ಬಿಗ್ ಬಾಸ್ ನೆಮ್ಮದಿಗೆ ಭಂಗ ಇಲ್ಲ. 'ಜಾಲಿವುಡ್'ಗೆ ಬೀಗ ಹಾಕಿದ್ದರೂ ಶುರುವಾದ ಶೋ
ಯಾರು ಏನೇ ಹೇಳಲಿ. ಆದರೆ ''ಬಿಗ್ ಬಾಸ್'' ನೋಡುವ ಬಹುದೊಡ್ಡ ವರ್ಗ ಕರುನಾಡಿನಲ್ಲಿ ಇದೆ. ಇಲ್ಲದಿದ್ದರೆ ಜಾಲಿವುಡ್‌ನಲ್ಲಿನ ''ಬಿಗ್ ಬಾಸ್'' ಮನೆಗೆ ಮೊನ್ನೆಯ ದಿವಸ ಬೀಗ ಬಿದ್ದಾಗ ತಮ್ಮ ಮನೆಗೆ ಬಂದು ಯಾರೋ ಬೀಗ ಹಾಕಿದ್ದಾರೆ ಎಂಬಂತೆ ಯಾರು ವರ್ತಿಸುತ್ತಿರಲಿಲ್ಲ. ''ಬಿಗ್ ಬಾಸ್''ಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ಮಾಡುತ್ತಿರಲಿಲ್ಲ.
ಹಲವರು ''ಬಿಗ್ ಬಾಸ್'' ಮನೆಗೆ ಬೀಗ ಹಾಕಿದ್ದಕ್ಕೆ ಎಷ್ಟರ ಮಟ್ಟಿಗೆ ಮನಸಿಗೆ ಹಚ್ಚಿಕೊಂಡಿದ್ದರು ಎಂದರೆ ಇನ್ಮುಂದೆ ದಿನ ರಾತ್ರಿ ಯಾರ ಮನೆಯ ಜಗಳ ನೋಡಬೇಕೆನ್ನುವ ಚಿಂತೆ ಇವರನ್ನು ಕಾಡಲು ಶುರುವಾಗಿತ್ತು. ''ಬಿಗ್ ಬಾಸ್'' ಮನೆಯಲ್ಲಿದ್ದ ಸ್ಫರ್ಧಿಗಳ ಕಥೆ ಏನು..? ಅವರ ಮುಂದಿನ ಭವಿಷ್ಯವೇನು..? ಎಂದೆಲ್ಲಾ ಪ್ರಶ್ನೆಗಳು ಇವರ ಮನದಲ್ಲಿ ಗಿರಕಿ ಹೊಡೆಯಲು ಶುರುವಾಗಿದ್ದವು. ಮತ್ತೆ ''ಬಿಗ್ ಬಾಸ್'' ಧ್ವನಿ ನಮಗೆ ಕೇಳಿಸುವುದಿಲ್ವಾ ಎಂಬ ಆತಂಕ ಕೂಡ ಇವರಲ್ಲಿತ್ತು.

ಆದರೆ.. ಈ ಚಿಂತೆ ಈಗ ದೂರವಾಗಿದೆ. ''ಬಿಗ್ ಬಾಸ್'' ಮನೆಗೆ ಹಾಕಿದ್ದ ಬೀಗ ತೆಗೆಯಲಾಗಿದೆ. ಮತ್ತೆ ರಂಪ-ರಾಮಾಯಣಕ್ಕೆ ವೇದಿಕೆ ಸಿದ್ಧವಾಗಿದೆ. ಮನೆಯಾಚೆ ಹೋದ ಸ್ಫಧಿಗಳನ್ನು ಮತ್ತೆ ಮನೆಯೊಳಗೆ ಕಳುಹಿಸಲಾಗಿದೆ. ಇದರ ನಡುವೆ ಯಾರು ಇರಲಿ.. ಇಲ್ಲದಿರಲಿ.. ಯಾರೇನೇ ಮಾಡಿದರು ಕೂಡ ಕಾರ್ಯಕ್ರಮ ಮಾತ್ರ ನಿಲ್ಲಲ್ಲ ಎನ್ನುವ ಸಂದೇಶವನ್ನು ''ಬಿಗ್ ಬಾಸ್'' ರವಾನೆ ಮಾಡಿದೆ.
ಇಂದು ''ಬಿಗ್ ಬಾಸ್'' ಕಾರ್ಯಕ್ರಮದ ಹೊಸ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು ಈ ಪ್ರೋಮೊದಲ್ಲಿ ಬಣಗಡುತ್ತಿರುವ ''ಬಿಗ್ ಬಾಸ್'' ಮನೆಯನ್ನು ತೋರಿಸಲಾಗಿದೆ. ಬೆಡ್ ರೂಮ್.. ಅಡುಗೆ ಮನೆ.. ಲಿವಿಂಗ್ ರೂಮ್.. ಗಾರ್ಡನ್ ಏರಿಯಾ.. ಹೀಗೆ ಬೀಕೋ ಎನ್ನುತ್ತಿರುವ ಮನೆಯ ಆವರಣ ಹೊಂದಿರುವ ಈ ಪ್ರೋಮೊದಲ್ಲಿ ಎಂದಿನಂತೆ ಅದೇ ಸಮಯದಲ್ಲಿ. ''ಬಿಗ್ ಬಾಸ್'' ಕನ್ನಡ ರಾತ್ರಿ 0930ಕ್ಕೆ ಎಂದು ''ಬಿಗ್ ಬಾಸ್'' ಧ್ವನಿ ಕೇಳಿಸಿದೆ.
ಸದ್ಯ ಈ ಪ್ರೋಮೋ ನೋಡಿ ಹಲವರು ನಿಟ್ಟುಸಿರು ಬಿಟ್ಟಿದ್ದಾರೆ. ತಮಗಾದ ಖುಷಿಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಿಗೆ ಜೀವನ ಆದ್ರೆ, ಕೆಲವರಿಗೆ ಬಿಗ್ ಬಾಸ್ ಜೀವ, ಓ ಮತ್ತೆ ಶುರು ಆಯ್ತಾ ಬಿಗ್ ಬಾಸ್ ಸೂಪರ್, ಬಿಗ್ ಬಾಸ್ ಇಸ್ ಬ್ಯಾಕ್, ಕೋಟೆ ಒಡೆಯೋದು ಅಸಾಧ್ಯ, ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್‌ನ ತಡೆಯಲು ಯಾರಿಂದಲೂ ಸಾಧ್ಯ ಇಲ್ಲ ಎನ್ನುತ್ತಿದ್ದಾರೆ.
ಅಂದ್ಹಾಗೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆದೇಶದ ಮೇರೆಗೆ '' ಬಿಗ್ ಬಾಸ್''ನ ಮುಖ್ಯದ್ವಾರವನ್ನು ತೆರೆಯಲಾಗಿದೆ. ಆದರೆ ''ನ್ಯೂಸ್ 18 ಕನ್ನಡ'' ವರದಿಯ ಪ್ರಕಾರ ಮಾಲಿನ್ಯ ನಿತಂತ್ರಣಾ ಮಂಡಳಿಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಳುಹಿಸಿದ ನೊಟೀಸ್‌ಗೆ ಕ್ಯಾರೇ ಎನ್ನದ ''ಜಾಲಿವುಡ್''ಗೆ ಈಗಲೂ ಕೂಡ ಬೀಗ ಹಾಕಲಾಗಿದೆ.

ಈ ಕುರಿತು ''ನ್ಯೂಸ್ 18 ಕನ್ನಡ''ಗೆ ಮಾಹಿತಿಯನ್ನು ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೋಟಿಸ್ ಕೇವಲ 30 ಎಕರೆ ಜಾಗಕ್ಕೆ ಮಾತ್ರ ಸಂಬಂಧಿಸಿದೆ. ಈ ಭಾಗದಲ್ಲಿ ನೀರಿನ ಬಳಕೆ ಮತ್ತು ತ್ಯಾಜ್ಯ ನಿರ್ವಹಣೆಯ ಉಲ್ಲಂಘನೆಗಳು ಗಂಭೀರವಾಗಿದ್ದವು. ಆದರೆ, ಉಳಿದ 5 ಎಕರೆ ಜಾಗದ ಬಳಕೆ ಆಗದ ಕಾರಣ ನೋಟಿಸ್ ನೀಡಿರಲಿಲ್ಲ. ಈ 5 ಎಕರೆಯಲ್ಲಿ 1.5 ಎಕರೆ ಜಾಗದಲ್ಲಿ ''ಬಿಗ್ ಬಾಸ್'' ಸೆಟ್ ನಿರ್ಮಾಣಗೊಂಡಿದ್ದು, ಇದರಲ್ಲಿ ಯಾವುದೇ ಉಲ್ಲಂಘನೆಗಳು ದಾಖಲಾಗಿಲ್ಲ ಎಂದು ಹೇಳಿದ್ದಾರೆ. 30 ಎಕರೆ ಜಾಗಕ್ಕೆ ಮಾತ್ರ ನಾವು ನೊಟೀಸ್ ನೀಡಿದ್ದು 1.5 ಎಕರೆ ಆವರಣದಲ್ಲಿರುವ ''ಬಿಗ್ ಬಾಸ್''ಗೆ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಚಿತ್ರೀಕರಣವನ್ನು ಅವರು ಮುಂದುವರಿಸಬಹುದು ಎಂದು ಹೇಳಿದ್ದಾರೆ.


Click it and Unblock the Notifications











