ಬಿಗ್ ಬಾಸ್ 12 ಗ್ರ್ಯಾಂಡ್ ಫಿನಾಲೆ ಲೆಕ್ಕಾಚಾರ ; ಕಿರಿಕ್ ಕೀರ್ತಿ ಭವಿಷ್ಯ-ಇವರೇ ನೋಡಿ ಟಾಪ್ 5 ಸ್ಫರ್ಧಿಗಳು
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ. ವಿವಾದಾತ್ಮಕ ವ್ಯಕ್ತಿಗಳನ್ನು .. ವಿಚಿತ್ರ ವ್ಯಕ್ತಿಗಳನ್ನು...
ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿಯ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಬದಲಿಗೆ ಈ ಬಾರಿ ಹಿಂದಿನ ಹನ್ನೊಂದು ಸೀಸನ್‌ಗಳಲ್ಲಿ ಕಾಣಿಸದ ಭಿನ್ನ-ವಿಭಿನ್ನವಾದ ವ್ಯಕ್ತಿತ್ವಗಳನ್ನು ಹುಡುಕಿ ಮನೆಯ ಒಳಗಡೆ 19 ಜನರನ್ನು ಕಳುಹಿಸಲಾಗಿತ್ತು. ಆ ನಂತರ ಮತ್ತೆ ವೈಲ್ಡ್ ಕಾರ್ಡ್ ಮೂಲಕ 3 ಜನರನ್ನು ಮನೆಯೊಳಗೆ ಬಿಡಲಾಗಿತ್ತು.

ಆ ಪೈಕಿ ಸದ್ಯ 8 ಜನ ಮನೆಯೊಳಗಡೆ ಇದ್ದಾರೆ. ಇನ್ನು ಬಿಗ್ ಬಾಸ್ ಸದ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಹಿನ್ನೆಲೆ ಉಳಿದ 8 ಜನರಲ್ಲಿ ಯಾರು ಹೊರ ಬರುತ್ತಾರೆ, ಗ್ರ್ಯಾಂಡ್ ಫಿನಾಲೆಯವರೆಗೆ ಯಾರು ಹೋಗ್ತಾರೆ ಎನ್ನುವ ಕುತೂಹಲ ಹಲವರಲ್ಲಿದೆ.
ಈ ಕುತೂಹಲಕ್ಕೆ ''ಬಿಗ್ ಬಾಸ್ ಕನ್ನಡ'' 4 ರನ್ನರ್ ಅಪ್ ಕಿರಿಕ್ ಕೀರ್ತಿ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಕೊನೆಯಲ್ಲಿ ಉಳಿದುಕೊಳ್ಳುವ ಆ 5 ಜನ ಯಾರು ಎಂದು ಹೇಳಿದ್ದಾರೆ. ಎಲ್ಲರ ಗೇಮ್ ಪ್ಲ್ಯಾನ್‌ನ್ನು ವಿಶ್ಲೇಷಣೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗಿದ್ದರೆ.. ಕಿರಿಕ್ ಕೀರ್ತಿ ಕಂಡಂತೆ ಹೇಗಿದೆ ಈ ಬಾರಿಯ ಬಿಗ್ ಬಾಸ್..? ಯಾರೆಲ್ಲಾ ಟಾಪ್ 5ಗೆ ಹೋಗ್ತಾರೆ ಎಂದು ತಿಳಿಯಲು ಮುಂದೆ ಓದಿ.

ನಿಮ್ಮ ಪ್ರಕಾರ ಟಾಪ್ 5 ಯಾರು ಸ್ಫರ್ಧಿಗಳು ಯಾರು ?
''ಗಿಲ್ಲಿ..ರಕ್ಷಿತಾ.. ಅಶ್ವಿನಿ ಗೌಡ.. ರಘು.. ಕಾವ್ಯ.. ಈ 5 ಜನ ನನ್ನ ಪ್ರಕಾರ ಈ ಬಾರಿಯ ''ಬಿಗ್ ಬಾಸ್'' ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಾರೆ. ಇನ್ನು ಧ್ರುವಂತ್ ಮೊದಲು ಹೊರ ಬರ್ತಾರೆ. ಆ ನಂತರ ರಾಶಿಕಾ ಇದರ ನಡುವೆ ಧನುಷ್ ಹೊರ ಬರಬಹುದು. ಇನ್ನು ನಾನು ಗಮನಿಸಿದಂತೆ ಸೀಸನ್ 9ರ ನಂತರ ಗ್ರ್ಯಾಂಡ್ ಫಿನಾಲೆ ನಡೆಯುವ ವಾರದಲ್ಲಿ ಆರು ಜನರನ್ನು ಹೊರಗಡೆ ಕಳುಹಿಸಿದ್ದಾರೆ. ಈ ಬಾರಿ ಕೂಡ ಫಿನಾಲೆ ವಾರದಲ್ಲಿ ಆರು ಜನ ಹೊರ ಬರುವ ನಿರೀಕ್ಷೆ ಇದೆ'' ಎಂದಿದ್ದಾರೆ ಕಿರಿಕ್ ಕೀರ್ತಿ.
ಕಿರಿಕ್ ಕೀರ್ತಿ ಪ್ರಕಾರ ಈ ಬಾರಿ ಕಿರಿಕ್ ಜಾಸ್ತಿಯಾಯ್ತಾ ?
''ಬಿಗ್ ಬಾಸ್ ಮನೆ ಅಂದ ಮೇಲೆ ಅಲ್ಲಿ ಪ್ರತಿ ವರ್ಷ ಜಗಳ-ವಾಗ್ಯುದ್ದ ಇದ್ದೇ ಇರುತ್ತೆ. ಅದರ ಸ್ವರೂಪ ಪ್ರತಿವರ್ಷ ಬದಲಾಗುತ್ತಾ ಹೋಗುತ್ತೆ ಅಷ್ಟೇ. ಇನ್ನೂ ಭಿನ್ನ ವಿಭಿನ್ನವಾದ ವ್ಯಕ್ತಿತ್ವ ಹೊಂದಿರುವ ಜನ ಒಂದೇ ಕಡೆ ಇದ್ದಾಗ ಅಲ್ಲಿ ಈಗೋ ಕ್ಲ್ಯಾಶ್ ನಡೆದೇ ನಡೆಯುತ್ತೆ. ಅದು ಸಾಮಾನ್ಯ.
ಉದಾಹರಣೆಗೆ ಅಶ್ವಿನಿ ಗೌಡ ಅವರಿಗೆ ಅವರದ್ದೇ ಆದ ಇಮೇಜ್ ಹೊರಗಡೆ ಇದೆ. ಅವರು ಅದನ್ನು ಮನೆಯಲ್ಲಿಯೂ ಮುಂದುವರೆಸಿಕೊಂಡು ಹೋಗಬೇಕಾಗುತ್ತೆ. ಮತ್ತೊಂದು ಕಡೆ ರಾಶಿಕಾಗೆ ಕಾವ್ಯಾಗೆ ನಾವು ಸಿನಿಮಾ ಹೀರೋಯಿನ್ ಎನ್ನುವ ಭಾವನೆ ಇರುತ್ತೆ. ರಕ್ಷಿತಾ ಅವರಿಗೆ ನಾನು ಯೂಟ್ಯೂಬ್ ಮೂಲಕವೇ ಈ ಹಂತಕ್ಕೆ ಬಂದೇ ಎಂಬ ಹೆಮ್ಮೆ ಇರುತ್ತೆ. ಗಿಲ್ಲಿಗೆ ನಾನು ಮೂರು ಶೋ ವಿನ್ನರ್ ಎನ್ನುವ ಯೋಚನೆ ಇರುತ್ತೆ. ಧನುಷ್‌ಗೆ ನಾನು ಸೀರಿಯಲ್ ಸ್ಟಾರ್ ಎಂದಿರುತ್ತೆ. ರಘುಗೆ ನಾನು ಫಿಟ್ನೆಸ್ ಇಂಡಸ್ಟ್ರೀಯಲ್ಲಿ ರಾಜ್ಯ ಪ್ರಶಸ್ತಿ ಪಡೆದವನು ಎಂಬ ಭಾವನೆ ಇರುತ್ತೆ. ಎಲ್ಲರಿಗೂ ಅವರ ಅವರದ್ದೇ ಆದ ಘನತೆ ಇದೆ. ಆದರೆ ಈ ಘನತೆಗೆ ಧಕ್ಕೆ ಆದಾಗ ಯಾರು ಸಹಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಇದೆಲ್ಲವೂ ಸಹಜ ಎಂದು ವಿಶ್ಲೇಷಿಸಿದ್ದಾರೆ. ಬಿಗ್ ಬಾಸ್ ನಡೆಯುವುದೇ ಈ ತರ'' ಎಂದು ಕಿರಿಕ್ ಕೀರ್ತಿ ಹೇಳಿದ್ದಾರೆ.
ಸ್ಪಂದನಾ ಮೊದಲೇ ಹೊರಗಡೆ ಬರಬೇಕಿತ್ತಾ ?
''ಸ್ಪಂದನಾ ಬೇರೆಯವರ ಕಿರಿಕ್ ನಡುವೆ ಸಿಲುಕಿಕೊಳ್ಳಲಿಲ್ಲ. ನಾಮಿನೇಷನ್‌ದಿಂದ ಅವರು ಹಲವು ಬಾರಿ ಬಚಾವ್ ಆಗಿದ್ದಾರೆ. ಆದರೆ ಇದೇ ಸಮಯದಲ್ಲಿ ಸ್ಪಂದನಾಗಿಂತ ಒಂದು ಹೆಜ್ಜೆ ಸ್ಫರ್ಧೆಯಲ್ಲಿ ಹಿಂದೆ ಇದ್ದವರು ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಗ್ಲ್ಯಾಮರ್ ಅಂಶ ಕೂಡ ಮುಖ್ಯ. ಇಷ್ಟೇ ಅಲ್ಲ ರಂಪ-ರಾಮಾಯಣ ಮಾಡುವರ ನಡುವೆ ತನ್ನ ಪಾಡಿಗೆ ತಾನು ಇರುವ ವ್ಯಕ್ತಿ ಕೂಡ ಮುಖ್ಯ. ಅದು ಬೇಕು ಕೂಡ. ಇನ್ನು ಮನೆ ಮಗಳು ಎನ್ನುವ ಕಾರಣಕ್ಕೆ ಸ್ಪಂದನಾ ಅವರನ್ನು ಉಳಿಸಿಕೊಂಡರು ಎನ್ನುವ ಮಾತನ್ನು ನಾನು ಒಪ್ಪುವುದಿಲ್ಲ. ಯಾಕೆಂದರೆ ಆ ಪ್ರಕಾರ ನೋಡುವುದಾದರೆ ಕಲರ್ಸ್ ಕನ್ನಡ ಅವರು ಜಾಹ್ನವಿ ಅವರನ್ನು ಕೂಡ ಉಳಿಸಿಕೊಳ್ಳಬೇಕಿತ್ತು. ಕಲರ್ಸ್ ಕನ್ನಡ ವಾಹಿನಿಗೆ ಆಗಿರಲಿ ಅಥವಾ ಬಿಗ್ ಬಾಸ್ ತಂಡಕ್ಕೆ ಆಗಿರಲಿ, ಒಳ್ಳೆಯ ಪರ್ಫಾಮರ್ಸ್ ಬೇಕಿರುತ್ತೆ ಅಷ್ಟೇ'' ಎಂದಿದ್ದಾರೆ ಕಿರಿಕ್ ಕೀರ್ತಿ.

ಬಿಗ್ ಬಾಸ್ ಆಟ ಅಂದರೆ ಅದೇ
''ಬಿಗ್ ಬಾಸ್ ಮನೆಯಲ್ಲಿ ಕೊನೆ ಕೊನೆಗೆ ಗುಂಪಲ್ಲಿ ಆಡಲು ಸಾಧ್ಯವಾಗಲ್ಲ. ಅಳಿವು ಉಳಿವಿನ ಪ್ರಶ್ನೆಯಾದ ಕಾರಣಕ್ಕೆ ಅಲ್ಲಿ ಉಳಿಯಬೇಕು ಅಂದರೆ ಯಾರನ್ನಾದರೂ ಮುಗಿಸಲೇಬೇಕು. ಇದಕ್ಕೆ ಉದಾಹರಣೆ ಎನ್ನುವಂತೆ ರಘು ಅವರನ್ನೇ ಮೊನ್ನೆ ಮೊನ್ನೆ ರಕ್ಷಿತಾ ನಾಮಿನೇಟ್ ಮಾಡಿದರು. ಬಿಗ್ ಬಾಸ್ ಅಂದ್ರೇನೇ ಹಾಗೇ. ಭಿನ್ನ-ವಿಭಿನ್ನ ವ್ಯಕ್ತಿಗಳು ಅಲ್ಲಿ ಇರಲೇಬೇಕು. ವಿನಯ್ ಇದ್ದ ಮೇಲೆ ಅಲ್ಲಿ ಸಂಗೀತಾ ಇರಬೇಕು. ಪ್ರಥಮ್ ಇದ್ದ ಮೇಲೆ ಅಲ್ಲಿ ಕೀರ್ತಿ ಇರ್ಲೇಬೇಕು. ಹೀಗಿದ್ದಾಗಲೇ ಬಿಗ್ ಬಾಸ್ ಮಜಾ'' ಎನ್ನುತ್ತಾರೆ ಕಿರಿಕ್ ಕೀರ್ತಿ.
ಕಳೆದ ಹನ್ನೊಂದು ಸೀಸನ್‌ಗಿಂತ ಈ ಸೀಸನ್ ಉತ್ತಮನಾ..? ಕಳಪೆನಾ..?
''ನನಗೆ ವ್ಯೆಯಕ್ತಿಕವಾಗಿ ಈ ಬಾರಿಯ ಬಿಗ್ ಬಾಸ್ ನನಗೆ ತುಂಬಾ ಖುಷಿ ಕೊಡ್ತು. ಹನ್ನೊಂದು ಸೀಸನ್‌ಗೆ ಹೋಲಿಸಿದರೆ ಅತೀ ಹೆಚ್ಚು ಮನರಂಜನಾತ್ಮಕವಾದ ಸೀಸನ್ ಇದು. ಅದಕ್ಕೆ ಕಾರಣ ಮತ್ತದೇ ಸ್ಫರ್ಧಿಗಳ ಕ್ವಾಲಿಟಿ. ಸಂಗೀತಾ ಶೃಂಗೇರಿ, ಮಾಳವಿಕಾ, ಶೀತಲ್, ಹೀಗೆ ಕೆಲವರನ್ನು ಹೊರತು ಪಡಿಸಿದರೆ ತುಂಬಾನೇ ಖಡಕ್ ಆದ ಮಹಿಳಾ ಸ್ಫರ್ಧಿ ಎಲ್ಲರಿಗೆ ಕಾಣಿಸಿದ್ದು ಅಶ್ವಿನಿ ಅವರೇ.
ಇನ್ನು ರಕ್ಷಿತಾ ಈ ಬಾರಿಯ ಅಚ್ಚರಿ. ನನ್ನ ಪ್ರಕಾರ ''ಬಿಗ್ ಬಾಸ್''ನವರು ಕೂಡ ರಕ್ಷಿತಾ ಈ ತರ ಆಡಬಹುದು, ಮಾತನಾಡಬಹುದು, ಇಡೀ ಮನೆಯನ್ನು ಎದುರು ಹಾಕಬಹುದು ಎಂಬ ಊಹೆಯನ್ನು ಕೂಡ ಮಾಡಿರಲ್ಲ ಅನ್ಸುತ್ತೆ. ಧ್ರುವಂತ್ ಅವರ ವರ್ತನೆಯಲ್ಲಿನ ಬದಲಾವಣೆ ನೋಡುಗರಿಗೆ ಕಿರಿಕಿರಿ ಆಗಬಹುದು. ಆದರೆ ಧ್ರುವಂತ್ ಎಲ್ಲರನ್ನು ಟ್ರಿಗರ್ ಮಾಡುವ ವ್ಯಕ್ತಿ. ಅಂತಹವರು ಕೂಡ ಬೇಕೆ ಬೇಕು. ಗಿಲ್ಲಿ ಕೂಡ ಅದೇ ರೀತಿ. ಇನ್ನು ಪ್ರಮುಖವಾದ ವಿಚಾರ ಅಂದರೆ ಬಿಗ್ ಬಾಸ್ ಅಂದರೆ ಮನೆಯಲ್ಲಿ ಇರುವ ವ್ಯಕ್ತಿಗಳಿಗಾಗಿ ಆಡುವುದು ಅಲ್ಲ, ಮನೆಯ ಹೊರಗಡೆ ಅಂದರೆ ಮನೆಯನ್ನು ಯಾರು ನೋಡ್ತಿದ್ದಾರೆ ಅವರಿಗೋಸ್ಕರ ಆಡಬೇಕಾದ ಆಟ. ಗಿಲ್ಲಿ ಈ ಮಾತನ್ನು ತುಂಬಾನೇ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ಸುದೀಪ್ ಸರ್ ಕೂಡ ಮೊನ್ನೆ ಈ ಮಾತನ್ನೇ ಹೇಳಿದ್ದಾರೆ'' ಎಂದು ಕಿರಿಕ್ ಕೀರ್ತಿ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











