ನನ್ನ ತೊಡೆಯ ಭಾಗವನ್ನು ಸಿಗರೇಟ್‌ನಿಂದ ಸುಟ್ಟಿದ್ದ ; ಎಕ್ಸ್ ಬಾಯ್‌ಫ್ರೆಂಡ್ ವಿಕೃತಿ ನೆನೆದು ಕಣ್ಣೀರಾದ ನಟಿ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಹಣ, ಅಂತಸ್ತು, ಕೀರ್ತಿ, ಎಲ್ಲವೂ ಇರುವ ಕೆಲ ಸೆಲೆಬ್ರೆಟಿಗಳ ಬದುಕಿನಲ್ಲಿ ಒಮ್ಮೊಮ್ಮೆ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರನ್ನು ಇವರು ಹೆಚ್ಚು ಪ್ರೀತಿಸುತ್ತಾರೋ? ಅತಿಯಾಗಿ ಮೋಹಿಸುತ್ತಾರೋ? ಇನ್ನಿಲ್ಲದಂತೆ ಇಷ್ಟಪಡುತ್ತಾರೋ ? ಅವರೇ ಕಾಡಿಸಿ ಪೀಡಿಸಿ ನಿರಾಸೆಯನ್ನುಂಟು ಮಾಡುತ್ತಾರೆ.
ಇಷ್ಟೇ ಅಲ್ಲ ಇನ್ನೂ ಕೆಲ ಒಮ್ಮೆ ಮಾನಸಿಕ ದೈಹಿಕ ಕಿರುಕುಳವನ್ನು ಕೂಡ ಪ್ರೀತಿ-ಪ್ರೇಮದ ಹೆಸರಿನಲ್ಲಿ ನೀಡುತ್ತಾರೆ. ಈ ಸಂಬಂಧಗಳು ಎಷ್ಟೊಂದು ಟಾಕ್ಸಿಕ್ ಆಗಿರುತ್ತವೆ ಅಂದರೆ ಬದುಕೇ ಭಾರ ಎಂದು ಅನಿಸಲು ಶುರುವಾಗುತ್ತೆ. ಪ್ರೀತಿಯ ಹೆಸರಿನಲ್ಲಿ ಸಿಗುವ ಈ ನರಕಯಾತನೆಯಿಂದ ಹೊರ ಬರುವುದು ಸುಲಭ ಅಲ್ಲ. ವಿಕೃತ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಸತ್ಯ ಗೊತ್ತಾಗುವಷ್ಟರಲ್ಲಿ ನಡೆಯಬಾರದ್ದೆಲ್ಲ ನಡೆದು ಹೋಗಿರುತ್ತೆ. ಇದಕ್ಕೆ ಉದಾಹರಣೆಯಂತೆ ಇದೆ ನೀತಿ ಟೇಲರ್ ಅವರ ವೈಯಕ್ತಿಕ ಬದುಕು.

ಹೌದು, ನೀತಿ ಟೇಲರ್.. ಹರಿಯಾಣದ ಹುಡುಗಿ. ಕೇವಲ 15ರ ಪ್ರಾಯದಲ್ಲಿಯೇ ''ಪ್ಯಾರ್ ಕಾ ಬಂಧನ್'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ನೀತಿ ಟೇಲರ್ ಅವರಿಗೆ ತೆಲುಗು ಚಿತ್ರರಂಗ ರತ್ನಗಂಬಳಿ ಹಾಕಿ ಸ್ವಾಗತ ಕೋರಿತ್ತು.
ಇದಕ್ಕೆ ಕೈಗನ್ನಡಿ ಎಂಬಂತೆ ''ಮೆಮ್ ವಯಸುಕು ವಚ್ಚಾಮ್'' ಸೇರಿ ಮೂರು ವರ್ಷದಲ್ಲಿ ಮೂರು ತೆಲುಗು ಚಿತ್ರಗಳಲ್ಲಿ ಮಿಂಚಿದರು ನೀತಿ. ''ಕೈಸಿ ಯೇ ಯಾರಿಯಾ''.. ''ಗುಲಾಮ್''.. ''ಇಷ್ಕ್‌ಬಾಜ್''.. ಇವರ ಕೆಲ ಜನಪ್ರಿಯ ಧಾರಾವಾಹಿಗಳು.
ಇಂಥಾ ನೀತಿ ಸದ್ಯ ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ ''ಅಲಾಯನ್ಸ್''ನಲ್ಲಿ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಮಾತನಾಡುತ್ತಾ ಮಾತನಾಡುತ್ತಾ ತಮ್ಮ ಹಳೆಯ ಪ್ರೇಮ ಸಂಬಂಧ ನೆನೆದು ಭಾವುಕರಾಗಿದ್ದಾರೆ.
ಸೈಕೋ ಬಾಯ್‌ಫ್ರೆಂಡ್
ಕಾರ್ಯಕ್ರಮದಲ್ಲಿ ಮಿನಿ ಮಾಥುರ್.. ರೂಹಿ ದೇಸಾಯಿ ಮತ್ತು ದೆಲ್ಬರ್ ಆರ್ಯ ಜೊತೆ ಮಾತನಾಡುವ ಸಮಯದಲ್ಲಿ ತಮ್ಮ ಮಾಜಿ ಬಾಯ್‌ಫ್ರೆಂಡ್ ತಮಗೆ ಹೇಗೆಲ್ಲ ಹಿಂಸೆ ನೀಡಿದ್ದ ಎನ್ನುವುದನ್ನು ನೀತಿ ಹೇಳಿದ್ದಾರೆ.

ನನ್ನ ಎಕ್ಸ್ ಬಾಯ್‌ಫ್ರೆಂಡ್ ತುಂಬಾನೇ ವಿಚಿತ್ರ ಆಗಿದ್ದ, ಸೈಕೋ ರೀತಿ ಆಡುತ್ತಿದ್ದ ಎಂದು ಹೇಳಿರುವ ನೀತಿ ನನ್ನ ಮೇಲೆ ಆತ ಕೈ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಸಿಗರೇಟ್‌ನಿಂದ ತೊಡೆ ಭಾಗ ಸುಟ್ಟಿದ್ದ
ಅವತ್ತು ಅವನ ಬರ್ತ್‌ಡೇ ಇತ್ತು. ಆ ದಿನವನ್ನು ನಾನು ಯಾವತ್ತು ಮರೆಯಲು ಸಾಧ್ಯ ಇಲ್ಲ ಎಂದು ಹೇಳಿರುವ ನೀತಿ ಆ ದಿನ ಅವನು ನನ್ನ ಕೆನ್ನೆಗೆ ಹೊಡೆದ, ಇಷ್ಟೇ ಅಲ್ಲ ಇನ್ನೂ ಒಂದು ಸಲ ನನ್ನ ತೊಡೆಯ ಒಳಭಾಗವನ್ನು ಸಿಗರೇಟಿನಿಂದ ಸುಟ್ಟಿದ್ದ ಎಂದು ಹೇಳಿದ್ದಾರೆ. ಆ ಸುಟ್ಟಗಾಯದ ಗುರುತನ್ನು ಕೂಡ ತೋರಿಸಿ ಭಾವುಕರಾಗಿದ್ದಾರೆ. ಬರ್ತ್‌ಡೇಯಂದು ಅವನು ನನ್ನ ಕೆನ್ನೆಗೆ ಹೊಡೆದ ತಕ್ಷಣವೇ ನಾನು ಗುಡ್ ಬೈ ಹೇಳಿ ಅಲ್ಲಿಂದ ಹೊರ ಬಂದೆ, ಅದೇ ಕೊನೆ ಇನ್ಯಾವತ್ತು ಅವನ ಮುಖ ಕೂಡ ನಾನು ನೋಡಲು ಹೋಗಲಿಲ್ಲ ಎಂದಿದ್ದಾರೆ.
ನೋವಿನಿಂದ ಹೊರಬಂದು ಹೊಸ ಬದುಕು ರೂಪಿಸಿಕೊಂಡ ನೀತಿ
ಹೀಗೆ ಮಾಜಿ ಬಾಯ್‌ಫ್ರೆಂಡ್‌ನಿಂದ ದೈಹಿಕ ಮಾನಸಿಕ ಕಿರುಕುಳ ಅನುಭವಿಸಿದ್ದ ನೀತಿ, ಆ ನಂತರ 2020ರಲ್ಲಿ ಪರೀಕ್ಷಿತ್ ಬಾವಾ ಅವರ ಜೊತೆ ಮದುವೆಯಾದರು. ವಿಶೇಷ ಅಂದರೆ ಇವರ ಗಂಡ ಪರೀಕ್ಷಿತ್ ಬಾವಾ ಆರ್ಮಿ ಆಫೀಸರ್.
ಲಾಕ್‌ಡೌನ್ ಅವಧಿಯಾಗಿದ್ದ ಕಾರಣ ನೀತಿ ಕೂಡ ಮದುವೆಯಾದ ನಂತರ ಎರಡು ವರ್ಷ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದರು. ತೀರಾ ಇತ್ತೀಚೆಗೆ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತಾದರೂ ನೀತಿ ಈ ವದಂತಿಗಳ ಕುರಿತು ಹೆಚ್ಚೇನು ತಲೆ ಕೆಡಿಸಿಕೊಂಡಂತೆ ಇಲ್ಲ.


Click it and Unblock the Notifications