Ninaad Haritsa: ಮತ್ತೆ ಕಿರುತೆರೆಗೆ ಮರಳಿದ 'ನಾಗಿಣಿ 2'ಯ ನಿನಾದ್ ಹರಿತ್ಸ.. ಯಾವ ಧಾರಾವಾಹಿ ಗೊತ್ತಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'ರಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸಿ ಸೀರಿಯಲ್ ವೀಕ್ಷಕರ ಮನ ಗೆದ್ದ ನಿನಾದ್ ಹರಿತ್ಸ ಮರಳಿ ಬರುತ್ತಿದ್ದಾರೆ. ಹೌದು! 'ನಾಗಿಣಿ 2' ಧಾರಾವಾಹಿ ಮುಗಿದ ಬಳಿಕ ಸಹಜವಾಗಿ ಕಿರುತೆರೆಯಿಂದ ದೂರವಿದ್ದ ನಿನಾದ್ ಹರಿತ್ಸ ಇದೀಗ ಮತ್ತೆ ಕಿರುತೆರೆಗೆ ಮರಳಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಮೇಶ್ ಅರವಿಂದ್ ಅವರ ನಿರ್ಮಾಣದಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'ಯಲ್ಲಿ ನಾಯಕನಾಗಿ ನಿನಾದ್ ಹರಿತ್ಸ ಅಭಿನಯಿಸಲಿದ್ದಾರೆ.
ಅಂದ ಹಾಗೇ ಸಣ್ಣ ವಯಸ್ಸಿನಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಕಾಣಿಸಕೊಳ್ಳಬೇಕು ಎಂಬ ಬಯಕೆ ಹೊಂದಿದ್ದ ನಿನಾದ್ ಹರಿತ್ಸ ಬಾಲ ಕಲಾವಿದ ಕೂಡ ಹೌದು. 'ಟೈಂ ಪಾಸ್ ತೆನಾಲಿ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಿನಾದ್ ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ ಆರು ವರ್ಷ. ತದ ನಂತರ ಓದಿನ ಸಲುವಾಗಿ ನಟನೆಗೆ ವಿದಾಯ ಹೇಳಿದ ನಿನಾದ್ ಅವರು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ರಂಗಭೂಮಿಯಲ್ಲಿ.

ರಂಗಭೂಮಿ ಕಲಾವಿದರಾಗಿದ್ದ ಪ್ರಸನ್ನ ರಾವ್ ಹಾಗೂ ಮಾಲತಿ ರಾವ್ ದಂಪತಿಗಳ ಮಗನಾಗಿದ್ದ ನಿನಾದ್ ಅವರಿಗೆ ಕಲೆ ಎಂಬುದು ರಕ್ತಗರವಾಗಿ ಒಲಿದು ಬಂತು ಎಂದರೆ ತಪ್ಪಾಗಲಾರದು. ಚಿಕ್ಕಂದಿನಿಂದಲೇ ನಟನೆಯನ್ನು ನೋಡುತ್ತಾ ಬೆಳೆದ ನಿನಾದ್‌ಗೆ ಸಹಜವಾಗಿ ನಟನೆಯತ್ತ ಪ್ರೀತಿ ಮೂಡಿತ್ತು. ವಿದ್ಯಾಭ್ಯಾಸದ ಬಳಿಕ ತಕ್ಷ್ ಥಿಯೇಟರ್ಸ್ ಎಂಬ ರಂಗ ತಂಡ ಸೇರಿದ ನಿನಾದ್ ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿದರು.
ಮುಂದೆ ಬೇರೆ ಬೇರೆ ರಂಗ ತಂಡಗಳಲ್ಲಿ ಸಕ್ರಿಯವಾಗಿದ್ದುಕೊಂಡು, ನಾಟಕಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದ ನಿನಾದ್ ಬರೋಬ್ಬರಿ ಏಳು ವರ್ಷಗಳ ಕಾಲ ತಮ್ಮನ್ನು ತಾವು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಮುಂದೆ ಪೋಷಕರ ಒಪ್ಪಿಗೆ ಪಡೆದು ಕಿರುತೆರೆಯತ್ತ ಮುಖ ಮಾಡಿದ ನಿನಾದ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ' ಧಾರಾವಾಹಿಯಲ್ಲಿ ನಾಯಕಿಯ ತಮ್ಮನಾಗಿ ನಟಿಸಿ ಸೈ ಎನಿಸಿಕೊಂಡರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಅಗಸ್ತ್ಯನಾಗಿ ಅಭಿನಯಿಸಿದ್ದ ನಿನಾದ್ ಹರಿತ್ಸ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡ ಹ್ಯಾಂಡ್ ಸಮ್ ಹುಡುಗ. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಿಣಿ 2' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ನಿನಾದ್ ತಮ್ಮ ಉತ್ತಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ. ಕಿರುತೆರೆಯ ಜೊತೆಗೆ ಹತ್ತಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ನಟಿಸಿರುವ ನಿನಾದ್ ಅವರು 'ಪ್ರಯಾಣಿಕರ ಗಮನಕ್ಕೆ' ಎನ್ನುವ ಕಿರುಚಿತ್ರದಲ್ಲಿ ಶ್ರಿಪಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ 'ಆಸೆ' ಧಾರಾವಾಹಿಯ ನಾಯಕನಾಗಿ ನಿನಾದ್ ಹರಿತ್ಸ ತೆರೆ ಮೇಲೆ ಬರಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯು ಧಾರಾವಾಹಿಯ ಪ್ರೋಮೋವೊಂದನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.


Click it and Unblock the Notifications











