂಚಿದರು. 'ಸೀತಾ ವಲ್ಲಭ' ನಂತರ ಒಂದು ಬ್ರೇಕ್ ಪಡೆದ ಜಗನ್ ಬಳಿಕ 'ಲಕ್ಷಣ' ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡಿದರು. 'ಲಕ್ಷಣ' ಸೀರಿಯಲ್ ಅನ್ನು ನಿರ್ಮಾಣ ಮಾಡುವ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಸಹ ಆಗಿದ್ದರು.


Click it and Unblock the Notifications











